ಫೆ.1ರಿಂದ ಸುತ್ತೂರು ಜಾತ್ರೆ ಜನಜಾಗೃತಿ ಯಾತ್ರೆ

ನಂಜನಗೂಡು: ಸುತ್ತೂರು ಶ್ರೀ ಕ್ಷೇತ್ರದಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವು ಇದೇ ಫೆ. 1 ರಿಂದ 6 ರವರೆಗೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನಿಧ್ಯ ದಲ್ಲಿ ನಡೆಯಲಿದೆ ಎಂದು ಜಾತ್ರಾ ಮಹೋ ತ್ಸವದ ಕಾರ್ಯದರ್ಶಿಗಳಾದ ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್ ಮಂಗಳವಾರ ತಿಳಿಸಿದ್ದಾರೆ.

6 ದಿನಗಳ ಕಾಲ ನಡೆಯುವ ಈ ಜಾತ್ರೆ ಮಹೋತ್ಸವದಲ್ಲಿ ಫೆ. 3ರಂದು ರಥೋತ್ಸವ, 5ರಂದು ತೆಪ್ಪೋತ್ಸವ ಹಾಗೂ ಕೊಂಡೋತ್ಸವ, ಹಾಲ್ಹರವಿ ಉತ್ಸವ ಹಾಗೂ ಲಕ್ಷ ದೀಪೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ವೈವಿಧ್ಯಮಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳು ನಡೆಯಲಿವೆ. ಮಠಾಧೀಶರು, ರಾಜಕಾರಣಿಗಳು, ಸಾಹಿತಿಗಳು, ಸೇರಿದಂತೆ ವಿವಿಧ ಗಣ್ಯರು ಜಾತ್ರಾ ಮಹೋ ತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಪ್ರತಿ ವರ್ಷದಂತೆ ಈ ಬಾರಿಯೂ ಭಜನಾ ಮೇಳ, ವಸ್ತು ಪ್ರದರ್ಶನ, ಕೃಷಿಮೇಳ, ಸ್ಥಳದಲ್ಲೇ ಚಿತ್ರ ರಚಿಸುವ ಸ್ಪರ್ಧೆ, ಚಿತ್ರ ಸಂತೆ, ಸೋಬಾನೆ ಪದ, ರಂಗೋಲಿ, ಗಾಳಿಪಟ ಸ್ಪರ್ಧೆ, ಕುಸ್ತಿ ಪಂದ್ಯಾವಳಿ, ದೇಸಿ ಆಟಗಳು, ಸಾರ್ವ ಜನಿಕರಿಗೆ ಗ್ರಾಮೀಣ ಆಟಗಳ ಸ್ಪರ್ಧೆ, ದನಗಳ ಜಾತ್ರೆ, ಸಾಂಸ್ಕೃತಿಕ ಮೇಳ, ಕಲಾ ತಂಡ ಗಳಿಂದ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಲಿವೆ. ಸಾಮೂಹಿಕ ವಿವಾಹವನ್ನೂ ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.

ಗಣ್ಯರು ಭಾಗಿ: ಫೆ. 1ರಿಂದ 6ರವರೆಗೆ ನಡೆ ಯುವ ಜಾತ್ರೋತ್ಸವದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಡಿ.ವಿ. ಸದಾನಂದಗೌಡ, ಜಗದೀಶ್ ಎಸ್. ಶೆಟ್ಟರ್, ಸಚಿವರಾದ ಡಿ.ಕೆ. ಶಿವಕುಮಾರ್, ಹೆಚ್.ಡಿ. ರೇವಣ್ಣ, ಡಿ.ಸಿ. ತಮ್ಮಣ್ಣ, ಎಂ.ಸಿ. ಮನಗೊಳಿ, ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್, ಎಂ.ಬಿ. ಪಾಟೀಲ್, ಎನ್.ಎಚ್. ಶಿವಶಂಕರರೆಡ್ಡಿ, ಕೃಷ್ಣಭೈರೇಗೌಡ, ಆರ್.ವಿ. ದೇಶಪಾಂಡೆ, ಯು.ಟಿ. ಖಾದರ್, ಸಿ. ಪುಟ್ಟರಂಗಶೆಟ್ಟಿ, ಪಿ.ಟಿ. ಪರಮೇಶ್ವರ ನಾಯ್ಕ್, ಕೇಂದ್ರ ಸಚಿವರಾದ ರಮೇಶ್ ಜಿಗಜಿಣಗಿ ಸೇರಿದಂತೆ ಮಾಜಿ ಸಚಿವರು, ಶಾಸಕರು, ಹಿರಿಯ ಪತ್ರಕರ್ತರು, ಕಲಾವಿದರು, ಸಾಹಿತಿಗಳು, ಭಾಗವಹಿಸಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಇತ್ತೀಚೆಗೆ ತುಮಕೂರಿನ ಶ್ರೀ ಸಿದ್ಧಗಂಗಾ ಶ್ರೀಗಳಾದ ಡಾ. ಶಿವಕುಮಾರಸ್ವಾಮಿಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಡಾ. ಶಿವಕುಮಾರಸ್ವಾಮಿಗಳವರ ಬೃಹತ್ ಭಾವಚಿತ್ರವನ್ನು ಜಾತ್ರೋತ್ಸವದಲ್ಲಿ ಪ್ರಮುಖ 5 ಸ್ಥಳಗಳಲ್ಲಿ ಹಾಕಲಾಗುವುದು ಎಂದರು.

ಪ್ರತಿದಿನ 40ರಿಂದ 45 ಸಾವಿರ ಭಕ್ತಾದಿಗಳು ತಂಗಲು ವ್ಯವಸ್ಥೆ ಮಾಡಲಾಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಸಾರಿಗೆ ಸಂಸ್ಥೆಗಳು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಂದ ಸುತ್ತೂರು ಶ್ರೀ ಸುತ್ತೂರು ಕ್ಷೇತ್ರಕ್ಕೆ ವಿಶೇಷ ಬಸ್ಸುಗಳ ಸೇವೆ ಒದಗಿಸಲಿವೆ ಎಂದರು.

ಕೃಷಿ ಮೇಳ : ಈ ಬಾರಿ ಒಂದು ಎಕರೆ ಪ್ರದೇಶದಲ್ಲಿ ಕೃಷಿ ಬ್ರಹ್ಮಾಂಡವನ್ನು ಮಾಡಿದ್ದು 112 ಬೆಳೆಗಳನ್ನು ಬೆಳೆಯಲಾಗಿದೆ, ಸಾಧ್ಯವಾದಷ್ಟು ಕಡಿಮೆ ಜಾಗದಲ್ಲಿ ಹೆಚ್ಚು ಬೆಳೆಗಳನ್ನು ಬೆಳೆಯುವ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಅರುಣ್‍ರವರು ತಿಳಿಸಿದ್ದು, ಪಾರಂಪರಿಕ ಬೆಳೆಗಳಾದ ನಂಜನಗೂಡು ರಸಬಾಳೆ, ಮೈಸೂರಿನ ಚಿಗುರು ಎಲೆ, ಮಲ್ಲಿಗೆ ಹೂವು, ಈರನಗೆರೆ ಬದನೆ ಬೆಳೆಯಲಾಗಿದೆ.

10 ಲಕ್ಷ ಭಕ್ತರ ನಿರೀಕ್ಷೆ: ಈ ಬಾರಿಯ ಸುತ್ತೂರು ಜಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅದಕ್ಕೆ ತಕ್ಕಂತೆಯೇ ದಾಸೋಹ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮಠಾಧೀಶರಿಗೆ, ವಿದ್ಯಾರ್ಥಿಗಳಿಗೆ, ಗಣ್ಯರಿಗೆ ಸೇರಿದಂತೆ 5 ಕಡೆ ಪ್ರತ್ಯೇಕ ಪ್ರಸಾದದ ವಿತರಣೆಗೆ ವ್ಯವಸ್ಥೆಯಾಗಿದೆ.