ಲೋಕಸಭೆ, ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ ಹೈದರಾಬಾದ್ ಅತ್ಯಾಚಾರ ಪ್ರಕರಣ: ಕಠಿಣ ಕಾನೂನಿಗೆ ಸಿದ್ಧ ಎಂದ ಸರ್ಕಾರ

ನವದೆಹಲಿ, ಡಿ.2-ಹೈದರಾಬಾದ್‍ನಲ್ಲಿ ಪಶುವೈದ್ಯೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಅತ್ಯಾಚಾರ ಪ್ರಕರಣವನ್ನು ಹಿಡಿದು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷದ ಸದಸ್ಯರು ಲೋಕಸಭೆಯಲ್ಲಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಸ್ಪೀಕರ್ ಓಂ ಬಿರ್ಲಾ ಅವರು ಶೂನ್ಯ ಅವಧಿಯಲ್ಲಿ ಪ್ರಕರಣವನ್ನು ಚರ್ಚೆಗೆ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.

ಈ ನಡುವೆ ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಪಶುವೈದ್ಯೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಇಡೀ ದೇಶ ನಾಚಿಕೆ ಯಿಂದ ತಲೆತಗ್ಗಿಸುವಂತಾಗಿದೆ. ಪ್ರತಿಯೊಬ್ಬರಿಗೂ ಪ್ರಕರಣದಿಂದ ನೋವಾಗಿದೆ. ಆರೋಪಿ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಕಠಿಣ ಶಿಕ್ಷೆ ವಿಧಿಸಬೇಕು. ಅತ್ಯಾಚಾರ ಪ್ರಕರಣಗಳ ಕುರಿತಂತೆ ಕಠಿಣ ಕಾನೂನು ತರಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದಾರೆ. ಬಳಿಕ ಮಾತನಾಡಿರುವ ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು, ಹೊಸ ಕಾನೂನಿನ ಅಗತ್ಯವಿಲ್ಲ. ರಾಜಕೀಯ ಶಕ್ತಿ, ಆಡಳಿತ ಶಕ್ತಿ, ಬದಲಾದ ಮನಸ್ಥಿತಿಯ ಅಗತ್ಯವಿದೆ. ಇವೆಲ್ಲವೂ ಇದ್ದರೆ ಸಾಮಾಜಿಕ ಭೂತಗಳನ್ನು ಹತ್ಯೆ ಮಾಡಬಹುದು ಎಂದಿದ್ದಾರೆ.