ತಾಪಂ ಕಚೇರಿಯಲ್ಲೇ ಅಶುಚಿತ್ವ!

ಮೈಸೂರು: ಮೈಸೂರಿನ ನಜರ್‍ಬಾದ್‍ನಲ್ಲಿನ ಮಿನಿ ವಿಧಾನ ಸೌಧದಲ್ಲಿರುವ ತಾಲೂಕು ಕಚೇರಿಗೆ ಶುಕ್ರವಾರ ಜಿಪಂ ಹಂಗಾಮಿ ಅಧ್ಯಕ್ಷ ಸಾ.ರಾ. ನಂದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಶೌಚಾಲಯದ ಅಶುಚಿತ್ವ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು. ಸಾರ್ವಜನಿಕರಿಂದ ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ತಾಲೂಕು ಪಂಚಾಯಿತಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ರೈತರ ಅರ್ಜಿ ಗಳನ್ನು ತಕ್ಷಣವೇ ವಿಲೇವಾರಿ ಮಾಡು ವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪತ್ರಕರ್ತರೊಂದಿಗೆ ಸಾ.ರಾ.ನಂದೀಶ್ ಮಾತನಾಡಿ, ತಾಲೂಕು ಕಚೇರಿಯಲ್ಲಿ ರೈತರಿಗೆ ಸವಲತ್ತುಗಳನ್ನು ನೀಡಲು ವಿಳಂಬ ಮಾಡಲಾಗುತ್ತಿದೆ. ಇಲ್ಲಿನ ಶೌಚಾಲಯ ಅಶುಚಿತ್ವದಿಂದ ಕೂಡಿದೆ ಎಂಬ ದೂರುಗಳು ಬಂದಿದ್ದವು. ಮೈಸೂರನ್ನು ದೇಶದ ನಂ.1 ಸ್ವಚ್ಛ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಪಾಲಿಕೆ ಅವಿರತ ಶ್ರಮಿಸುತ್ತಿದೆ. ಆದರೆ ಮಿನಿ ವಿಧಾನಸೌಧದಲ್ಲಿಯೇ ಶೌಚಾಲಯದ ನಿರ್ವಹಣೆ ಸರಿ ಇಲ್ಲ. ಅಶುಚಿತ್ವದಿಂದ ಜನರಿಗೆ ವಾಕರಿಕೆ ಬರುವಂತಾಗಿದೆ. ಅಧಿಕಾರಿಗಳು ಮತ್ತು ಪಿಡಿಒಗಳ ನಿರ್ಲಕ್ಷ್ಯದಿಂದ ಕೇವಲ ಶೇ.50ರಷ್ಟು ಸವಲತ್ತು ಫಲಾನುಭವಿಗಳಿಗೆ ತಲುಪಿಸಲಾಗಿದೆ. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ಅಂಕಿ-ಅಂಶಗಳು ಹಾಗೂ ಅಭಿವೃದ್ಧಿ ಕೆಲಸಗಳ ಸಂಪೂರ್ಣ ವರದಿ ಸಮೇತ ಕೆಡಿಪಿ ಸಭೆಗೆ ಕಡ್ಡಾಯವಾಗಿ ಹಾಜರಾಗು ವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.