ಜಯಪ್ಪ ಹೊನ್ನಾಳಿ ಕವಿತೆಗಳಲ್ಲಿ ಪ್ರೇಮ ಕಾವ್ಯಗಳಿಗೆ ಪ್ರಥಮ ಆದ್ಯತೆ

ಮೈಸೂರು: ಕವಿ ಜಯಪ್ಪ ಹೊನ್ನಾಳಿ ರಚಿತ ಕವಿತೆ ಗಳಲ್ಲಿ ಪ್ರೇಮ ಕಾವ್ಯಗಳಿಗೆ ಪ್ರಥಮ ಆದ್ಯತೆ ನೀಡಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಕಬ್ಬಿನಾಲೆ ವಸಂತ್ ಬಾರಧ್ವಜ್ ಅಭಿಪ್ರಾಯಪಟ್ಟರು.

ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಪಕ್ಕದಲ್ಲಿ ರುವ ಜಿಲ್ಲಾ ಕಸಾಪ ಸಭಾಂಗಣದಲ್ಲಿ ಕಸಾಪ ವತಿಯಿಂದ ಆಯೋಜಿಸಿದ್ದ `ಕವಿ ಜಯಪ್ಪ ಹೊನ್ನಾಳಿ ಅವರ ಜಯಕವಿ ಭಾವಗೀತ ಲೋಕ- ಒಂದು ಅವಲೋ ಕನ’ ಕುರಿತು ಮಾತನಾಡಿದರು.

ಹಿರಿಯ ಕವಿಗಳಾದ ದ.ರಾ.ಬೇಂದ್ರ, ಜಿ.ಎಸ್.ಶಿವರುದ್ರಪ್ಪ, ಕೆ.ಎಸ್.ನರಸಿಂಹ ಸ್ವಾಮಿ ಹಾಗೂ ಹೆಚ್.ಎಸ್.ವೆಂಕಟೇಶ್ ಮೂರ್ತಿ ಸೇರಿದಂತೆ ಹಲವು ಖ್ಯಾತನಾಮ ಕವಿಗಳು ಪ್ರೇಮಕಾವ್ಯಗಳನ್ನು ಬರೆದಿದ್ದಾರೆ. ಇವರ ಸಾಲಿಗೆ ಹೊನ್ನಾಳಿ ಅವರ ಕಾವ್ಯಗಳು ಸರಿಸಮಾನವಾಗಿವೆ ಎಂದರು.

ಉತ್ತಮ ಕಾವ್ಯಗಳು ರಚನೆಯಾಗಬೇಕಾ ದರೆ, ಕವಿಗೆ ಸಮಾಜದ ನೋವು- ನಲಿವಿನ ಒಡನಾಟವಿರಬೇಕು. ಕವಿ ಸುತ್ತಲೂ ಕಾವ್ಯಕ್ಕೆ ಪ್ರೇರಣೆಯಾಗುವ ಭಾವನಾತ್ಮಕ, ಅವಿಭಕ್ತ ಕುಟುಂಬದ ಪರಿಚಯವಿರಬೇಕು. ಇವೆಲ್ಲಾ ಲಕ್ಷಣಗಳನ್ನು ಜಯಪ್ಪ ಹೊನ್ನಾಳಿ ಅಳವಡಿಸಿ ಕೊಂಡು ಕವಿತೆ ರಚನೆ ಮಾಡಿದ್ದಾರೆ ಎಂದರು.

ಹಿರಿಯ ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ ಮಾತನಾಡಿ, ಕವಿತೆಗಳನ್ನು ಎಲ್ಲರೂ ಬರೆಯುತ್ತಾರೆ. ಆದರೆ, ಪ್ರೇಮ ಕಾವ್ಯಗಳನ್ನು ರಚಿಸುವುದು ಕಷ್ಟದ ಕೆಲಸ. ಇಂತಹ ಸವಾಲುಗಳನ್ನು ಕವಿ ಜಯಪ್ಪ ಹೊನ್ನಾಳಿ ಮೀರಿ ಕವಿತೆ ರಚಿಸಿದ್ದಾರೆ. ಇವರ ಕವಿತೆಗಳಲ್ಲಿ ಪ್ರಕೃತಿ, ಹೆಣ್ಣಿನ ಶೋಷಣೆ, ಪ್ರೇಮ ಕವಿತೆಗಳಿಗೆ ಆದ್ಯತೆ ನೀಡಿರುವುದು ಉತ್ತಮ ಬೆಳವಣ ಗೆ ಎಂದರು.
ಇದೇ ಸಂದರ್ಭದಲ್ಲಿ ಗಾಯಕರಾದ ನಿತಿನ್ ರಾಜಾರಾಮ್ ಶಾಸ್ತ್ರಿ, ರಾಜಲಕ್ಷ್ಮಿ. ವಸಿಷ್ಠ ಅವರು ಜಯಪ್ಪ ಹೊನ್ನಾಳಿ ರಚಿತ ಕವಿತೆಗಳನ್ನು ಹಾಡಿದರು.

ವೇದಿಕೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ರಂಗಕರ್ಮಿ ರಾಜಶೇಖರ ಕದಂಬ ಸೇರಿದಂತೆ ಇತರರಿದ್ದರು.