ಜನತೆಯ ಅಗತ್ಯತೆ, ಆಯ್ಕೆ ಅರಿತರೆ ಯಶಸ್ವಿ ಉದ್ಯಮಿಯಾಗಬಹುದು

ಮೈಸೂರು: ಇಂದಿನ ಅಗತ್ಯತೆಗಳನ್ನು ಮಾರುಕಟ್ಟೆಯ ಸರಕಾಗಿಸಿ ಕೊಳ್ಳುವ ಕೌಶಲ್ಯ ಮತ್ತು ಜಾಣ್ಮೆಯನ್ನು ಬೆಳೆಸಿಕೊಂಡಾಗ ಮಾತ್ರ ಯಶಸ್ವಿ ಉದ್ಯಮಿ ಗಳಾಗಲು ಸಾಧ್ಯ ಎಂದು ಕೇರಳದ ಕೋಜ್ಹಿ ಕೋಡ್‍ನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ (ಐಐಎಂ)ನ ಪ್ರಾಧ್ಯಾಪಕ ಸಿ.ರಾಜು ತಿಳಿಸಿದರು.

ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಎಂಬಿಎ ಮತ್ತು ಎಂಕಾಂ ವಿಭಾಗದಿಂದ ಆಯೋಜಿಸ ಲಾಗಿದ್ದ `ಮಾನವ ಸಂಪನ್ಮೂಲ, ಮಾರು ಕಟ್ಟೆ ಹಾಗೂ ಹಣಕಾಸು ನಿರ್ವಹಣೆ ಯಲ್ಲಿನ ಹೊಸ ದೃಷ್ಟಿಕೋನಗಳು’ ಕುರಿತ ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಉದ್ದೇಶಿಸಿ ಅವರು ಮಾತನಾಡಿದರು.
ವೇಗವಾಗಿ ಬೆಳೆಯುತ್ತಿರುವ ಇಂದಿನ ಸಮಾಜದಲ್ಲಿ ಜನರ ಅಗತ್ಯತೆಗಳು ಮತ್ತು ಆಯ್ಕೆಗಳು ಕೂಡ ಬದಲಾಗುತ್ತಿವೆ. ಕುಟುಂಬ ವ್ಯವಸ್ಥೆಯ ಪರಿಕಲ್ಪನೆಯೂ ಬದಲಾಗಿದೆ. ದುಡಿಮೆ ಮತ್ತು ಅವಸರದ ಬದುಕು ಮನುಷ್ಯನನ್ನು ಪರಾವಲಂಬಿಯಾಗಿಸು ತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮಾರುಕಟ್ಟೆ ಯನ್ನು ವಿಸ್ತರಿಸಿಕೊಳ್ಳಲು ವಿಫುಲ ಅವ ಕಾಶಗಳಿವೆ ಎಂದು ಹೇಳಿದರು.

ಐಐಎಂನ ವಿದ್ಯಾರ್ಥಿಯಾಗಿದ್ದ ಮುಸ್ತಫಾ ಎಂಬಾತ ಬೆಂಗಳೂರಿನ ಐಟಿ ಕಂಪ ನಿಯ ಉದ್ಯೋಗಿ. ಆ ಸಂದರ್ಭದಲ್ಲಿ ರೆಡಿ ಮೇಡ್ ಅಕ್ಕಿ ಹಿಟ್ಟನ್ನು ಖರೀದಿ ಮಾಡಿ ಮನೆಯಲ್ಲಿ ದೋಸೆ, ಇಡ್ಲಿ ಮಾಡುತ್ತಿದ್ದ. ಕೊನೆಗೆ ತಾನೇ ಒಂದು ಅಕ್ಕಿ ಹಿಟ್ಟು ಉದ್ಯಮ ತಯಾರಿಸಿದ. ಈಗ ಅವನ ಕಂಪನಿಯಲ್ಲಿ 1,200 ಮಂದಿ ಕೆಲಸ ಮಾಡುತ್ತಿದ್ದಾರೆ. ವಾರ್ಷಿಕ ಆದಾಯ 2000 ಸಾವಿರ ಕೋಟಿ ಯಷ್ಟಿದೆ. ಹಾಗೆಯೇ ಗೂಗಲ್ ಕಂಪ ನಿಯ ಸಿಇಓ ಸುಂದರ್ ಪಿಚಾಯಿ ಅವರ ವಾರ್ಷಿಕ ಆದಾಯ 1,285 ಕೋಟಿ. ಹೀಗೆ ಔದ್ಯಮಿಕ ಕ್ಷೇತ್ರದಲ್ಲಿ ಯಶಸ್ವಿಯಾಗಿರುವ ಸಾಕಷ್ಟು ಮಂದಿ ನಮಗೆ ಮಾದರಿ ಯಾಗಿದ್ದಾರೆ ಎಂದು ಉದಾಹರಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ಸಾಕಷ್ಟು ಬೆಳೆದಿದ್ದು, ಇಂದಿನ ವಿದ್ಯಾರ್ಥಿಗಳಿಗೆ ಕಲಿ ಯಲು ಸಾಕಷ್ಟು ಸಾಮಗ್ರಿಗಳು ಬೆರಳ ತುದಿ ಯಲ್ಲೇ ಸಿಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಾಗಿದೆ. ಪದವಿ ನಂತರ ಸಂಬಳದ ಉದ್ಯೋಗಕ್ಕಾಗಿ ಪರಿ ತಪಿಸದೆ ಸ್ವಯಂ ಉದ್ಯೋಗಿಗಳಾಗಿ ಸಾಧನೆ ಮಾಡಬೇಕು ಎಂದು ಯುವ ಸಮುದಾಯಕ್ಕೆ ಕರೆ ನೀಡಿದರು.

ಮೈಸೂರು ಲಯನ್ಸ್ ಕ್ಲಬ್‍ನ ಅಧ್ಯಕ್ಷ ಲಯನ್ ಮಲ್ಲಪ್ಪಗೌಡ ವಿಚಾರ ಸಂಕಿ ರಣ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಗಳು ಸಮಾಜದ ಅಭ್ಯುದಯಕ್ಕಾಗಿ ಹಗಲಿರುಳು ದುಡಿಯುವ ಪೋಷಕರು, ಶಿಕ್ಷಕರು, ರೈತರು ಮತ್ತು ಸೈನಿಕರನ್ನು ಗೌರವಿಸಬೇಕು. ಈ ವಿಚಾರ ಸಂಕಿ ರಣದ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಅಣ್ಣೇ ಗೌಡ ಅಧ್ಯಕ್ಷತೆ ವಹಿಸಿದ್ದರು. ಡಾ.ಎಂ. ಚೆನ್ನಬಸವೇಗೌಡ, ಪ್ರೊ.ಸೋಮಣ್ಣ, ಡಾ.ಆರ್.ನಳಿನಿ, ಡಾ.ಎಸ್.ಮಂಜು ಹಾಜರಿದ್ದರು. ಪಿಜಿ ವಿಭಾಗದ ಮುಖ್ಯಸ್ಥ ಡಾ.ಜಿ.ಹೆಚ್. ಮಹದೇವಸ್ವಾಮಿ ಸ್ವಾಗತಿ ಸಿದರೆ, ಪ್ರೊ. ರಜಿನಿ ನಿರೂಪಿಸಿದರು. ಐಕ್ಯೂಎಸಿ ಸಂಚಾಲಕಿ ಪ್ರೊ.ಬಿ.ವಿ.ತುಳಸಿ ವಂದಿಸಿದರು.