ಹುಣಸೂರು ಉಪಚುನಾವಣೆ ಗೆಲುವು ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಗೆಲುವಿಗೆ ನಾಂದಿ

ಕೃತಜ್ಞತಾ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ
ಮೈಸೂರು, ಜ.20(ಎಂಕೆ)- ವಿಧಾನ ಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ಗೆಲುವು, ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವಿಗೆ ನಾಂದಿಯಾಗಲಿದೆ. ವಿಶ್ವನಾಥ್ ಪಕ್ಷಾಂತರ, ಗೆಲ್ಲಲೇಬೇಕೆಂಬ ಸಂಕಲ್ಪ, ಕಾರ್ಯಕರ್ತರ ಸಂಘಟಿತ ಪ್ರಚಾರ ಗೆಲುವಿಗೆ ಕಾರಣವಾಯಿತು ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ‘ಹುಣ ಸೂರು ಉಪಚುನಾವಣೆ-2019 ಕೃತಜ್ಞತಾ ಸಭೆ’ಯಲ್ಲಿ ಮಾತನಾಡಿದ ಅವರು, ಹುಣ ಸೂರು ಕ್ಷೇತ್ರದಲ್ಲಿ ನಡೆದ ಹೋರಾಟ ರಾಜ್ಯವ್ಯಾಪಿ ನಡೆದರೆ, ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ವನಾಥ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗಲೇ, ಮಂಜುನಾಥ್ ಉಪಚುನಾ ವಣೆಯಲ್ಲಿ ಗೆಲ್ಲುವುದು ಗ್ಯಾರಂಟಿಯಾಗಿತ್ತು. ಆಗಲೇ ನೀನೇ ಅಭ್ಯರ್ಥಿ ಎಂದು ಮಂಜು ನಾಥ್‍ಗೂ ಸೂಚನೆ ನೀಡಿದ್ದೆ. ವಿಶ್ವನಾಥ್ ಒಂದು ವರ್ಷದಲ್ಲೇ ತಮ್ಮ ಹೆಸರನ್ನು ಕೆಡಿಸಿ ಕೊಂಡರು. ಜೆಡಿಎಸ್‍ನಿಂದ ಬಿಜೆಪಿಗೆ ಹೋದ ಮೇಲೆ ಅಲ್ಲಿನ ಮತದಾರರೇ ವಿಶ್ವನಾಥ್ ವಿರುದ್ಧ ಪ್ರಚಾರ ಮಾಡಲು ಪ್ರಾರಂಭಿಸಿದ್ದರು. ಜತೆಗೆ ಮಂಜುನಾಥ್‍ಗೆ ಯಾವುದೇ ಕಪ್ಪುಚುಕ್ಕೆ ಇಲ್ಲದಿರುವುದು ಗೆಲುವಿಗೆ ಮುಖ್ಯ ಕಾರಣವಾಯಿತು. ಮಂಜು ನಾಥ್ ಗೆಲುವು ಅವರೊಬ್ಬರದಲ್ಲ. ನಮ್ಮೆಲರ ಗೆಲುವು. ಈ ಭಾಗದಲ್ಲಿ ಮುಂದಿನ ಚುನಾ ವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನ ಪುನಶ್ಚೇತನವಾಗಿದೆ ಎಂದರು.

ಬಿಜೆಪಿ-ಜೆಡಿಎಸ್‍ಗೆ ಬುನಾದಿಯೇ ಇಲ್ಲ: ಮೈಸೂರು, ಚಾ.ನಗರ ಭಾಗದಲ್ಲಿ ಬಿಜೆಪಿ -ಜೆಡಿಎಸ್‍ಗೆ ಭದ್ರ ಬುನಾದಿಯೇ ಇಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಸೇರಿ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡಿದವು. ಕಾಂಗ್ರೆಸ್ ಕಾರ್ಯಕರ್ತರು ನಾನು ಮುಖ್ಯಮಂತ್ರಿ ಯಾಗಿದ್ದಾಗ ನೀಡಿದ ಅನುದಾನಗಳ ಬಗ್ಗೆ ಗಟ್ಟಿಯಾಗಿ ಮತದಾರರಿಗೆ ತಿಳಿಸುವಲ್ಲಿ ವಿಫಲವಾದ್ದರಿಂದ ವಿರೋಧಿಗಳ ಅಪಪ್ರಚಾರ ಮೇಲುಗೈ ಸಾಧಿಸಿತು. ಅಲ್ಲದೆ 25 ರಿಂದ 30 ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದ್ದವು ಎಂದು ತಿಳಿಸಿದರು.

ಸಿದ್ದರಾಮಯ್ಯ ಹಿಂದೂ ಧರ್ಮವನ್ನು ಒಡೆದು ಹಾಕುತ್ತಾರೆ, ವೀರಶೈವ ಲಿಂಗಾ ಯಿತರನ್ನು ಬೇರ್ಪಡಿಸುತ್ತಾರೆ ಎಂದೆಲ್ಲಾ ಅನಗತ್ಯ ಅಪಪ್ರಚಾರಗಳನ್ನು ಬಿಜೆಪಿ, ಜೆಡಿಎಸ್ ಮತ್ತಿತರರು ಸಂಘಟನೆಗಳು ವ್ಯವಸ್ಥಿತವಾಗಿ ಮಾಡಿದವು. ಕಾಂಗ್ರೆಸ್ ಮತ್ತೆ ಗೆದ್ದರೆ, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುತ್ತಾನೆ, ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮಾಧಿಯಾಗುತ್ತದೆ ಎಂದು ಒಳಗೊಳಗೆ ಪಿತೂರಿ ನಡೆಸಿದರು. ಆದರೆ ಉಪಚುನಾವಣೆಯಲ್ಲಿ ಇದು ನಡೆಯಲಿಲ್ಲ ಎಂದು ಹೇಳಿದರು.

ಪರಿಶಿಷ್ಟ ಜಾತಿ-ಪಂಗಡಕ್ಕೆ ವಿಶೇಷ ಅನುದಾನ: ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಕಾನೂನು ಮಾಡಿ, ಅವರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‍ನಲ್ಲಿ ವಿಶೇಷ ಅನು ದಾನವನ್ನು ನೀಡಿದ್ದೇವೆ. ಈ ಕೆಲಸವನ್ನು ತೆಲಂಗಾಣ ಬಿಟ್ಟರೇ ದೇಶದ ಬೇರೆ ಯಾವ ರಾಜ್ಯದಲ್ಲಿಯೂ ಮಾಡಿಲ್ಲ. ಕುಮಾರಸ್ವಾಮಿ ಬಜೆಟ್ ಮಂಡಿಸುವಾಗ ಇದನ್ನು 1 ಕೋಟಿಯವರೆಗೆ ಹೆಚ್ಚಿಸಬೇಕು ಎಂದು ಹೇಳಿದ್ದೇ. ಆದರೆ ಮಾಡಲಿಲ್ಲ. ಕಳೆದ ಐದು ವರ್ಷಗಳಲ್ಲಿ ನಮ್ಮ ಸರ್ಕಾರ ಜಾರಿಗೆ ತಂದ ಕಾರ್ಯಕ್ರಮಗಳನ್ನು ಜನ ಈಗ ನೆನೆದುಕೊಳ್ಳುತ್ತಿದ್ದಾರೆ. ಅದರ ಫಲವೇ ಹುಣಸೂರು ಗೆಲುವು ಎಂದರು.

ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಮಾತನಾಡಿ, ಹೋರಾಟ, ವ್ಯಕ್ತಿತ್ವ ಇದ್ದರೆ ನೈತಿಕತೆ ತನಗೆ ತಾನೆ ಬರುತ್ತದೆ. ಹಾಗಾಗಿ ಕಾಂಗ್ರೆಸ್ ಪಕ್ಷ ವರ್ಚಸ್ಸುಳ್ಳ ನಾಯಕತ್ವಕ್ಕೆ ಮನ್ನಣೆ ನೀಡಿದ್ದಲ್ಲಿ ಮುಂದಿನ ಚುನಾವಣೆ ಯಲ್ಲಿ ಪಕ್ಷ ಅಧಿಕಾರಕ್ಕೆ ಬರುತ್ತದೆ. ಹುಣ ಸೂರು ಮಾದರಿಯಲ್ಲೇ ರಾಜ್ಯಾದ್ಯಂತ ಪಕ್ಷವನ್ನು ಸಂಘಟಿಸಬೇಕು ಎಂದು ಅಭಿಪ್ರಾಯಪಟ್ಟರು.

ಒಂದು ಪ್ರಬಲ ಕೋಮುವಾದಿ ಜಾತಿಯ ಬೆಂಬಲ ಪಡೆದ ಅಭ್ಯರ್ಥಿಯಿದ್ದರೂ ಸಿದ್ದ ರಾಮಯ್ಯ ನಾಯಕತ್ವದ ಸರ್ಕಾರ ನೀಡಿದ ಜನಪರ ಕೊಡುಗೆಯಿಂದ ಹುಣಸೂರಿನಲ್ಲಿ ಮಂಜುನಾಥ್‍ಗೆ ಜಯ ದೊರಕಿತು. ಜಾತಿಯ ಬೆಂಬಲದ ಕೊರತೆಯಲ್ಲೂ ಮಂಜು ನಾಥ್ ಎಲ್ಲಾ ಸಮುದಾಯಕ್ಕೆ ನೀಡಿದ ಸೇವೆಯಿಂದ ಗೆದ್ದಿದ್ದಾರೆ. ಯಾವುದೇ ಚಾರಿತ್ರಿಕ ಹಿನ್ನಲೆ ಇಲ್ಲದ ಪಕ್ಷಗಳು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಸಮಾಜ ದಲ್ಲಿ ಕೋಮುವಾದವನ್ನು ಉಂಟು ಮಾಡುತ್ತಿವೆ ಎಂದು ಕಿಡಿಕಾರಿದರು.

ಸಭೆಯಲ್ಲಿ ಮಾಜಿ ಸಚಿವ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನಾ, ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ಜಯಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಪುಟ್ಟಸಿದ್ದಶೆಟ್ಟಿ, ಅರುಣ್ ಮಾಚಯ್ಯ, ನಗರಾಧ್ಯಕ್ಷ ಆರ್,ಮೂರ್ತಿ, ಜಿಲ್ಲಾಧ್ಯಕ್ಷ ಬಿ.ಜೆ.ವಿಜಯ್‍ಕುಮಾರ್, ಜಿಪಂ ಉಪಾಧ್ಯಕ್ಷೆ ಗೌರಮ್ಮ, ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.