ಸಾಲು ರಜೆ: ರಾಮನಾಥಪುರದಲ್ಲಿ ‘ಜನ’ಜಾತ್ರೆ

ರಾಮನಾಥಪುರ:  ಸಾಲು ಸಾಲು ರಜೆ ಪರಿಣಾಮ ರಾಮನಾಥಪುರದ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಜಾತ್ರಾ ಮಹೋ ತ್ಸವದಲ್ಲಿ ಪಾಲ್ಗೊಳ್ಳಲು ಭಕ್ತ ಸಾಗರವೇ ಹರಿದು ಬಂದಿತು.

ರಾಮನಾಥಪುರದಲ್ಲಿ ರಥೋತ್ಸವ ಮುಗಿದು ಹಲವು ದಿವಸಗಳೇ ಕಳೆದಿದ್ದರೂ ಜಾತ್ರೆಯಲ್ಲಿ ಜನಸಂದಣಿ ಸೇರುತ್ತಿರುವುದು ವಿಶೇಷವಾಗಿದೆ. ಶನಿವಾರ, ಭಾನು ವಾರ, ಮಂಗಳವಾರ ರಜೆ ಇದ್ದ ಕಾರಣ ಶೈಕ್ಷಣಿಕ ಪ್ರವಾಸ ಕ್ಕಾಗಿ ಆಗಮಿಸಿದ ರಾಜ್ಯದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕ ವರ್ಗದವರು ಕುಟುಂಬ ಸಮೇತ ರಾಗಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲು ಬೆಳಿಗ್ಗೆ ಯಿಂದಲೇ ಶ್ರೀ ಕ್ಷೇತ್ರದತ್ತ ಧಾವಿಸಿದ್ದರಿಂದ ಎತ್ತ ನೋಡಿ ದರೂ ಜನಸ್ತೋಮವೇ ಕಾಣುತ್ತಿತ್ತು.

ಕಾವೇರಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ಭಕ್ತರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಕೆಲವರು ಕೇಶ ಮುಂಡನ ಮಾಡಿಸಿಕೊಂಡು ಹರಕೆ ತೀರಿಸಿದರು. ಶ್ರೀ ಅಗಸ್ತ್ಯೇಶ್ವರ, ಶ್ರೀ ರಾಮೇಶ್ವರ ದೇವಸ್ಥಾನದಲ್ಲಿಯೂ ಭಕ್ತರು ಪೂಜೆ ಸಲ್ಲಿಸಿದರು. ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಹೊರಾಂಗಣದಲ್ಲಿ ನೆತ್ತಿ ಸುಡುವ ಉರಿ ಬಿಸಿಲನ್ನೂ ಲೆಕ್ಕಿಸದೇ ಸರದಿ ಸಾಲಿನಲ್ಲಿ ಕಾದು ನಿಂತಿದ್ದರು.

ನಂತರ ಭಕ್ತರು ಕಾವೇರಿ ನದಿಯ ವಹ್ನಿಪುಷ್ಕರಣಿಗೆ ಭೇಟಿ ನೀಡಿ ಮೀನುಗಳಿಗೆ ಪುರಿ, ಕಡಲೆಕಾಯಿ ಎಸೆದು ಭಾರಿ ಗಾತ್ರದ ಮೀನುಗಳ ಆಟವನ್ನು ಕಣ್ತುಂಬಿ ಕೊಂಡರು. ಜಾತ್ರೆಯಲ್ಲಿ ವ್ಯಾಪಾರ ಭರಾಟೆಯೂ ಜೋರಾಗಿದ್ದು ಜನರಿಂದ ಗಿಜಿಗುಡುತ್ತಿದೆ. ಸಾಲು-ಸಾಲು ರಜಾ ದಿನಗಳ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನಕ್ಕೆ ಹೆಚ್ಚಾಗಿದೆ ಎಂದು ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಪಾರುಪತ್ತೇಗಾರ ರಮೇಶ್‍ಭಟ್ ಹೇಳಿದರು.