ಇರಾನಿ ಗ್ಯಾಂಗ್ ಸರಗಳ್ಳರಿಬ್ಬರ ಬಂಧನ

ಮೈಸೂರು: ಇಬ್ಬರು ಇರಾನಿ ಗ್ಯಾಂಗ್‍ನ ಇಬ್ಬರು ಸರಗಳ್ಳರನ್ನು ಬಂಧಿಸಿರುವ ನಜರ್‍ಬಾದ್ ಪೊಲೀಸರು, ಇವರಿಂದ 56 ಗ್ರಾಂ ತೂಕದ 2 ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ. ತಮಿಳುನಾಡಿನ ಸೆಲ್ವಾಪುರಂ ಹಿಮಾನ್ಯುಯಲ್ ನಗರದ ನಿವಾಸಿಗಳಾದ ಮುಸ್ತಫಾ ಅಲಿಯಾಸ್ ಶಾಲು(19), ಅಬೂ ತಾಲೀಫ್(20) ಬಂಧಿತ ಸರಗಳ್ಳರು. ಜೂ.8 ರಂದು ನಜರ್‍ಬಾದ್ ಪೊಲೀಸರು ಖಾಸಗಿ ಹೋಟೆಲ್ ಹಿಂಭಾಗದ ರಸ್ತೆಯಲ್ಲಿ ಈ ಖದೀಮರಿಬ್ಬರು ಪಾರ್ಕಿಂಗ್‍ನಲ್ಲಿ ನಿಲ್ಲಿಸಿದ್ದ ಬೈಕ್ ಕದಿಯಲು ಯತ್ನಿಸುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

ಇಬ್ಬರನ್ನು ಠಾಣೆ ಕರೆತಂದು ವಿಚಾರಣೆ ನಡೆಸಿದಾಗ ಮೇ ತಿಂಗಳಲ್ಲಿ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣ ಸಮೀಪದ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿ, ವಿದ್ಯಾರಣ್ಯಪುರಂ ಮತ್ತು ನಜರ್‍ಬಾದ್ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಇವರ ಮಾಹಿತಿ ಮೇರೆಗೆ ಚಿನ್ನದ ಸರ ವಶಪಡಿಸಿಕೊಂಡಿದ್ದು, ಕೃತ್ಯಕ್ಕೆ ಬಳಸಿದ್ದ ಬೈಕ್ ಇನ್ನು ಪತ್ತೆಯಾಗಬೇಕಿದೆ ಎಂದು ತಿಳಿಸಿದ್ದಾರೆ. ಪತ್ತೆ ಕಾರ್ಯದಲ್ಲಿ ನಜರ್‍ಬಾದ್ ಇನ್ಸ್‍ಪೆಕ್ಟರ್ ಎಂ.ಮಹದೇವಸ್ವಾಮಿ, ಸಿಬ್ಬಂದಿಗಳಾದ ಪ್ರಕಾಶ್, ಹಿರಣ್ಣಯ್ಯ, ಉಮೇಶ್, ಮಧುಕೇಶ್, ಪಿ.ಚೇತನ್, ಶ್ರೀನಿವಾಸ ಇದ್ದರು.