ಶಿಕ್ಷಣ ಸಂಸ್ಥೆ ನಡೆಸುವುದು ತುಂಬಾ ಕಷ್ಟ

ಶಿಕ್ಷಣ ಸಂಸ್ಥೆ ಕಟ್ಟಿದ ಧರ್ಮಪ್ರಕಾಶರ ಶ್ರಮ ಸ್ಮರಣಾರ್ಹ: ವಾಸು

ಮೈಸೂರು,ನ.11(ಎಸ್‍ಪಿಎನ್)-ಇತ್ತೀಚಿನ ದಿನಗಳಲ್ಲಿ ಸಂಪನ್ಮೂಲವನ್ನು ಕ್ರೋಢೀಕರಿಸಿ, ಖಾಸಗಿ ಶಿಕ್ಷಣ ಸಂಸ್ಥೆ ಗಳನ್ನು ನಡೆಸುವ ಮಾರ್ಗ ದಿನೇದಿನೆ ಕಠಿಣವಾಗುತ್ತಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಋಣಾತ್ಮಕ ಭಾವನೆ ಬಿಟ್ಟು, ಧನಾತ್ಮಕ ಭಾವನೆ ರೂಢಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ವಾಸು ಆಗ್ರಹಿಸಿದರು.

ಮೈಸೂರಿನ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಧರ್ಮಪ್ರಕಾಶ ಡಿ.ಬನು ಮಯ್ಯ ವಿದ್ಯಾಸಂಸ್ಥೆಯ ಶತಮಾನೋ ತ್ಸವ ಕಾರ್ಯಕ್ರಮದ ಮುಕ್ತಾಯ ಸಮಾ ರಂಭದಲ್ಲಿ ಭಾಗವಹಿಸಿ ಮಾತನಾಡಿ ದರು.  ಒಂದು ವಿದ್ಯಾಸಂಸ್ಥೆಯನ್ನು ಕಟ್ಟಿ ನೂರು ವರ್ಷ ನಡೆಸುವುದು ಸಾಮಾನ್ಯ ಸಂಗತಿಯಲ್ಲ. ಇದರ ಹಿಂದೆ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ ವರ್ಗದ ಶ್ರಮವೂ ಅಡಗಿದೆ. ನಾನೂ ಸಹ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದು, ಈ ಕ್ಷೇತ್ರದ ನೋವು -ನಲಿವು ತಿಳಿದಿದ್ದೇನೆ. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸು ವುದು ಕಷ್ಟಕರ. ದಿನ ಬೆಳಗಾದರೆ, ಸರ್ಕಾ ರದ ನೀತಿ-ನಿಯಮಗಳು ಬದಲಾಗು ತ್ತವೆ. ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ಗುಣಾ ತ್ಮಕ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ ಬೇಸರ ವ್ಯಕ್ತಪಡಿಸಿದರು.

ಸರ್ಕಾರ ನಡೆಸುವ ಶಾಲಾ-ಕಾಲೇಜು ಗಳಲ್ಲೇ ಶೇ.70 ರಷ್ಟು ಬೋಧಕರ ಕೊರತೆ ಯಿದೆ. ಇದನ್ನು ನೀಗಿಸಲು ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರನ್ನು ನೇಮಿಸಲಾಗು ತ್ತಿದೆ. ಇದರಿಂದ ಶೈಕ್ಷಣಿಕ ಸ್ಥಿರತೆ ಕಾಪಾ ಡುವುದು ಸಾಧ್ಯವೇ? ಗುಣಮಟ್ಟ ಶಿಕ್ಷಣ ನೀಡುವಲ್ಲಿ ಸರ್ಕಾರಿ ಸಂಸ್ಥೆಗಳೇ ವಿಫಲ ವಾಗುತ್ತಿರುವಾಗ, ರಾಜ್ಯ ಸರ್ಕಾರ  ಕಠಿಣ ನಿಯಮಗಳನ್ನು ರೂಪಿಸಿ, ಪಾಲಿಸು ವಂತೆ ಖಾಸಗಿ ಶಿಕ್ಷಣಸಂಸ್ಥೆಗಳ ಮೇಲೆ ಒತ್ತಡ ಹೇರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ಹಳೆಯ ವಿದ್ಯಾರ್ಥಿಗಳಾದ ಮೇಯರ್ ಪುಷ್ಪಾಲತಾ ಅವರ ಪತಿ ಜಗನ್ನಾಥ್, ಉಪಮೇಯರ್ ಶಫೀ ಅಹ್ಮದ್, ಮಾಜಿ ಮೇಯರ್‍ಗಳಾದ ಟಿ.ಬಿ.ಚಿಕ್ಕಣ್ಣ, ಶ್ರೀಕಂಠಯ್ಯ, ಶಾಸಕ ಸಾ.ರಾ.ಮಹೇಶ್ ಅನೇಕರು ರಾಜ ಕಾರಣದಲ್ಲಿ ಉತ್ತಮ ನಾಯಕತ್ವ ಬೆಳಸಿ ಕೊಂಡಿದ್ದಾರೆ. ಇದಕ್ಕೆಲ್ಲಾ ಕಾರಣ ಬನುಮಯ್ಯ ಸಂಸ್ಥೆಯ ಶೈಕ್ಷಣಿಕ ವಾತಾವರಣ ಎಂದರು.

ಧರ್ಮಪ್ರಕಾಶ ಡಿ.ಬನುಮಯ್ಯ ಅವರು, 100 ವರ್ಷಗಳ ಹಿಂದೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಿಂದ ಮೈಸೂ ರಿಗೆ ಬಂದು ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದ್ದರ ಹಿಂದೆ ರೋಚಕ ಕತೆ ಇದೆ. ಮೈಸೂರಿನ ಸುತ್ತಮುತ್ತಲಿನ ಹಳ್ಳಿಗಳಿಂದ ಬರುತ್ತಿದ್ದ ರೈತರಿಗೆ ಆಶ್ರಯ ನೀಡುತ್ತ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವಲ್ಲಿ ಅವರ ಶ್ರಮ ದೊಡ್ಡದು. ಅರಮನೆ ಮುಂಭಾಗದಲ್ಲಿ ಶೈಕ್ಷಣಿಕ ಸಂಸ್ಥೆಗೆ ಜಾಗ ಮೀಸಲಿಟ್ಟಿ ರುವುದು ಸಾಮಾನ್ಯ ಸಂಗತಿಯಲ್ಲ. ಇದೆಲ್ಲದರ ಹಿಂದೆ ಸೇವಾ ಮನೋ ಭಾವವಿದೆ ಎಂದು ಬಣ್ಣಿಸಿದರು.

ವೇದಿಕೆಯಲ್ಲಿ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಎಲೆರಾಂಪು ರದ ಕುಂಚಿಟಗರ ಮಠದ ಶ್ರೀ ಹನು ಮಂತ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇ ಗೌಡ, ಡಾ.ಕೆ.ಎನ್.ತಿಮ್ಮಯ್ಯ, ಎಸ್.ಜೆ. ಲಕ್ಷ್ಮೇಗೌಡ, ಡಾ.ಎನ್.ತಿಮ್ಮಯ್ಯ, ಡಾ.ಸಿ.ಬಿ. ತಿಮ್ಮಯ್ಯ, ಪ್ರೊ.ಪಿ.ವಿ.ನರಹರಿ, ಆರ್. ರಮೇಶ್‍ಕುಮಾರ್, ವಿ.ಸಿ.ಕೋಮಲ್ ಸೇರಿದಂತೆ ಇತರರಿದ್ದರು.