ಶೀಘ್ರ ಪಡಿತರ ವಿತರಿಸದಿದ್ದರೆ ಡಿಸಿ ಕಚೇರಿ ಮುಂದೆ ಧರಣಿ ಎಚ್ಚರಿಕೆ

ಕೊಳ್ಳೇಗಾಲ: ಮೂರು ದಿನದಲ್ಲಿ ರೇಷನ್ ವಿತರಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಲೊಕ್ಕನಹಳ್ಳಿಯ ಪಡಿತರದಾರರು ಎಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಭಗೀರಥ ಸಂಘದ ಪದಾಧಿಕಾರಿಗಳು ಹನೂರು ಕ್ಷೇತ್ರ ವ್ಯಾಪ್ತಿಯ ಲೊಕ್ಕನಹಳ್ಳಿ ಮೂರು ನ್ಯಾಯ ಬೆಲೆ ಅಂಗಡಿಗಳಲ್ಲಿ ಕಳೆದ ಮೂರು ತಿಂಗಳಿಂದಲೂ ಪಡಿತರೆ ವಿತರಣೆಯಾಗಿಲ್ಲ. ಲೊಕ್ಕನಹಳ್ಳಿ ಗ್ರಾಮದಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಕಾರ್ಡ್ ಗಳಿದ್ದು, ಮೂರು ನ್ಯಾಯ ಬೆಲೆ ಅಂಗಡಿಗಳಿವೆ. ಮೂರು ಅಂಗಡಿಗಳಲ್ಲೂ ಸಹಾ ಪಡಿತರ ವಿತರಣೆಯಾಗಿಲ್ಲ. ಅಂಗಡಿ ಮಾಲೀಕರನ್ನು ಕೇಳಿದರೆ ನಮಗೆ ರೇಷನ್ ಬಂದಿಲ್ಲ ಎನ್ನುತ್ತಾರೆ. ಈ ಭಾಗದಲ್ಲಿ ಬಡವರೆ ಹೆಚ್ಚಾಗಿರುವ ಕಾರಣ ಅನ್ನಭಾಗ್ಯದ ರೇಷನ್ ಸಮರ್ಪಕ ವಿತರಣೆ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಪ್ರತಿ ತಿಂಗಳು ರೇಷನ್ ವಿತರಣೆಯಲ್ಲಾಗುತ್ತಿ ರುವ ಲೋಪ ಸರಿಪಡಿಸಬೇಕು. ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ಸ್ಥಳೀಯ ಶಾಸಕ ನರೇಂದ್ರ ಅವರು ಈ ಪ್ರಕರಣದಲ್ಲಿ ಮೌನ ವಹಿಸಿರುವುದು ಸರಿಯಲ್ಲ ಎಂದರು. ಜಿಲ್ಲಾಡಳಿತ ರೇಷನ್ ವಿತರಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ವೆಂಕಟರಾಜು ಮಾತನಾಡಿ. ಜಿಲ್ಲಾಡಳಿತ. ಜಿಲ್ಲಾ ಪಂಚಾಯ್ತಿ ಹಾಗೂ ಆಹಾರ ಇಲಾಖೆ ಇನ್ನಾದರೂ ನಿರ್ಲಕ್ಷ್ಯ ಬದಿಗೊತ್ತಿ ಲೊಕ್ಕನ ಹಳ್ಳಿ ಹೋಬಳಿಯಲ್ಲಾಗುತ್ತಿರುವ ಪಡಿತರೆ ವ್ಯತ್ಯಯ ಸರಿಪಡಿಸಲು
ಕ್ರಮವಹಿಸಬೇಕು, ಕೆಎಫ್‍ಸಿ ಮೂಲಕ ವಿತರಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದರು. ಎಂ.ಮಾದೇಶ, ಶಿವಣ್ಣ, ನೀಲಶೆಟ್ರು, ಚಿಕ್ಕರಂಗನಾಯಕ, ಸಿದ್ದಪ್ಪ, ಶಿವಕುಮಾರ್, ಚೆಲುವರಾಜು, ನಾಗೇಂದ್ರ, ನವೀನ್ ಮತ್ತಿತರರು ಇದ್ದರು.