ಚಾಮುಂಡಿಬೆಟ್ಟದ ವಿವಿಧ ಕಾಮಗಾರಿಗಳ 20 ದಿನದಲ್ಲಿ ಪೂರ್ಣಗೊಳಿಸಲು ಸೂಚನೆ

ಮೈಸೂರು,ಆ.30(ಎಂಟಿವೈ)-ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶುಕ್ರವಾರ ಬೆಳಿಗ್ಗೆ ಚಾಮುಂಡಿಬೆಟ್ಟದಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ಹಾಗೂ ವಾಣಿಜ್ಯ ಸಂಕೀರ್ಣ ಕಾಮಗಾರಿ ಪರಿಶೀಲಿಸಿ, ಬಾಕಿ ಕಾಮಗಾರಿಯನ್ನು ಸೆ.18ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು.

ಚಾಮುಂಡಿಬೆಟ್ಟಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ 79.72 ಕೋಟಿ ರೂ. ವೆಚ್ಚದಲ್ಲಿ 8 ಎಕರೆ ಪ್ರದೇಶದಲ್ಲಿ 650 ಕಾರು ಸೇರಿದಂತೆ ಇನ್ನಿತರೆ ವಾಹನಗಳ ನಿಲುಗಡೆಗೆ ಮೂರು ಮಹಡಿಯ ಪಾರ್ಕಿಂಗ್ ಕಟ್ಟಡ ನಿರ್ಮಿಸಲಾಗುತ್ತಿದೆ. ಈ ಕಟ್ಟಡದಲ್ಲಿ ಬೆಟ್ಟದಲ್ಲಿನ ರಸ್ತೆ ಬದಿ ವ್ಯಾಪಾರಿಗಳಿಗಾಗಿ ವಾಣಿಜ್ಯ ಸಂಕೀರ್ಣ, ಪಾರ್ಕಿಂಗ್ ಸ್ಥಳದಿಂದ ದೇವಾ ಲಯಕ್ಕೆ ಭಕ್ತರು ಸಾಗಲು ಮೇಲ್ಛಾವಣಿಯುಳ್ಳ ಪಾದಚಾರಿ ಮಾರ್ಗ, ವಿಶ್ರಾಂತಿ ಕೊಠಡಿ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ದಸರಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೆಟ್ಟದಲ್ಲಿ ಮಾಡಬೇಕಾಗಿರುವ ಸಿದ್ಧತೆಗಳ ಪರಿಶೀಲನೆಗೆ ಭೇಟಿ ನೀಡಿದ ಸಚಿವರು, ಈ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ಪಾರ್ಕಿಂಗ್ ಕಟ್ಟಡದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಇನ್ನೆರಡು ಹೆಚ್ಚುವರಿ ಶೌಚಾಲಯ, ಹಿರಿಯ ನಾಗರಿಕರು, ವಿಕಲಚೇತನರು ನೇರವಾಗಿ ದೇವಾಲಯಕ್ಕೆ ಹೋಗುವ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಬಳಿಕ ದೇವಾಲಯದ ಸುತ್ತ, ರಸ್ತೆ ಬದಿ ಇರುವ ಮಳಿಗೆಗಳ ಪರಿಶೀಲನೆ ನಡೆಸಿದ ಸಚಿವ ವಿ.ಸೋಮಣ್ಣ, ಮಳಿಗೆಗಳ ಹಿಂಭಾಗ ಸುರಿದಿರುವ ಕಸವನ್ನು ಕಂಡುÀ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಸ್ವಚ್ಛತೆ ಕಾಪಾಡುವಂತೆ ಸೂಚಿಸಿದರು. ನಂತರ ದಾಸೋಹ ಭವನಕ್ಕೆ ತೆರಳಿ ವೀಕ್ಷಿಸಿದರು. ಈ ವೇಳೆ ಶಾಸಕ ಜಿ.ಟಿ.ದೇವೇಗೌಡ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ದಾಸೋಹ ಭವನ ಕಿರಿದಾಗಿದೆ. ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡಕ್ಕೆ ಪಾರ್ಕಿಂಗ್ ವ್ಯವಸ್ಥೆ ಸ್ಥಳಾಂತರಗೊಂಡರೆ ಹಳೆ ಪಾರ್ಕಿಂಗ್ ಸ್ಥಳದಲ್ಲಿ ದೊಡ್ಡದಾದ ದಾಸೋಹ ಭವನ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.

ಬೇಡಿಕೆ ಈಡೇರಿಕೆಗೆ ನೌಕರರ ಮನವಿ: ಚಾಮುಂಡೇಶ್ವರಿ ದರ್ಶನ ಪಡೆಯಲು ದೇವಾಲಯಕ್ಕೆ ಆಗಮಿಸಿದ ಸಚಿವ ವಿ.ಸೋಮಣ್ಣ ಅವರನ್ನು ಚಾಮುಂಡೇಶ್ವರಿ ಹಾಗೂ ಸಮೂಹ ದೇವಾಲಯಗಳ ನೌಕರರ ಸಂಘದ ಪದಾಧಿಕಾರಿಗಳು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದರು.

ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸನ್ ಈ ವೇಳೆ ಮಾತನಾಡಿ, ಗುತ್ತಿಗೆ ಆಧಾರದಲ್ಲಿ ದೇವಾಲಯಗಳಲ್ಲಿ ಕೆಲಸ ಮಾಡುತ್ತಿರುವ ನೌಕರರ ಹುದ್ದೆಯನ್ನು ಖಾಯಂಗೊಳಿಸಿ ಎಂದು ಮನವಿ ಮಾಡಿದರೆ ಬೆಂಗಳೂರಿನಲ್ಲಿ ಅಧಿಕಾರಿಗಳು ತಲಾ 20 ಸಾವಿರ ರೂ. ಹಣ ನೀಡುವಂತೆ ಕೇಳುತ್ತಾರೆ. ನಮ್ಮ ಬಳಿ ಹಣವಿಲ್ಲ. ನಾವು ಕೇವಲ 4 ಸಾವಿರ ರೂ. ನಿಂದ 10 ಸಾವಿರ ರೂ. ವೇತನ ಪಡೆಯುತ್ತಿದ್ದೇವೆ. ದೇವತಾ ನೌಕರರನ್ನು ರಾಜ್ಯದಾದ್ಯಂತ ಕಡೆಗಣಿಸಲಾಗುತ್ತಿದೆ. ಚಾಮುಂಡೇಶ್ವರಿ ಹಾಗೂ ಸಮೂಹ ದೇವಸ್ಥಾನಗಳ ವ್ಯಾಪ್ತಿಯ 23 ದೇವಸ್ಥಾನದ ಒಟ್ಟು 192 ಮಂದಿ ಗುತ್ತಿಗೆ ನೌಕರರು ಸೂಕ್ತ ವೇತನ ದೊರೆಯದೆ ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಸಚಿವರು ಬುಧವಾರ ಸಂಜೆ ನನ್ನನ್ನು ಭೇಟಿ ಮಾಡಿ, ನಿಮ್ಮ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.