ಮಳೆಗಾಲಕ್ಕೂ ಮುನ್ನ ಪ್ರವಾಹ ನಿರಾಶ್ರಿತರ ಮನೆ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನ

ಮಡಿಕೇರಿ: ಕಳೆದ ಮಳೆಗಾಲದಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತದ ಸಂದರ್ಭ ಮನೆಗಳನ್ನು ಕಳೆದುಕೊಂಡಿರುವ ನಿರಾಶ್ರಿತ ಕುಟುಂಬಗಳಿಗೆ ಕರ್ನಾಟಕ ರಾಜೀವ್ ಗಾಂಧಿ ಪುನರ್ವಸತಿ ನಿಗಮದಿಂದ ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ. ಈ ಮನೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆಯಾದರೂ ಎಲ್ಲಾ ಮನೆಗಳ ನಿರ್ಮಾಣ ಕಾಮಗಾರಿ ಮಳೆಗಾಲ ಪ್ರಾರಂಭವಾಗುವ ಮನ್ನ ಪೂರ್ಣಗೊಳ್ಳುವುದು ಅನುಮಾನವಾಗಿದೆ.

ಮನೆಗಳ ನಿರ್ಮಾಣ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಮೊದಲ ಹಂತವಾಗಿ 400ಕ್ಕೂ ಹೆಚ್ಚು ಮನೆಗಳ ನಿರ್ಮಾಣ ವಾಗಲಿದೆ ಎಂದು ತಿಳಿದು ಬಂದಿದೆ. ಆದರೆ, ಜಿಲ್ಲೆಯಲ್ಲಿ ಈಗಾಗಲೇ ಅಲ್ಲಲ್ಲಿ ಮಳೆ ಬೀಳಲು ಪ್ರಾರಂಭವಾಗಿದ್ದು, ಸಂತ್ರಸ್ತ ಗ್ರಾಮಗಳ ಗ್ರಾಮಸ್ಥರ ನಿದ್ದೆಗೆಡಿಸಿದೆ. ಪ್ರಸಕ್ತ ಮುಂಗಾರು ಮಳೆ ಸಮೀಪಿಸುತ್ತಿದ್ದರೂ ಮನೆಗಳ ಪುನರ್ ನಿರ್ಮಾಣ ಕಾಮಗಾರಿ ಮುಗಿಯದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ಕೂಡ ಕೇಳಿ ಬರುತ್ತಿದೆ. ಮಾತ್ರವಲ್ಲದೇ, ಸರಕಾರದ ಮನೆಗಳು ನಿರಾಶ್ರಿತರಿಗೆ ಧಕ್ಕುವುದಾದರೂ ಯಾವಾಗ ಎಂಬ ಪ್ರಶ್ನೆ ಜನವಲಯದಲ್ಲಿ ಮೂಡಿದೆ.

ಮಡಿಕೇರಿ ಸಮೀಪದ ಕರ್ಣಂಗೇರಿ ಗ್ರಾಮದಲ್ಲಿ 38 ಮನೆಗಳನ್ನು ನಿರ್ಮಿಸಲಾಗು ತ್ತಿದ್ದು, ಈ ಮನೆಗಳ ಕೆಲಸ ಶೇ.90ರಷ್ಟು ಪೂರ್ಣ ಗೊಂಡಿದೆ. ಈ ಮನೆಗಳ ಕಾಮಗಾರಿ ಪೂರ್ಣ ಗೊಳಿಸಿದ ಬಳಿಕ ಆ ಪ್ರದೇಶಕ್ಕೆ ಮೂಲಭೂತ ಸೌಲಭ್ಯಗಳಾದ ರಸ್ತೆ, ವಿದ್ಯುತ್, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಇನ್ನಿತರ ವ್ಯವಸ್ಥೆ ಗಳನ್ನು ಒದಗಿಸಬೇಕಿದೆ.

ಮದೆನಾಡು ಗ್ರಾ.ಪಂ. ವ್ಯಾಪ್ತಿಯ ಗೋಳಿಕಟ್ಟೆ ಬಳಿ 80 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, 40 ಮನೆಗಳ ಅಡಿಪಾಯ ಕಾಮಗಾರಿ ಮುಕ್ತಾಯಗೊಂಡಿದೆ. ಮಾತ್ರವಲ್ಲದೇ, ಸುಮಾರು 40 ಮನೆಗಳ ಕೆಲಸ ಭಾಗಶ ಪೂರ್ಣ ಹಂತಕ್ಕೆ ತಲಪಿದ್ದು, ಅಲ್ಲಿಯೂ ಕೂಡ ಮೂಲ ಭೂತ ಸೌಕರ್ಯ ಆಗಬೇಕಿದೆ. ಅದರೊಂದಿಗೆ ಈ ಮನೆಗಳಿಗೆ ಕಿಟಕಿ, ಬಾಗಿಲುಗಳ ಅಳವಡಿಕೆ ಕಾರ್ಯ ಇನ್ನಷ್ಟೇ ನಡೆಯಬೇಕಿದೆ.

ಜಂಬೂರುವಿನಲ್ಲಿ 318 ಮನೆ: ರಾಜೀವ್ ಗಾಂಧಿ ಗ್ರಾಮೀಣ ಪುನರ್ವಸತಿ ನಿಗಮದಿಂದ ಮಾದಾಪುರ ಬಳಿಯ ಜಂಬೂರು ಗ್ರಾಮದಲ್ಲಿ 318 ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, ಈ ಪೈಕಿ ಈಗಾಗಲೇ 55 ಮನೆಗಳಿಗೆ ಅಡಿಪಾಯ ಸಹಿತ ಕೆಲಸ ಮುಂದುವರಿದಿದೆ. ಬಹುತೇಕ ಮನೆಗಳು ಮುಕ್ತಾಯ ಹಂತದಲ್ಲಿದ್ದು, ಮೊದಲ ಹಂತದಲ್ಲಿ 55 ಮನೆಗಳನ್ನು ಪೂರ್ಣಗೊಳಿಸಿ ಕಿಟಕಿ, ಬಾಗಿಲುಗಳ ಸಹಿತ ಮೂಲಭೂತ ಸೌಲಭ್ಯ ಒದಗಿಸಲಾಗುತ್ತಿದೆ. ಉಳಿದ ಮನೆಗಳ ಅಡಿಪಾಯ ನಿರ್ಮಿಸಿದ್ದು, ಹಂತ ಹಂತವಾಗಿ ಕಾಮಗಾರಿ ನಡೆಸಲಾಗುತ್ತಿದೆ

ಇನ್ಫೋಸಿಸ್‍ನಿಂದ 200 ಮನೆ: ಜಂಬೂರು ವಿನ ಈ ನಿವೇಶನದಲ್ಲಿ ಕರ್ನಾಟಕ ಸರಕಾರದ ನಿರ್ದೇಶನದಂತೆ 200 ಮನೆಗಳನ್ನು ಇನ್ಫೋಸಿಸ್ ಸಂಸ್ಥೆಯಿಂದ ಸಂತ್ರಸ್ತರಿಗೆ ನಿರ್ಮಿಸಿ ಕೊಡುವ ಒಡಂಬಡಿಕೆಯಾಗಿದೆ. ಈ ಹಿನ್ನಲೆಯಲ್ಲಿ ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥರು ಮಾರ್ಚ್ 25ರಂದು ಅಲ್ಲಿ ಭೂಮಿಪೂಜೆ ನೆರವೇರಿಸಿ, ಮನೆ ನಿರ್ಮಾಣದ ಕಾಮಗಾರಿಯನ್ನು ಆರಂಭಿಸಿದ್ದಾರೆ.

ಹಂತ ಹಂತವಾಗಿ ಪೂರ್ಣ: ಕರ್ಣಂಗೇರಿ ಯಲ್ಲಿ ನಿರ್ಮಿಸುತ್ತಿರುವ 38 ಮನೆಗಳು ಹಾಗೂ ಮದೆನಾಡು ಸಮೀಪದ ಗೋಳಿಕಟ್ಟೆಯಲ್ಲಿ 80 ಮನೆಗಳ ಕಾಮಗಾರಿಯನ್ನು ಮೊದಲ ಹಂತ ವಾಗಿ ಮೇ ಅಂತ್ಯಕ್ಕೆ ಪೂರ್ಣಗೊಳಿಸ ಲಾಗುತ್ತದೆ. ಜೂನ್ ಅಂತ್ಯಕ್ಕೆ ಮಾದಾಪುರ ಬಳಿ ಜಂಬೂರು ವಿನ ಮನೆಗಳ ಸಹಿತ ಒಟ್ಟು 423 ಮನೆಗಳ ಕೆಲಸ ಪೂರ್ಣಗೊಳ್ಳುವುದಾಗಿ ನಿಗಮದ ಮೂಲಗಳು ತಿಳಿಸಿವೆ.