15 ದಿನದಲ್ಲಿ ಮಳೆ ಬರದಿದ್ದರೆ ಧರ್ಮಸ್ಥಳ ಮಂಜುನಾಥಸ್ವಾಮಿಗೆ ಅಭಿಷೇಕಕ್ಕೂ ನೀರಿಲ್ಲ

ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳ ದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ನೇತ್ರಾವತಿ ನದಿಯಲ್ಲಿ ನೀರಿಲ್ಲ. ಮುಂದಿನ 15 ದಿನಗಳಲ್ಲಿ ಮಳೆ ಬರದಿದ್ದರೆ ಮಂಜುನಾಥ ಸ್ವಾಮಿಯ ಅಭಿಷೇಕಕ್ಕೂ ನೀರಿರುವುದಿಲ್ಲ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕಳವಳ ವ್ಯಕ್ತಪಡಿಸಿದ್ದಾರೆ.

ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಕಿಂಡಿ ಅಣೆಕಟ್ಟೆ ಹಾಗೂ ತೀರ್ಥದ ಗುಂಡಿಯಲ್ಲಿ ಅಲ್ಪ ಪ್ರಮಾಣದ ನೀರಿದೆ. ತೀರ್ಥದ ಗುಂಡಿಯಲ್ಲಿ ನಾಲ್ಕು ಅಡಿ ಕಡಿಮೆ ಆಗಿದೆ. ಪ್ರಸ್ತುತ ಸ್ವಾಮಿಯ ಅಭಿಷೇಕಕ್ಕೆ ನೀರಿನ ತೊಂದರೆ ಇಲ್ಲ. ಆದರೆ, ಮುಂದಿನ 15 ದಿನಗಳಲ್ಲಿ ಮಳೆ ಬರದಿದ್ದರೆ ಮಂಜುನಾಥ ಸ್ವಾಮಿಯ ಅಭಿಷೇಕಕ್ಕೂ ನೀರಿಲ್ಲದಂತಾಗ ಬಹುದು. ಈ ಹಿಂದೆಯೂ ಹೀಗೆ ಆಗಿತ್ತು. ಆದರೆ, ಇಷ್ಟು ತೀವ್ರ ಪ್ರಮಾಣದಲ್ಲಿ ಬರ ಕಾಡಿರಲಿಲ್ಲ ಎಂದು ಧರ್ಮಾಧಿಕಾರಿಗಳು ತಿಳಿಸಿದ್ದಾರೆ. ನೇತ್ರಾವತಿ ನದಿಯ ಉಪನದಿ ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಕಾರಣ ನದಿಯಲ್ಲಿ ನೀರು ಗಣನೀಯವಾಗಿ ಕಡಿಮೆಯಾಗಿದೆ. ಕಾಡು ಉಳಿಸದೇ ಇರುವ ಕಾರಣ ಈ ಸಮಸ್ಯೆ ಎದುರಾಗಿದೆ. ಸರ್ಕಾರ ಮತ್ತು ಜಲತಜ್ಞರು ಈ ಬಗ್ಗೆ ಯೋಜನೆ ರೂಪಿಸಬೇಕು. ಮುಂದಿನ 15-20 ವರ್ಷಗಳ ಭವಿಷ್ಯದ ಬಗ್ಗೆ ಯೋಚಿಸಬೇಕು. ಪಶ್ಚಿಮ ಘಟ್ಟದಲ್ಲಿ ಅರಣ್ಯನಾಶದಿಂದ ನೀರಿನ ಸಮಸ್ಯೆ ತೀವ್ರವಾಗುತ್ತಿದೆ ಎಂದು ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ. ಧರ್ಮಸ್ಥಳದಲ್ಲಿ ನೀರಿನ ಅಭಾವ ಎದುರಾಗಿರುವುದರಿಂದ ಭಕ್ತಾದಿಗಳು ತಮ್ಮ ಪ್ರವಾಸವನ್ನು ಕೆಲವು ದಿನ ಮುಂದೂಡಿ ಸಹಕರಿಸುವಂತೆ ವೀರೇಂದ್ರ ಹೆಗ್ಗಡೆಯವರು ನಿನ್ನೆಯಷ್ಟೇ ಮನವಿ ಮಾಡಿದ್ದರು.