ಸೋಲಿನ ಹೊಣೆ ನನ್ನದೇ: ಪ್ರೊ.ಕೆ ಆರ್ ಎಂ

ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಾನು ಸೋಲುನುಭವಿಸಿದ್ದೇನೆ. ಈ ಸೋಲಿಗೆ ಯಾರನ್ನು ದೂಷಿಸುವುದಿಲ್ಲ. ಸೋಲಿನ ಹೊಣೆಯನ್ನು ನಾನೇ ಹೊತ್ತೊ ಕೊಳ್ಳುತ್ತೇನೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಹೇಳಿದರು.

ನಗರದ ಶಿವಕುಮಾರಸ್ವಾಮಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಭೆಯಲ್ಲಿ ಅವರು ಮಾತನಾಡಿದರು.

ನನ್ನ ಸೋಲಿಗೆ ನಾನು ಯಾರನ್ನು ಹೊಣೆಗಾರರನ್ನಾಗಿ ಮಾಡು ವುದಿಲ್ಲ. ಕಾಲವಕಾಶ ಕಡಿಮೆ ಇದ್ದ ಕಾರಣ ಪ್ರಚಾರದಲ್ಲಿ ಸ್ವಲ್ಪ ಹಿನ್ನಡೆಯಾಯಿತು. ಆದರೂ ಸಹ 70,503 ಮತ ನೀಡುವ ಮೂಲಕ ಮತದಾರರು ನನ್ನನ್ನು ಬೆಂಬಲಿಸಿದ್ದಾರೆ. ಇದೂ ಸಹ ಸಾಧನೆಯಾಗಿದೆ. ನನಗೆ ನೈತಿಕವಾಗಿ, ಮಾನಸಿಕವಾಗಿ ಸೋಲಾಗಿಲ್ಲ ಬದಲಿಗೆ ತಾಂತ್ರಿಕ ಸೋಲು ಕಂಡಿರುವುದಾಗಿ ಭಾವಿಸಿ ದ್ದೇನೆ. ಎಲ್ಲ ಮತದಾರರಿಗೂ ಪಕ್ಷದ ಮುಖಂಡರು, ಕಾರ್ಯ ಕರ್ತರಿಗೆ ಚಿರಋಣ ಆಗಿರುತ್ತೇನೆ ಎಂದರು.

ಎಲ್ಲ ಸಮಾಜದ ಮತದಾರರು ಪಕ್ಷವನ್ನು ಬೆಂಬಲಿಸಿದ್ದರಿಂದ ನನಗೆ 70,503 ಮತಗಳು ದೊರೆತು ಗೆಲುವಿನ ಸಮೀಪಕ್ಕೆ ಹೋಗಲು ಕಾರಣವಾಯಿತು. ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ, ಜನರ ಪ್ರೀತಿ, ವಿಶ್ವಾಸಗಳಿಸುವುದು ಮುಖ್ಯ. ಜನರ ಪ್ರೀತಿ, ವಿಶ್ವಾಸಕ್ಕೆ ಎಂದೂ ಸಹ ದ್ರೋಹ ಬಗೆ ಯುವುದಿಲ್ಲ. ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ತೆರಳಿ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಸೋಲಿನಿಂದ ಧೃತಿಗೆಟ್ಟು ಒಂದೆಡೆ ಕೂರುವುದಿಲ್ಲ. ಜನರ ಮಧ್ಯೆಯೇ ಇದ್ದು, ಪಕ್ಷವನ್ನು ಮತ್ತಷ್ಟು ಸಂಘಟನೆಗೊಳಿಸಲು ಶ್ರಮಿಸುತ್ತೇನೆ. ಕ್ಷೇತ್ರವನ್ನು ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಮುಂದಿನ ಲೋಕಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಪಕ್ಷ ಸಂಘಟಿಸಿ ಗೆಲುವು ಸಾಧಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯನ್ಮೂಖರಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್.ಬಾಲರಾಜು, ತಾಲೂಕು ಪಂಚಾಯಿತಿ ಪ್ರಭಾರ ಅಧ್ಯಕ್ಷ ಪಿ.ಎನ್.ದಯಾನಿಧಿ, ಮುಖಂಡ ರಾದ ಅಮ್ಮನಪುರ ಮಲ್ಲೇಶ್, ಡಾ.ಎ.ಆರ್.ಬಾಬು, ಕೆ.ಎಸ್. ನಾಗರಾಜಪ್ಪ, ಹನುಮಂತಶೆಟ್ಟಿ, ನಿಜಗುಣರಾಜು, ಮಂಗಲ ಶಿವಕುಮಾರ್, ಪಾಪು, ಗಣೇಶ್‍ದೀಕ್ಷಿತ್, ಪುರುಷೋತ್ತಮ್, ಸುಂದ್ರರಪ್ಪ, ಕೆಲ್ಲಂಬಳ್ಳಿ ಸೋಮನಾಯಕ, ಅಯ್ಯನಪು ಶಿವ ಕುಮಾರ್, ಕುಲಗಾಣ ಶಾಂತಮೂರ್ತಿ, ಚಂದ್ರಶೇಖರ್ ಹಾಜರಿದ್ದರು.