ಶ್ರೀಮಂಗಲದಲ್ಲಿ ಜೆಡಿಎಸ್ ಬಹಿರಂಗ ಸಭೆ

ಗೋಣ ಕೊಪ್ಪಲು: ಅಧಿಕಾರಕ್ಕೆ ಬಂದ 24 ಘಂಟೆಗಳಲ್ಲಿ ರೈತರ ಕೃಷಿ ಸಾಲ ಮನ್ನಾ ಮಾಡುವುದಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಸಂಕೇತ್ ಪೂವಯ್ಯ ಹೇಳಿದರು.

ದಕ್ಷಿಣ ಕೊಡಗಿನ ಶ್ರೀಮಂಗಲ ಪಟ್ಟಣದಲ್ಲಿ ಜೆಡಿಎಸ್ ಪಕ್ಷದ ಬಹಿರಂಗ ಉದ್ಘಾಟಿಸಿ ಅವರು ಮಾತನಾಡಿದರು.
ಕಾಫಿ ಬೆಳೆಗಾರನ ಸಮಸ್ಯೆಗಳು ನಿರಂತರವಾಗಿದೆ. ಸುಳ್ಳಿನ ಕಂತೆಯನ್ನು ಹೊತ್ತು ಬರುವ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಬಹಿರಂಗವಾಗಿ ಮತದಾರರು ಪ್ರಶ್ನೆಗಳನ್ನು ಕೇಳುವ ಅವಕಾಶ ಬಂದಿದೆ. ರಾಜ್ಯದಲ್ಲಿ ಕುಮಾರ ಸ್ವಾಮಿಯವರ ಸರ್ಕಾರ ಬರುವುದು ಸಮೀಕ್ಷೆಯಿಂದ ದೃಢಪಟ್ಟಿದೆ. ಕಾಫಿ ಬೆಳೆಗಾರರ ಸಂಪೂರ್ಣ ಕೃಷಿ ಸಾಲ ಈ ಬಾರಿ ಜೆ.ಡಿ.ಎಸ್ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮನ್ನಾವಾಗಲಿದೆ ಎಂದು ಸಂಕೇತ್ ಪೂವಯ್ಯ ಹೇಳಿದರು.

ಚುನಾವಣೆ ಸಮೀಪಿಸುವ ದಿನದಲ್ಲಿ ರಾಷ್ಟೀಯ ಪಕ್ಷಗಳು ಕುಕ್ಕೆಗಳಲ್ಲಿ ಹಣವನ್ನು ತಂದು ಬಡವರ ಮತವನ್ನು ಪಡೆಯುತ್ತಾರೆ. ಇಂತಹ ಮೈಲಿಗೆಯನ್ನು ನಾವು ತಡೆಯಬೇಕು. ಈ ಬಾರಿ ಪಕ್ಷಗಳ ಚುನಾವಣೆಯ ಬದಲು ಅಭ್ಯರ್ಥಿಗಳ ಚುನಾವಣೆ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ನಡೆಯಲಿದೆ. 1994ರಲ್ಲಿ ದೇವೇಗೌಡರು ಜಿಲ್ಲೆಗೆ ಮಂತ್ರಿಗಿರಿ ನೀಡಿದ್ದರು. ದೇವೆಗೌಡರ ಋಣ ತೀರಿಸಬೇಕಾದ ಜನಪ್ರತಿನಿಧಿ ಇಂದು ಬೇರೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ಟೀಕಿಸಿದರು.

ಗಣಪತಿ ಆತ್ಮಹತ್ಯೆಪ್ರಕರಣದಲ್ಲಿ ಹೆಚ್.ಡಿ. ಕುಮಾರ ಸ್ವಾಮಿ ನೊಂದ ಕುಟುಂಬದ ಪರ ನಿಂತಿದ್ದರು. ನ್ಯಾಯಕ್ಕಾಗಿ ಹೋರಾಟ ನಡೆಸಿದ್ದರು, ಇಲ್ಲಿಯ ಜನಪ್ರತಿನಿಧಿಗಳಿಂದ ಗಣಪತಿ ಆತ್ಮಹತೈ ಪ್ರಕರಣಕ್ಕೆ ನ್ಯಾಯ ಸಿಗಲಿಲ್ಲ, ಇದನ್ನು ತಾರ್ಕಿಕ ಅಂತ್ಯದವರೆಗೆ ಹೋರಾಟ ನಡೆಸಿ ಸಿಬಿಐ ಮೆಟ್ಟಿಲೇರುವಂತೆ ಮಾಡಿದ್ದೇವೆ. ರೈತ, ಶ್ರಮಿಕ ಇರುವ ಈ ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆ ಆಗಲಿದೆ. ರೈತರ ಪಕ್ಷಕ್ಕೆ ಆಶೀರ್ವಾದ ಮಾಡುವಂತೆ ಸಂಕೇತ್ ಮನವಿ ಮಾಡಿದರು.

ಜೆ.ಡಿ.ಎಸ್ ನ ಜಿಲ್ಲಾವಕ್ತಾರ ಮಚ್ಚಮಾಡ ಕಾರ್ಯಪ್ಪ ಮಾತನಾಡಿ, ಶ್ರೀಮಂಗಲ ನಾಡು ಹೋರಾಟದ ತವರೂರು, ರೈತರ ಮೇಲೆ ಬರೆ ಎಳೆಯುತ್ತಿದ್ದರು ಈ ಭಾಗದ ಜನ ಪ್ರತಿನಿಧಿಗಳು ರೈತರ ಸಂಕಷ್ಟಕ್ಕೆ ಶ್ರಮಿಸಲಿಲ್ಲ. ಸೂಕ್ಷ ಪರಿಸರತಾಣ ವಿಚಾರದಲ್ಲಿ ಶಾಸಕರು, ಸಂಸದರು ಜನತೆಯ ಹೋರಾಟಕ್ಕೆ ಬೆಂಬಲಿಸಲಿಲ್ಲ ಎಂದು ಆರೋಪಿಸಿದರು.

ಹೋರಾಟಗಾರ ಮಾಜಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕ್ರು ನಾಚಪ್ಪ ಮಾತನಾಡಿ ರೈತರ, ಕಾರ್ಮಿಕರ ಆಶಾ ಕಿರಣ ಕುಮಾರಸ್ವಾಮಿ. ರೈತರ ಸಾಲ ಮನ್ನಾವಾದಲ್ಲಿ ಕಾಫಿ ಬೆಳೆಗಾರರ ಸಮಸ್ಯೆ ನೀಗಲಿದೆ. ಕುಮಾರಸ್ವಾಮಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಬೆಳೆಗಾರರಾದ ನಮ್ಮನ್ನು ಗೌರವದಿಂದ ಮಾತನಾಡಿಸಿದ್ದಾರೆ. ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದಾರೆ. ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು ಈ ಬಾರಿ ಗೆದ್ದು ಬಿಡುವ ಭ್ರಮೆಯಲ್ಲಿ ಇದ್ದಾರೆ, ಆದರೆ ಮತದಾರರು ಈ ಬಾರಿ ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸಿ ರೈತರ ಪಕ್ಷಕ್ಕೆ ಬೆಂಬಲಿಸಬೇಕೆಂದರು.

ಕೊಡಗು ಜಿಲ್ಲಾ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಅಜ್ಜಮಾಡ ಮುತ್ತಮ್ಮ, ಜಿಲ್ಲಾ ರೈತ ಸಂಘದ ಸಂಚಾಲಕ ಚಿಮ್ಮಂಗಡ ಗಣೇಶ್ ಮಾತನಾಡಿದರು. ಕ್ಷೇತ್ರ ಅಧ್ಯಕ್ಷ ಎಸ್.ಹೆಚ್ ಮತೀನ್, ಪಕ್ಷದ ಮುಖಂಡರುಗಳಾದ ಕಾಳೀಮಾಡ ದಿಲೀಪ್, ಉಳುವಂಗಡ ದತ್ತ, ಸಜನ್ ಉತ್ತಪ್ಪ, ಕರ್ತಮಾಡ ನರೇಂದ್ರ, ಹೆಚ್.ಎಂ ಚಂದ್ರ, ರೆನ್ನಿ, ಬಾಚೀರ ಸೋಮಣ್ಣ, ರೋಹನ್ ರೈತ ಮುಖಂಡರಾದ ಹ್ಯಾರಿ ಸೋಮೇಶ್, ಪರಮಾಲೆ ಗಣೇಶ್ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭ ಹಲವು ಯುವಕರು ರಾಷ್ಟ್ರೀಯ ಪಕ್ಷಗಳನ್ನು ತೊರೆದು ಜೆ.ಡಿ.ಎಸ್ ಸೇರ್ಪಡೆಗೊಂಡರು.