ಜವರೇಗೌಡ ಉದ್ಯಾನದಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಜಿಮ್ ಉಪಕರಣಗಳ ಅಳವಡಿಕೆ

ಮೈಸೂರು: ಮೈಸೂರಿನ ಸರಸ್ವತಿಪುರಂ ಜವರೇಗೌಡ ಉದ್ಯಾನವನದಲ್ಲಿ ಮಹಾ ನಗರ ಪಾಲಿಕೆ ವತಿಯಿಂದ ಅಳವಡಿಸಲಾಗಿದ್ದ ಜಿಮ್ ಉಪಕರಣಗಳನ್ನು ಶುಕ್ರವಾರ ಸಾರ್ವಜನಿಕರ ಉಪಯೋಗಕ್ಕೆ ಅವಕಾಶ ಕಲ್ಪಿಸಲಾಯಿತು, ಮಹಾನಗರ ಪಾಲಿಕೆ ವತಿಯಿಂದ ಎಸ್‍ಎಫ್‍ಸಿ ಯೋಜನೆಯಡಿ ಅಳವಡಿಸಲಾಗಿರುವ ಜಿಮ್ ಉಪಕರಣಗಳನ್ನು ಮಾಜಿ ಮೇಯರ್ ಆರ್.ಲಿಂಗಪ್ಪ ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಿದ ನಂತರ ಮಾದ್ಯಮಗಳಿಗೆ ಮಾಹಿತಿ ನೀಡಿದರು.

ಬಡಾವಣೆಯ ಪ್ರತಿಯೊಬ್ಬರಿಗೂ ಸದೃಢ ಆರೋಗ್ಯ ಕಲ್ಪಿಸುವ ದೃಷ್ಟಿಯಿಂದ ಈ ಉದ್ಯಾನವನದಲ್ಲಿ ಅಂದಾಜು 5 ಲಕ್ಷ ವೆಚ್ಚದಲ್ಲಿ 10ಕ್ಕೂ ಹೆಚ್ಚು ವ್ಯಾಯಾಮ ಉಪಕರಣಗಳನ್ನು ಅಳವಡಿಸಲಾಗಿದೆ. ಇದರ ಸದುಪಯೋಗ ಪಡಿಸಿಕೊಳ್ಳುವಂತೆ ನಾಗರಿಕರಲ್ಲಿ ಮನವಿ ಮಾಡಿದರು.

ಈ ಉಪಕರಣಗಳ ಅಳವಡಿಕೆಯಿಂದ ಮಧ್ಯಮ ವರ್ಗದವರು ಜಿಮ್‍ಗಳಿಗೆ ದುಪ್ಪಟ್ಟು ಹಣ ನೀಡುವುದು ತಪ್ಪುತ್ತದೆ. ಇಲ್ಲಿಗೆ ದಿನನಿತ್ಯ ವಾಯುವಿಹಾರಕ್ಕೆ ಬರುವ ನಾಗರಿಕರು, ಕ್ರಾಸ್ ಟ್ರೈನರ್, ಶೋಲ್ಡರ್ ಪ್ರೆಸ್, ಫುಲ್ ಆಪ್ಸ್ ಬಾರ್, ಲೆಗ್ ಪ್ರೆಸ್ ಸೇರಿದಂತೆ ಹತ್ತಕ್ಕೂ ಹೆಚ್ಚು ಉಪಕರಣಗಳನ್ನು ಉಪಯೋಗಿಸಿ ದೈಹಿಕ ಕಸರತ್ತು ನಡೆಸಬಹುದಾಗಿದ್ದು, ಈ ವೇಳೆ ಉಪಕರಣಗಳು ಹಾಳಾಗದಂತೆ ಸಾರ್ವಜನಿಕರು ಎಚ್ಚರವಹಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಉದ್ಯಮಿ ವಿವೇಕ್, ಪ್ರಜ್ವಲ್ ಲಿಂಗಪ್ಪ, ರವಿ ಪ್ರಭಾಕರ್, ಸುಮಂತ್, ಸುನಿಲ್, ದೇವರಾಜ್ ಸೇರಿದಂತೆ ಮತ್ತಿತರರಿದ್ದರು.