ಮೈಸೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೈಸೂರಿನ ಐಟಿಸಿ-ವಾವ್ ಮತ್ತು ಮೈಸೂರು ಮಹಾನಗರಪಾಲಿಕೆ ಜಂಟಿಯಾಗಿ ಮೈಸೂರಿನಲ್ಲಿ ಪರಿಸರ ಜಾಗೃತಿ ಜಾಥಾ ನಡೆಸಿ, ಬಳಿಕ ಡಾ.ರಾಜ್‍ಕುಮಾರ್ ಉದ್ಯಾನದಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನ ಆಚರಿಸಿದರು. ಡಾ.ರಾಜ್‍ಕುಮಾರ್ ಉದ್ಯಾನವನದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉದ್ಯಾನದಲ್ಲಿ 50ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಪುಷ್ಪಲತಾ ಜಗನ್ನಾಥ್, ಇಂದು ಕಾಡು ನಾಶದಿಂದ ವಾಯುಮಾಲಿನ್ಯ ಜಾಸ್ತಿಯಾಗುತ್ತಿದೆ. ಅದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಉತ್ತಮ ಗಾಳಿ, ಮಳೆ ಕೊರತೆ ಎದುರಾಗುತ್ತಿದೆ. ಬಿಸಿಲಿನ ತಾಪ ಹೆಚ್ಚುತ್ತಿದೆ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ನಾವು ಕಾಡು ಉಳಿಸಬೇಕಿದೆ. ಹೆಚ್ಚು ಮರಗಳನ್ನು ಬೆಳೆಸಬೇಕಿದೆ. ವಾಯು ಮಾಲಿನ್ಯದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಿದೆ. ಇದಕ್ಕಾಗಿ ನಗರವನ್ನು ಹಸಿರೀಕರಣಗೊಳಿಸಲು ಉದ್ಯಾನವನಗಳಲ್ಲಿ ಸಸಿಗಳನ್ನು ನೆಟ್ಟು, ಅದನ್ನು ಪೋಷಿಸುವ ಕಾರ್ಯಕ್ರಮಗಳನ್ನು ಪಾಲಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಪಾಲಿಕೆ ಸದಸ್ಯ ಸತೀಶ್, ಪಾಲಿಕೆ ಆರೋಗ್ಯಾಧಿಕಾರಿಗಳಾದ ಡಾ.ಜಯಂತ್, ಡಾ.ಡಿ.ಜಿ. ನಾಗರಾಜು, ಪರಿಸರ ಇಂಜಿನಿಯರ್ ಮೈತ್ರಿ, ಐಟಿಸಿ-ವಾವ್ ಮುಖ್ಯಸ್ಥ ಚಂದ್ರಶೇಖರ್ ಸಂಯೋಜಕರಾದ ಮೋಹನ್ ಸಿದ್ಧಿ, ಎಂ.ಶಿವರಾಜ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಚಿಕ್ಕ ಗಡಿಯಾರದ ಬಳಿಯಿಂದ ಆರಂಭವಾದ ಪರಿಸರ ಜಾಗೃತಿ ಜಾಥಾದಲ್ಲಿ ಉಳಿಸಿ ಉಳಿಸಿ-ಪರಿಸರ ಉಳಿಸಿ, ಮರ ಬೆಳೆಸಿ-ಕಾಡು ಉಳಿಸಿ, ನೈರ್ಮಲ್ಯ ಭಾರತ- ನಿರ್ಮಲ ಭಾರತ, ವಾಯು ಮಾಲಿನ್ಯ ತಡೆಯಿರಿ ಇತ್ಯಾದಿ ಘೋಷಣೆಗಳುಳ್ಳ ಭಿತ್ತಿಪತ್ರಗಳನ್ನು ಹಿಡಿದಿದ್ದರು. ವಿನೋಬ ರಸ್ತೆ, ಗಾಂಧಿ ವೃತ್ತ, ದೊಡ್ಡ ಗಡಿಯಾರದ ಮೂಲಕ ಜಾಥಾ ಡಾ.ರಾಜ್‍ಕುಮಾರ್ ಉದ್ಯಾನವನ ತಲುಪಿತು.