ಆಡಳಿತದಲ್ಲಿ ಶೇ. 100ರಷ್ಟು ಕನ್ನಡ ಅನುಷ್ಠಾನಗೊಳಿಸಿ

ಚಾಮರಾಜನಗರ: ಆಡಳಿತ ದಲ್ಲಿ ಕನ್ನಡವನ್ನು ಶೇ. 100ರಷ್ಟು ಅನು ಷ್ಠಾನಗೊಳಿಸಲು ಎಲ್ಲಾ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕನ್ನಡ ಅನು ಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡ ಭಾಷೆಯನ್ನು ಎಲ್ಲಾ ಹಂತಗಳಲ್ಲಿ ಸಂಪೂರ್ಣವಾಗಿ ಅನುಷ್ಠಾನಗೊಳಿ ಸಲು 20 ಅಂಶಗಳ ಸುತ್ತೋಲೆಯನ್ನು ಕಡ್ಡಾ ಯವಾಗಿ ಜಾರಿಗೊಳಿಸುವಂತೆ ಸರ್ಕಾರ ಸೂಚಿಸಿದೆ. ಅದರ ಅನುಸಾರ ಪ್ರತಿ ಇಲಾಖೆ ಗಳು ಕಾರ್ಯೋನ್ಮುಖರಾಗಿ ಅನುಷ್ಠಾನ ಗೊಳಿಸುವ ಹೊಣೆಗಾರಿಕೆಯನ್ನು ನಿಭಾ ಯಿಸಬೇಕು. ಪರಿಣಾಮಕಾರಿಯಾಗಿ ಕನ್ನಡ ಜಾರಿಗೆ ಬರಬೇಕು ಎಂದರು.

ಬ್ಯಾಂಕ್‍ಗಳಲ್ಲಿ ಕನ್ನಡ ಅನುಷ್ಠಾನವಾಗು ತ್ತಿಲ್ಲ. ಚಲನ್‍ಗಳನ್ನು ಕನ್ನಡ ಭಾಷೆಯಲ್ಲಿ ಮುದ್ರಿಸುತ್ತಿಲ್ಲ. ಕನ್ನಡ ಬಾರದ ಅಧಿಕಾರಿ ಗಳಿಂದ ವ್ಯವಹಾರಕ್ಕೆ ತೊಂದರೆಯಾಗು ತ್ತಿದೆ ಎಂಬ ವ್ಯಾಪಕ ದೂರುಗಳು ಕೇಳಿ ಬಂದಿವೆ. ಇದಕ್ಕಾಗಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ಜಿಲ್ಲೆಯಲ್ಲಿರುವ ಎಲ್ಲಾ ಬ್ಯಾಂಕ್ ಗಳಲ್ಲಿ ಕನ್ನಡ ಕಲಿಯದ ಎಷ್ಟು ಮಂದಿ ಅಧಿಕಾರಿಗಳಿದ್ದಾರೆ ಎಂಬ ಮಾಹಿತಿಯನ್ನು ಕಲೆ ಹಾಕಲಾಗುವುದು. ಅವರಿಗೆ ಸಮಯ ನೀಡಿ ಕನ್ನಡ ಕಲಿಯಲು ಸೂಚಿಸಲಾಗು ವುದು. ನಿಗದಿತ ಅವಧಿಯೊಳಗೆ ಕನ್ನಡ ಕಲಿಯಲು ಸ್ಪಂದಿಸದಿದ್ದಲ್ಲಿ ಪ್ರಾಧಿಕಾರಕ್ಕೆ ವರದಿ ಕಳುಹಿಸಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಮಾತನಾಡಿ, ಬ್ಯಾಂಕ್ ಅಧಿ ಕಾರಿಗಳ ಸಭೆಯನ್ನು ತಾವು ನಡೆಸಿದ್ದು, ಕನ್ನಡದಲ್ಲಿ ವ್ಯವಹರಿಸಲು ಸೂಚಿಸಿದ್ದೇನೆ. ಕನ್ನಡ ಬಾರದ ಅಧಿಕಾರಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕನ್ನಡ ಕಲಿಕಾ ತರಬೇತಿ ಸಹ ಏರ್ಪಡಿಸಿದ್ದು, ಇದಕ್ಕೆ ಪೂರಕ ಸ್ಪಂದನೆ ಸಿಗಲಿಲ್ಲವೆಂಬ ಮಾಹಿತಿಯನ್ನು ಪಡೆಯಲಾಗಿದೆ. ಮತ್ತೊಮ್ಮೆ ಕನ್ನಡ ಬಾರದ ಬ್ಯಾಂಕ್ ಅಧಿಕಾರಿಗಳಿಗೆ ಕನ್ನಡ ಕಲಿಸುವ ತರಬೇತಿಯನ್ನು ನೀಡ ಲಾಗುತ್ತದೆ. ಇದಕ್ಕೂ ಆಸಕ್ತಿ ತೋರದಿರು ವವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದರು.

ಪ್ರಾಧಿಕಾರದ ಅಧ್ಯಕ್ಷರು ಮಾತನಾಡಿ, ಕನ್ನಡ ತರಬೇತಿಗೆ ಪ್ರಾಧಿಕಾರದ ವತಿಯಿಂದಲೇ ಸಂಪನ್ಮೂಲ ವ್ಯಕ್ತಿಗಳನ್ನು ಕಳುಹಿಸಿ ಕೊಡಲಾಗುತ್ತದೆ. ಪುಸ್ತಕಗಳನ್ನು ಸಹ ನೀಡ ಲಾಗುತ್ತದೆ. ಪರಿಣಾಮಕಾರಿಯಾಗಿ ಕನ್ನಡ ಕಲಿಸುವ ಕೆಲಸ ಆಗಬೇಕು ಎಂದರು.
ಅಂಗಡಿ ಮುಂಗಟ್ಟು, ವಾಣಿಜ್ಯ ಸಂಕೀ ರ್ಣಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲೇ ಪ್ರಧಾನವಾಗಿ ನಾಮಫಲಕಗಳನ್ನು ಅಳ ವಡಿಸಬೇಕು. ಕನ್ನಡ ಭಾಷಾ ಅಧಿನಿ ಯಮ 2015ರ ಅನ್ವಯ ಎಲ್ಲ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಸಲೇ ಬೇಕು. ಸಾರಿಗೆ ಇಲಾಖೆಯಲ್ಲಿ ಪರವಾ ನಗಿ ನೀಡುವ ಪ್ರಕ್ರಿಯೆಯಲ್ಲಿ ದುರುಪ ಯೋಗಬಾರದು. ಕನ್ನಡಿಗರ ಹಿತಾಸಕ್ತಿ ಯನ್ನು ಕಾಪಾಡಬೇಕು. ಗಿರಿವಿ ಅಂಗಡಿಗ ಳಲ್ಲಿ ಮುದ್ರಿಸುವ ಚೀಟಿಗಳು ಕನ್ನಡದ ಲ್ಲಿಯೇ ಇರಬೇಕು ಎಂದು ತಾಕೀತು ಮಾಡಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಕನ್ನಡ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷರ ಅಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ, ರಾಜ್ಯ ಸದಸ್ಯರಾದ ಗಿರೀಶ್ ಪಟೇಲ್, ಪ್ರಭಾಕರಪಾಟೀಲ, ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿ ಜಿ.ಎನ್.ನರ ಸಿಂಹಮೂರ್ತಿ, ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ಕೆ.ವೆಂಕಟರಾಜು, ಅಬ್ರಹಾಂ ಡಿಸಿಲ್ವಾ, ಮಹೇಶ್ ಹರವೆ, ದೊಡ್ಡರಾಯಪೇಟೆ ಮಹದೇವಮ್ಮ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿ ಕಾರಿಗಳು ಹಾಜರಿದ್ದರು.

ಸರೋಜಿನಿ ಮಹಿಷಿ ವರದಿ ಸಂಪೂರ್ಣವಾಗಿ ಅನುಷ್ಠಾನ ವಾಗಬೇಕು. ಅಂಗಡಿ ಮುಂಗಟ್ಟು, ಹೋಟೆಲ್‍ಗಳಲ್ಲಿ ದುಡಿಯುತ್ತಿರುವ ಕನ್ನಡಿಗರಿಗೆ ವೇತನ, ಇತರೆ ಭತ್ಯೆ ಗಳು ಸರಿಯಾಗಿ ಸಿಗುತ್ತಿದೆಯೇ ಎಂಬ ಬಗ್ಗೆ ಕಾರ್ಮಿಕ ಅಧಿಕಾರಿ ಗಳು ಪರಿಶೀಲಿಸಬೇಕು. ಗಣಿಗಾ ರಿಕೆ, ಕರಿಕಲ್ಲು ಉದ್ಯಮದಲ್ಲಿ ಹೊರ ರಾಜ್ಯದವರೇ ಇದ್ದಾರೆ ಎಂಬ ಗಂಭೀರ ದೂರುಗಳು ಕೇಳಿಬಂದಿವೆ. ಈ ಬಗ್ಗೆ ನಿಗಾ ವಹಿಸಬೇಕು. -ಪ್ರೊ.ಎಸ್.ಜಿ.ಸಿದ್ದರಾಮಯ್ಯ,ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಜಿಲ್ಲೆಯ ಜಾಲತಾಣ ಕನ್ನಡಮಯ: ಡಿಸಿ ಕಾರ್ಯಕ್ಕೆ ಮೆಚ್ಚುಗೆ

ಜಿಲ್ಲೆಯ ಜಾಲತಾಣಗಳು ಕನ್ನಡದಲ್ಲಿಯೇ ಇರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಜಿಲ್ಲೆಯ ಜಾಲತಾಣ ಸಂಪೂರ್ಣವಾಗಿ ಕನ್ನಡಮಯವಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತಿಳಿಸಿದರು.

ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಕನ್ನಡ ಜಾಗೃತಿ ಸಮಿತಿ ಸಭೆ ನಡೆಸಲಾಗಿದೆ. ಎನ್‍ಐಸಿ ಅಧಿಕಾರಿಗಳಿಗೆ ಅಂತರ್ಜಾಲದ ಮುಖಪುಟ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಕನ್ನಡದಲ್ಲಿಯೇ ಅಳವಡಿಸಲು ಸೂಚಿಸಲಾಗಿತ್ತು. ಈ ಕೆಲಸವನ್ನು ಜಿಲ್ಲಾಡಳಿತ ಪೂರ್ಣಗೊಳಿಸಿ ಕನ್ನಡದಲ್ಲಿಯೆ ವೀಕ್ಷಿಸುವ ಅವಕಾಶ ಕಲ್ಪಿಸಿದೆ ಎಂದರು. ಇದಕ್ಕೆ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅವರು, ತಮ್ಮ ಸೂಚನೆಯನ್ನು ಪಾಲಿಸಿ ಅತೀ ಶೀಘ್ರದಲ್ಲಿ ಅಂತರ್ಜಾಲ ವನ್ನು ಕನ್ನಡಮಯವಾಗಿಸಿದ ಜಿಲ್ಲಾಧಿಕಾರಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಫೆ.28ರೊಳಗೆ ಕನ್ನಡ ಅನುಷ್ಠಾನಕ್ಕೆ ವೈದ್ಯಕೀಯ ಕಾಲೇಜು ನಿರ್ದೇಶಕರಿಗೆ ತಾಕೀತು

ಕನ್ನಡ ಅಭಿವೃದ್ಧಿ ಪ್ರಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದ ರಾಮಯ್ಯ ಅವರು ಸದಸ್ಯರು ಹಾಗೂ ಜಾಗೃತಿ ಸಮಿತಿ ಸದಸ್ಯರೊಂದಿಗೆ ಯಡಪುರ ದಲ್ಲಿರುವ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲಿಸಿದರು.

ಅಲ್ಲಿನ ಪತ್ರ ವ್ಯವಹಾರಗಳು, ನಾಮಫಲಕಗಳನ್ನು ಪರಿಶೀಲಿಸಿದ ಅಧ್ಯಕ್ಷರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾಲೇಜಿನಲ್ಲಿ ಕನ್ನಡ ಅನುಷ್ಠಾನ ಸಮ ರ್ಪಕವಾಗಿ ಆಗದೇ ಇರುವ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನಿಸಿ ಧೋರಣೆ ಬದಲಾಯಿಸಿಕೊಳ್ಳದಿದ್ದಲ್ಲಿ ಕ್ರಮ ವಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಫೆ. 28ರೊಳಗೆ ಎಲ್ಲ ಹಂತದ ಕಡತಗಳು, ಪತ್ರಗಳು ಸೇರಿದಂತೆ ಆಡಳಿತದಲ್ಲಿ ಕನ್ನಡ ಅನುಷ್ಠಾನವಾಗಬೇಕು. ಮತ್ತೊಮ್ಮೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದೇವೆ. ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕನ್ನಡ ಭಾಷೆಯನ್ನು ಸಹ ಬೋಧನೆ ಮಾಡಬೇಕಿದೆ. ಈ ಬಗ್ಗೆ ಕೈಗೊಂಡಿರುವ ನಿರ್ದೇಶನಗಳನ್ನು ಪಾಲನೆ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ವೈದ್ಯಕೀಯ ಕಾಲೇಜಿನ ಡೀನ್ ಡಾ. ರಾಜೇಂದ್ರ ಇತರರು ಇದ್ದರು.

ಕನ್ನಡಪರ ಹೋರಾಟಗಾರರೊಂದಿಗೆ ಪ್ರಾಧಿಕಾರದ ಅಧ್ಯಕ್ಷರ ಸಮಾಲೋಚನೆ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಜಿಲ್ಲೆಯ ಕನ್ನಡ ಪರ ಸಂಘಟನೆಗಳ ಪ್ರತಿನಿಧಿಗಳು, ಹೋರಾಟಗಾರರೊಂದಿಗೆ ಸಮಾಲೋಚನೆ ನಡೆಸಿ ಕನ್ನಡ ಅನುಷ್ಠಾನ ಕುರಿತು ಚರ್ಚಿಸಿದರು.

ಸಭೆಯ ಆರಂಭದಲ್ಲೇ ಪ್ರಾಧಿಕಾರದ ಭೇಟಿಯ ಉದ್ದೇಶ ವಿವ ರಿಸಿದ ಅಧ್ಯಕ್ಷರಿಗೆ ಕನ್ನಡಪರ ಸಂಘಟನೆಗಳ ಮುಖಂಡರು ಕನ್ನಡ ಬಗೆಗಿನ ಸ್ಥಳೀಯ ಸಮಸ್ಯೆಗಳ ಬಗ್ಗೆ ವಿವರವಾಗಿ ಮನವರಿಕೆ ಮಾಡಿಕೊಟ್ಟರು. ಎರಡು ಹೊರ ರಾಜ್ಯಗಳ ಗಡಿ ಸಂಪರ್ಕ ಹೊಂದಿರುವ ಜಿಲ್ಲೆಯಲ್ಲಿ ಕನ್ನಡದ ಹಿತರಕ್ಷಣೆಗೆ ಹಿಂದಿ ನಿಂದಲೂ ಹೋರಾಟ ಮಾಡುತ್ತಿದ್ದೇವೆ. ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸಬೇಕಿದೆ. ಹೊರ ರಾಜ್ಯದವರು ಖಾಸಗಿ ಬಸ್‍ಗಳ ಪರವಾನಗಿ ಪಡೆದುಕೊಂಡು ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ವಂಚಿಸುತ್ತಿದ್ದಾರೆ. ಹೊರರಾಜ್ಯದ ಕಾರ್ಮಿಕರೆ ಕಲ್ಲು ಗಣಿಗಾರಿಕೆ ಉದ್ಯೋಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸ್ಥಳೀಯರಿಗೆ ಯಾವುದೇ ಕೆಲಸಕ್ಕೆ ಅವಕಾಶವಿಲ್ಲವಾಗಿದೆ ಎಂದು ಮುಖಂಡರು ತಿಳಿಸಿದರು.

ಎಲ್ಲರ ಅಹವಾಲು ಸಮಸ್ಯೆಗಳನ್ನು ಆಲಿಸಿದ ಪ್ರಾಧಿಕಾರದ ಅಧ್ಯಕ್ಷರು ನಿಮ್ಮ ದನಿಗೆ ನನ್ನ ದನಿಯು ಕೂಡಿದೆ. ಎಲ್ಲಾ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯರಾದ ಗಿರೀಶ್ ಪಟೇಲ್, ಪ್ರಭಾಕರ ಪಾಟೀಲ, ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿ ಜಿ.ಎನ್.ನರಸಿಂಹಮೂರ್ತಿ, ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ಕೆ.ವೆಂಕಟರಾಜು, ಅಬ್ರಹಾಂ ಡಿಸಿಲ್ವಾ, ಮಹೇಶ್ ಹರವೆ, ದೊಡ್ಡರಾಯಪೇಟೆ ಮಹದೇವಮ್ಮ, ಮುಖಂಡರಾದ ಶಾ.ಮುರಳಿ, ಚಾ.ರಂ.ಶ್ರೀನಿವಾಸಗೌಡ, ಸುರೇಶ್‍ನಾಯಕ, ಚಾ.ಸಿ.ಸೋಮನಾಯಕ, ಜಿ.ಬಂಗಾರು, ಅರಕಲವಾಡಿ ನಾಗೇಂದ್ರ, ಗು.ಪುರುಷೋತ್ತಮ್, ಕೆ.ಎಂ.ನಾಗರಾಜು, ಗೋವಿಂದರಾಜು, ಬ್ಯಾಡಮೂಡ್ಲು ಬಸವಣ್ಣ, ಚಾ.ಹ.ಶಿವರಾಜು, ಸುರೇಶ್ ವಾಜಪೇಯಿ, ಆಲೂರು ನಾಗೇಂದ್ರ, ಸಿ.ಎಂ. ಕೃಷ್ಣಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ವಿನಯ್, ಮಾಜಿ ಅಧ್ಯಕ್ಷರಾದ ಸೋಮಶೇಖರ ಬಿಸಲ್ವಾಡಿ, ಸಿ.ಎಂ. ನರಸಿಂಹಮೂರ್ತಿ ಹಾಜರಿದ್ದರು.