ಮೈಸೂರಲ್ಲಿ ಜೆಡಿಎಸ್ ಕಾರ್ಯಕರ್ತರ ಧರಣಿ

ಮೈಸೂರು,ಡಿ.23(ಆರ್‍ಕೆ)- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಖಂಡಿಸಿ ಮಾಜಿ ಸಚಿವ ಸಾ.ರಾ.ಮಹೇಶ್ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಮೈಸೂರಲ್ಲಿ ಪ್ರತಿಭಟನೆ ನಡೆಸಿದರು.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಸೂಕ್ಷ್ಮ ವಿಚಾರಗಳ ಸಂಬಂಧ ದೇಶದಾದ್ಯಂತ ಹೊಸ ಕಾಯ್ದೆ ರೂಪಿಸುವಾಗ ಅಥವಾ ಇರುವ ಕಾಯ್ದೆಯನ್ನು ತಿದ್ದುಪಡಿ ಮಾಡುವಾಗ ಮೊದಲು ಜನರಿಗೆ ಅದರ ಅನುಕೂಲ-ಅನಾನುಕೂಲ ಉಂಟಾಗುವ ಪರಿಣಾಮಗಳ ಬಗ್ಗೆ ತಿಳುವಳಿಕೆ ಮೂಡಿಸಿ ನಾಗರಿಕರ ವಿಶ್ವಾಸ ಗಳಿಸಬೇಕಾದುದು ಸರ್ಕಾರದ ಜವಾ ಬ್ದಾರಿ ಎಂದು ಧರಣಿ ನಿರತರು ತಿಳಿಸಿದರು.

ಈ ವೇಳೆ ಮಾತನಾಡಿದ ಸಾ.ರಾ.ಮಹೇಶ್, ಕೇಂದ್ರದ ಬಿಜೆಪಿ ಸರ್ಕಾರವು ತುಘಲಕ್ ರೀತಿ ಏಕಸ್ವಾಮ್ಯ ನೀತಿ ಹೊಂದಿದ್ದು, 144 ರೀತ್ಯಾ ನಿಷೇಧಾಜ್ಞೆ ಹೊರಡಿಸಿ ಜನರ ಪ್ರತಿರೋಧವನ್ನು ಹತ್ತಿಕ್ಕುತ್ತಿದೆ ಎಂದರು. ಮಂಗಳೂರು ಗಲಭೆಯಲ್ಲಿ ಇಬ್ಬರು ಪ್ರಾಣ ಕಳೆದುಕೊಂಡು ಪೊಲೀ ಸರೂ ಸೇರಿದಂತೆ ಹಲವರಿಗೆ ಗಾಯಗಳಾಗಿದೆಯಲ್ಲದೆ, ಸಾರ್ವಜನಿಕರ ಆಸ್ತಿ ನಾಶವಾಗಿದೆ. ಪೊಲೀಸರ ಮೂಲಕ ಗೋಲಿಬಾರ್ ನಡೆಸಿದ ಸರ್ಕಾರವು ಜನರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.

ಕೇವಲ ಹಿಂದುತ್ವದ ಹೆಸರಿನಲ್ಲಿ ದೇಶವನ್ನು ವಿಭಜಿಸು ವುದು ಸರಿಯಲ್ಲ. ಸರ್ವಧರ್ಮೀಯರೂ ಸಹಬಾಳ್ವೆ ನಡೆ ಸಲು ಸಂವಿಧಾನ ಅವಕಾಶ ನೀಡಿದೆ. ಧರ್ಮ ಸಹಿಷ್ಣುತೆ ಯಂತಹ ವಿಷಯದಲ್ಲಿ ಯಾವುದೇ ಕಾಯ್ದೆ ಜಾರಿಗೆ ತರುವ ಮೊದಲು ಜನರಿಗೆ ತಿಳಿಸಿ, ಅದರಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂಬುದನ್ನು ಮನದಟ್ಟು ಮಾಡಬೇಕಿತ್ತು ಎಂದೂ ಸಾ.ರಾ.ಮಹೇಶ್ ತಿಳಿಸಿದರು.

ಮಂಗಳೂರಲ್ಲಿ ನಡೆದ ಗಲಭೆ ಮತ್ತು ಗೋಲಿಬಾರ್ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತ ಸ್ಥರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕು, ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದೂ ಒತ್ತಾಯಿಸಿದರು. ಶಾಸಕ ಅಶ್ವಿನ್ ಕುಮಾರ್, ಮೈಸೂರು ಜಿಲ್ಲಾ ಜೆಡಿಎಸ್ ಅಧ್ಯಕ್ಷ ನರಸಿಂಹ ಸ್ವಾಮಿ, ಉಪ ಮೇಯರ್ ಶಫಿ ಅಹಮದ್, ಮಾಜಿ ಮೇಯರ್ ಆರ್.ಲಿಂಗಪ್ಪ, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್ಲಾ, ಮುಖಂಡರುಗಳಾದ ಕೆ.ವಿ. ಮಲ್ಲೇಶ್, ಆರ್.ಮುದ್ದುರಾಜ್, ಎಂ.ಎನ್.ರಾಮು, ಪ್ರೇಮಾ ಶಂಕರೇಗೌಡ, ಎಂ.ಶಿವಣ್ಣ, ಮಾದೇಗೌಡ, ರಿಜ್ವಾನ್ ಅಹ ಮದ್, ಸೋಮಶೇಖರ್, ರಮಣಿ, ನಮ್ರತಾ ರಮೇಶ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.