ಎರಡು ವರ್ಷಗಳ ಬಳಿಕ ಓಡಿದ ನೂರಾರು ಮಂದಿ

ಮೈಸೂರು, ನ.14(ಆರ್‍ಕೆಬಿ)- ತುಂತುರು ಮಳೆ, ಶೀತ ವಾತಾವರಣದ ನಡುವೆ 1,800ಕ್ಕೂ ಹೆಚ್ಚು ಓಟ ಗಾರರು ಭಾನುವಾರ ಬೆಳಗ್ಗೆ ಮೈಸೂರಿನ ವಿವಿಧ ಬೀದಿಗಳಲ್ಲಿ ಓಡುವ ಮೂಲಕ ಸೆಲಬ್ರೆಷನ್ ಮೈಸೂರು ಮ್ಯಾರಥಾನ್‍ನಲ್ಲಿ ಭಾಗವಹಿಸಿದ್ದರು. ಎರಡು ವರ್ಷ ಗಳ ಕೋವಿಡ್ ನಿರ್ಬಂಧಗಳ ತೆರವಿನ ಬಳಿಕ ಸೆಲ ಬ್ರೆಷನ್ ಮೈಸೂರು ಮ್ಯಾರಥಾನ್‍ನಲ್ಲಿ ನಡೆದಿದ್ದು, ಓಟ ಗಾರರು ಹೊಸ ಹುರುಪಿನಿಂದ ಭಾಗವಹಿಸಿದ್ದರು.

ಸ್ಪೋಟ್ರ್ಸ್ ಮ್ಯಾನೇಜ್‍ಮೆಂಟ್ ಕಂಪನಿಯಾದ ಲೈಫ್ ಈಸ್ ಕಾಲಿಂಗ್, ಸೆಲೆಬ್ರೆಷನ್ ಮೈಸೂರು ಮ್ಯಾರಥಾನ್‍ನ 11ನೇ ಆವೃತ್ತಿಯನ್ನು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಚಾಲನೆ ನೀಡಿ ದರು. 10ಕೆ, 30ಕೆ ಮತ್ತು ಹಾಫ್ ಮ್ಯಾರಥಾನ್, ಫುಲ್ ಮ್ಯಾರಥಾನ್ ಸ್ಪರ್ಧೆಗಳು ನಡೆದವು.

ಪುರುಷ ಮತ್ತು ಮಹಿಳೆಯರು ಓಟದಲ್ಲಿ ಭಾಗವಹಿಸಿದ್ದರು. ಇದೇ ಮೊದಲ ಬಾರಿಗೆ 36 ಅಂಧ ಓಟಗಾರರು, ಗೈಡ್ ರನ್ನರ್ಸ್ ಜೊತೆಗೆ ಭಾಗವಹಿಸಿದ್ದು ವಿಶೇಷವಾಗಿತ್ತು. ಮೈಸೂರಿನವರೇ ಆದ ದೃಷ್ಟಿ ದೋಷವುಳ್ಳ ಸಂಜಯ್ `ಮೈಸೂರು ಮಿತ್ರ’ದೊಂದಿಗೆ ಮಾತನಾಡಿ, ಓಟದಲ್ಲಿ ಭಾಗವಹಿಸಲು ನನಗೆ ತುಂಬಾ ಸಂತೋಷವಾಗಿದೆ. ನಾನು ಅಂಧ ಎಂದು ನನಗೆ ಅನಿಸಲೇ ಇಲ್ಲ. ಗೈಡ್ ರನ್ನರ್ಸ್ ಇಂಡಿಯಾದ ಡಾ.ಭೂಮಿಕಾ ಪಟೇಲ್ ಅವರು ನಮಗೆ ಉತ್ತಮ ರೀತಿಯ ತರಬೇತಿ ನೀಡಿದ್ದಾರೆ ಎಂದು ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಅಂಧ ಓಟಗಾರರು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಲು ಗೈಡ್ ರನ್ನರ್ಸ್‍ಗಳ ಕೊರತೆ ಇದೆ. ಆಸಕ್ತರು ನಮ್ಮಂತಹ ದೃಷ್ಟಿಹೀನರನ್ನು ಬೆಂಬಲಿಸಲು ಗೈಡ್ ರನ್ನರ್ಸ್ ಆಗಿ ಕೈಜೋಡಿಸಬಹುದು. ನಮಗೆ ಸಹಾನುಭೂಮಿ ಅಗತ್ಯವಿಲ್ಲ. ಆದರೆ ನಮಗೆ ಬೆಂಬಲ ಬೇಕು ಎಂದರು. ಬೆಂಗಳೂರಿನಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಮತ್ತೋರ್ವ ಅಂಧ ಓಟಗಾರ ವಿಜಯ್‍ಕುಮಾರ್ ಕೂಡ ತಾವು ಓಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಟ್ಟದ್ದಕ್ಕಾಗಿ ಲೈಫ್ ಈಸ್ ಕಾಲಿಂಗ್, ಗೈಡ್ ರನ್ನರ್ಸ್ ಇಂಡಿಯಾ, ಥಾಟ್ ಫೋಕಸ್ ಸಂಸ್ಥೆಗಳಿಗೆ ಕೃತಜ್ಞತೆ ತಿಳಿಸಿದರು.

ಸ್ಪೋಟ್ರ್ಸ್ ಮ್ಯಾನೇಜ್‍ಮೆಂಟ್ ಸಂಸ್ಥೆಯಾದ ಲೈಫ್ ಈಸ್ ಕಾಲಿಂಗ್ ಓಟದ ನಿರ್ದೇಶಕ ಪಿ.ವಿ.ಸುನೀಲ್ ಮಾತನಾಡಿ, ಕೋವಿಡ್ ಕಾರಣದಿಂದಾಗಿ ಎರಡು ವರ್ಷ ದಿಂದ ಈ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ರಾತ್ರಿಯಿಡಿ ಸುರಿದ ಮಳೆಯ ಆತಂಕದ ನಡುವೆ ಆಯೋಜಿಸಲಾಯಿತು. ಓಟ ಪ್ರಾರಂಭವಾಗುವ ಹೊತ್ತಿಗೆ ಸರಿಯಾಗಿ ಮಳೆ ಕಡಿಮೆಯಾಗಿದ್ದು, ಓಟಗಾರರಿಗೆ ಖುಷಿ ಎನಿಸಿತು. ಓಟಗಾರರು ಉತ್ತಮ ಹವಾಮಾನದಲ್ಲಿ ಓಡಿ ಆನಂದಿಸಿದರು ಎಂದರು. ಶಾಸಕ ಎಸ್.ಎ.ರಾಮದಾಸ್, ಈವೆಂಟ್ ಬ್ರಾಂಡ್ ಅಂಬಾಸಿಡರ್ ಡಾ.ಉಷಾ ಹೆಗ್ಡೆ, ಥಾಟ್ ಫೋಕಸ್‍ನ ನವೀನ್, ಜಿಎಸ್‍ಎಸ್ ಫೌಂಡೇಷನ್‍ನ ಶ್ರೀಹರಿ, ಗೈಡ್ ರನ್ನರ್ಸ್ ಇಂಡಿಯಾದ ಡಾ.ಭೂಮಿಕಾ ಪಟೇಲ್, ಪೂಜಾರಾವ್ ಇನ್ನಿತರರು ಉಪಸ್ಥಿತರಿದ್ದರು.