ಬೌದ್ಧಿಕ ಸಾಮಥ್ರ್ಯ ವೃದ್ಧಿಸುತ್ತದೆ ಖ್ಯಾತ ವಯೋಲಿನ್ ವಾದಕ ಡಾ.ಮೈಸೂರು ಮಂಜುನಾಥ್

ಮೈಸೂರು: ಎಲ್ಲರೂ ಸಂಗೀತ ಕಲಿಯಲು ಸಾಧ್ಯವಿಲ್ಲದಿರಬಹುದು. ಆದರೆ ಸಂಗೀತವನ್ನು ಆಸ್ವಾದಿಸಬಹುದು. ಸಂಗೀತದಿಂದ ಮೈಮನಗಳೂ ಉಲ್ಲಸಿತವಾಗುತ್ತವೆ ಎಂದು ಅಂತರರಾಷ್ಟ್ರೀಯ ಖ್ಯಾತಿಯ ವಯೋಲಿನ್ ವಾದಕರಾದ ಡಾ. ಮೈಸೂರು ಮಂಜುನಾಥ್ ಅಭಿಪ್ರಾಯಪಟ್ಟರು.

ಮೈಸೂರಿನ ಕುವೆಂಪುನಗರ ಸರ್ಕಾರಿ ಶಾಲೆಯಲ್ಲಿ ನಡೆದ ವಿಶ್ವ ಸಂಗೀತ ದಿನಾಚರಣೆಯಲ್ಲಿ ಅವರು ಮಾತನಾಡಿ, ಸಂಗೀತ ಆಲಿಕೆ ಸಂಸ್ಕಾರವನ್ನು ತಂದುಕೊಡುತ್ತದೆ. ಸಂಗೀತ ಕಲಿಕೆಯಿಂದ ವಿದ್ಯಾರ್ಥಿಗಳ ಬೌದ್ಧಿಕ ಸಾಮಥ್ರ್ಯವೂ ವೃದ್ಧಿಸುತ್ತದೆ. ಸಮಾಜದಲ್ಲಿ ಹೆಚ್ಚು ಗೌರವ ಸಿಗುವಂತಾಗುತ್ತದೆ ಎಂದರು.

ಶಾಸ್ತ್ರೀಯ ಹಿಂದೂಸ್ಥಾನಿ ಸಂಗೀತದಲ್ಲಿ ಖ್ಯಾತ ಗಾಯಕ ಭೀಮ್‍ಸೇನ್ ಜೋಷಿಯವರ ಸಂಗೀತ ಕೇಳುವುದೇ ಒಂದು ಆನಂದ. ಅವರ ಗಾಯನ ತಲೆದೂಗುವಂತಹದು ಎಂದರು.

ಇದೇ ಸಂದರ್ಭದಲ್ಲಿ ಸಂಗೀತ ಶಿಕ್ಷಕಿ ಎಂ.ವಿ. ಅನಿತಾ ಅವರ ಮಾರ್ಗದರ್ಶನದಲ್ಲಿ ಶಾಲಾ ವಿದ್ಯಾರ್ಥಿಗಳಿಂದಲೇ ಬಿಡಿಸಿದ ಖ್ಯಾತ ಸಂಗೀತಗಾರರ ಭಾವಚಿತ್ರಗಳನ್ನು ಒಳಗೊಂಡ ಸಂಗೀತ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಈ ಶಾಲೆಯಲ್ಲಿ ಸಂಗೀತ ಪಾಠವನ್ನು ಅಳವಡಿಸಿಕೊಂಡಿರುವುದು ಹೆಮ್ಮೆಯ ವಿಚಾರ. ವಿಶ್ವದ ಇತರೆಡೆ ಸಂಗೀತ ಕಲಿಕೆಗೂ ಹೆಚ್ಚು ಆದ್ಯತೆ ನೀಡಲಾಗಿದೆ. ನಮ್ಮ ದೇಶದಲ್ಲಿ ಸಂಗೀತ ಕಲಿಕೆಗೆ ಹೆಚ್ಚು ಆದ್ಯತೆ ನೀಡಬೇಕಾಗಿದೆ ಎಂದರು.

ಬಿಇಓ ಶಿವಕುಮಾರ್ ಮಾತನಾಡಿ, ಸಂಗೀತ ಹಾಗೂ ಯೋಗ ದಿನಾಚರಣೆ ಒಂದೇ ದಿನ ಬಂದಿರುವುದು ಯೋಗಾಯೋಗ. ಸಂಗೀತದಂತೆ ಯೋಗವೂ ಕೂಡ ಆರೋಗ್ಯಕ್ಕೆ ಒಳ್ಳೆಯದು ಎಂದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಏರ್ಪಾಡಾಗಿತ್ತು. ಮುಖ್ಯ ಶಿಕ್ಷಕ ಪ್ರಕಾಶ್, ರೇಖಾಚಿತ್ರ ಬಾಲ ಕಲಾವಿದರಾದ ಎಂ. ಅನ್ಮೋಳ್ ರಥನ್‍ರಾವ್ ಮತ್ತು ಎಸ್. ರಕ್ಷಿತ್ ಹಾಗೂ ಇನ್ನಿತರರು ಹಾಜರಿದ್ದರು.