ಖರ್ಗೆ ಸಿಎಂ ಮಾಡಿ ಎಂದೆ, ಆದರೆ ಕಾಂಗ್ರೆಸ್‍ನವರು ನಿಮ್ಮ ಮಗನೇ ಸಿಎಂ ಆಗಲಿ ಎಂದು ದುಂಬಾಲು ಬಿದ್ದರು

ಅರಸೀಕೆರೆ: ನಾನು ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಹೇಳಿದ್ದೆ. ಆದರೆ, ಕಾಂಗ್ರೆಸ್ ನವರು ನಿಮ್ಮ ಮಗ ಕುಮಾರಸ್ವಾಮಿ ಅವರನ್ನೇ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಿ, ತೀವ್ರ ಒತ್ತಡ ಹೇರಿದ ಕಾರಣ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ನಾನು ಒಪ್ಪಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹೇಳಿದರು.

ಅರಸೀಕೆರೆಯಲ್ಲಿ 300 ಕೋಟಿ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಮಾತನಾಡಿದ ಅವರು, 224 ಸ್ಥಾನಗಳಿರುವ ರಾಜ್ಯದಲ್ಲಿ ನಮ್ಮದು ಕೇವಲ 37 ಸ್ಥಾನ. ಆದರೆ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ, 130 ವರ್ಷ ಇತಿಹಾಸವಿರುವ ಕಾಂಗ್ರೆಸ್‍ನವರು ನಮ್ಮ ಬಳಿಗೆ ಬಂದರು. ನಿಮ್ಮ ಮಗನನ್ನೇ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಪಟ್ಟು ಹಿಡಿದು ಕುಳಿತರು. ಆಗ ನಾನು ಸಿದ್ದರಾಮಯ್ಯ 5 ವರ್ಷ ಆಡಳಿತ ನಡೆಸಿದ್ದಾರೆ.

ಆದ್ದರಿಂದ ಮಲ್ಲಿಕಾರ್ಜುನ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡಿ. ನಾವು ಕೂಡ ಬೆಂಬಲ ಕೊಡುತ್ತೇವೆ ಎಂದು ಹೇಳಿದೆ. ಅದಕ್ಕೆ ಕಾಂಗ್ರೆಸ್‍ನವರು ಒಪ್ಪಲಿಲ್ಲ. ನಿಮ್ಮ ಮಗನನ್ನೇ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಒತ್ತಡ ಹೇರಿದ್ದರು. ಅವರ ಒತ್ತಾಯಕ್ಕೆ ಮಣಿದು ನನ್ನ ಮಗ ಮುಖ್ಯಮಂತ್ರಿಯಾಗಲು ಒಪ್ಪಿದೆ ಎಂದು ದೇವೇಗೌಡ ಹೇಳಿದರು. ಕುಮಾರಸ್ವಾಮಿ ಕಾಂಗ್ರೆಸ್‍ನವರ ಬಲದಿಂದ ಮುಖ್ಯಮಂತ್ರಿ ಆಗಿದ್ದಾರೆ. ಮಾನಸಿಕವಾಗಿ ಹಲವಾರು ಒತ್ತಡಗಳ ನಡುವೆ ಹಗ್ಗದ ಮೇಲೆ ನಡೆದಂತೆ ಸರ್ಕಾರ ನಡೆಸುತ್ತಿದ್ದಾರೆ. ಅದೇ ವೇಳೆ ರಾಜ್ಯದ ಅಭಿವೃದ್ಧಿಗಾಗಿ ರಾತ್ರಿ-ಹಗಲೆನ್ನದೆ ದುಡಿಯುತ್ತಿದ್ದಾರೆ. ಅವರಿಗೆ ನೋವನ್ನು ಅರಗಿಸಿಕೊಂಡು ಸರ್ಕಾರ ನಡೆಸಲು ರಾಜ್ಯದ ಜನರು ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ನೀವು ಬೆಳೆಸಿದ ದೇವೇ ಗೌಡರು ಪ್ರಧಾನಿಯಾದರು. 10 ತಿಂಗಳಲ್ಲಿ ಅವರು 10 ಬಾರಿ ಕಾಶ್ಮೀರಕ್ಕೆ ಹೋಗಿದ್ದರು. ಕಾಶ್ಮೀರಕ್ಕೆ ತೆರೆದ ಜೀಪಿನಲ್ಲಿ ಹೋದ ಏಕೈಕ ಪ್ರಧಾನಿ ಅವರಾಗಿದ್ದರು. ಅವರು ಪ್ರಧಾನಿಯಾಗಿದ್ದಾಗ ಸೈನಿಕರ ಪತ್ನಿಯರು, ತಂದೆ-ತಾಯಂದಿರು ಅನಾಥರಾಗಿಲ್ಲ. ಒಂದೇ ಒಂದು ಬಾಂಬ್ ಸ್ಪೋಟಿಸುವ ಘಟನೆಯೂ ನಡೆದಿಲ್ಲ. ಅದರೆ ಈಗ ಪರಿಸ್ಥಿತಿಯೇ ಬೇರೆ ಆಗಿದೆ. ಇಂದಿನ ಪ್ರಧಾನಿಗಳು ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ನಾನು ಪ್ರಧಾನಿ ವಿರುದ್ಧ ಮಾತನಾಡುವುದಿಲ್ಲ. ಅವರ ತೀರ್ಮಾನಕ್ಕೆ ಬೆಂಬಲ ವ್ಯಕ್ತಪಡಿಸುತ್ತೇನೆ ಎಂದರು.