ಶಾಸಕ ರಾಮದಾಸ್ ಹೇಳಿಕೆಗೆ ಐಎಂಎ ಆಕ್ಷೇಪ

ಮೈಸೂರು: ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ಜಾರಿಗೊಳಿಸಲು ಸದನದಲ್ಲಿ ಗಮನ ಸೆಳೆದಿ ರುವ ಬಗ್ಗೆ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಘಟಕದ ಮಾಜಿ ಅಧ್ಯಕ್ಷ ಡಾ.ಎಚ್.ಎನ್.ರವೀಂದ್ರ ಇಂದಿಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ಜಾರಿಯಲ್ಲಿದೆ. ಹೀಗಿದ್ದರೂ ಅವರು ಸರಿಯಾದ ಮಾಹಿತಿ ಅರಿಯದೇ ಕಾಯ್ದೆ ಜಾರಿಗೆ ಒತ್ತಾಯಿಸಿರುವುದು ಮೂರ್ಖತನದ ಪರಮಾವಧಿ ಎಂದು ಭಾನುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ರಾಮದಾಸ್ ಅವರಿಗೆ ಮಾಹಿತಿಯ ಕೊರತೆ ಇದ್ದರೆ ತಮ್ಮ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಪಡೆಯಬಹುದಿತ್ತು. ಇಲ್ಲ ನಮ್ಮನ್ನೇ ಕೇಳಿದ್ದರೂ ನಾವು ನೀಡಲು ತಯಾರಿ ದ್ದೆವು. ಆದರೆ ಸೂಕ್ತ ಮಾಹಿತಿಯನ್ನೇ ಅರಿಯದೇ ಸದನದಲ್ಲಿ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ಜಾರಿಗೊಳಿಸಲು ಒತ್ತಾಯಿಸಿರುವುದು ಸರಿಯಲ್ಲ ಎಂದು ಹೇಳಿದರು. ಸರ್ಕಾರಿ ಆಸ್ಪತ್ರೆ ಗಳಲ್ಲಿ ಶೆ.60ರಷ್ಟು ಮೂಲ ಭೂತ ಸೌಕರ್ಯ ಗಳೇ ಇಲ್ಲ. ಅಗತ್ಯ ತಜ್ಞರ ಕೊರತೆ ಸಾಕಷ್ಟಿದೆ. ಯಶಸ್ವಿನಿ ಯೋಜನೆ ಸ್ಥಗಿತಗೊಂಡ ನಂತರ ರೈತರು, ಮಧ್ಯಮ ವರ್ಗದವರು, ಬಡವರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆರೋಗ್ಯ ಕರ್ನಾಟಕಕ್ಕೆ ಅನಾರೋಗ್ಯ ಕಾಡುತ್ತಿದೆ. ಇವೆಲ್ಲವನ್ನೂ ಶಾಸಕರು ಮೊದಲೇ ಅರಿತುಕೊಳ್ಳಬಹುದಿತ್ತು ಎಂದರು. ಸುದ್ದಿಗೋಷ್ಠಿಯಲ್ಲಿ ಐಎಂಎ ರಾಜ್ಯ ಉಪಾಧ್ಯಕ್ಷ ಡಾ.ಹರೀಶ್, ಡಾ.ಸಂಜಯ್, ಡಾ.ಮಹೇಶ್ ಇನ್ನಿತರರು ಉಪಸ್ಥಿತರಿದ್ದರು.