ಕೆನರಾ ಬ್ಯಾಂಕ್, ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಕನ್ನಡ ಬಳಕೆ ಬಗ್ಗೆ ಕನ್ನಡ ಜಾಗೃತಿ ಸಮಿತಿ ತೃಪ್ತಿ

ಮೈಸೂರು: ಆಡಳಿತ ದಲ್ಲಿ ಕನ್ನಡ ಬಳಕೆಯನ್ನು ಪೂರ್ಣ ಪ್ರಮಾಣ ದಲ್ಲಿ ಅನುಷ್ಠಾನಗೊಳಿಸುವ ಸಂಬಂಧ ಮೈಸೂರು ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಬುಧವಾರ ಮೈಸೂರಿನ ನಜರ್‍ಬಾದ್ ನಲ್ಲಿರುವ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯಲ್ಲಿ ಪರಿಶೀಲನೆ ನಡೆಸಿ ಕನ್ನಡೇ ತರ ಅಧಿಕಾರಿ ಹಾಗೂ ಸಿಬ್ಬಂದಿಗಾಗಿ ಕನ್ನಡ ಕಲಿಕೆ ಶಿಬಿರ ಆಯೋಜಿಸುವಂತೆ ಬ್ಯಾಂಕಿನ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸುತ್ತೋಲೆ, ಆದೇಶ, ನೋಟೀಸ್, ಕಡತ ದಲ್ಲಿನ ಟಿಪ್ಪಣಿ, ಮೊಹರುಗಳು ಸೇರಿದಂತೆ ಇನ್ನಿತರ ದಾಖಲೆಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಿರುವುದು ಕಂಡು ಬಂತು. ಬ್ಯಾಂಕಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕನ್ನಡೇತರ ಅಧಿಕಾರಿ ಗಳು ಹಾಗೂ ಸಿಬ್ಬಂದಿ ಇರುವುದನ್ನು ಮನ ಗಂಡ ಸಮಿತಿ ಸದಸ್ಯರು, ಕನ್ನಡ ಕಲಿಕೆ ಶಿಬಿರ ಹಮ್ಮಿಕೊಳ್ಳಲು ಸೂಚನೆ ನೀಡಿದರು.
ಕನ್ನಡ ಕೋಶ ಸ್ಥಾಪಿಸಿ ಪ್ರಾದೇಶಿಕ ಕಚೇರಿ ವ್ಯಾಪ್ತಿಯ ಎಲ್ಲಾ ಶಾಖೆಗಳಲ್ಲಿ ಇರುವ ಕನ್ನಡೇತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಯನ್ನು ಪಟ್ಟಿ ಮಾಡಿ ಅವರಿಗೆ ಕನ್ನಡ ಕಲಿಕೆ ಶಿಬಿರ ನಡೆಸಲು ವೇದಿಕೆ ಸಿದ್ಧಪಡಿಸಿಕೊಳ್ಳ ಬೇಕು. ಇದಕ್ಕೆ ಅಗತ್ಯ ಸಹಕಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪಡೆದು ಕೊಳ್ಳಲು ಅವಕಾಶವಿದೆ ಎಂದು ವಿವರಿಸಿದರು.

ಫಲಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ: ಕೆನರಾ ಬ್ಯಾಂಕಿನ ಪ್ರಾದೇಶಿಕ ಕಚೇರಿಯಲ್ಲಿ ನಾಮಫಲಕಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಿರುವ ಬಗ್ಗೆ ಜಾಗೃತಿ ಸಮಿತಿ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ತ್ರಿಭಾಷಾ ಸೂತ್ರದಂತೆ ಇಲ್ಲಿನ ನಾಮಫಲಕ ಗಳಲ್ಲಿ ಮೊದಲು ಕನ್ನಡ, ಬಳಿಕ ಹಿಂದಿ ಹಾಗೂ ಕೊನೆಯಲ್ಲಿ ಇಂಗ್ಲಿಷ್ ಬಳಕೆ ಮಾಡಿದ್ದನ್ನು ಸದಸ್ಯರು ಸ್ವಾಗತಿಸಿದರು.

ಅಲ್ಲದೆ, ಸಾಲ ಮನ್ನಾ ಕೋರಿ ಗ್ರಾಮಾಂ ತರ ಪ್ರದೇಶದಿಂದ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಬ್ಯಾಂಕಿನ ಮಂಡಲ ಪ್ರಬಂಧಕರು ಉತ್ತರವನ್ನು ನೀಡಲು ಕನ್ನಡ ವನ್ನೇ ಬಳಸಿರುವ ಪತ್ರಗಳನ್ನು ಗಮನಿ ಸಿದ ಜಾಗೃತಿ ಸಮಿತಿ ಸದಸ್ಯರು ಈ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.

ಮೊಹರು-ಚಲನ್ ಕನ್ನಡದಲ್ಲಿ: ಕೆನರಾ ಬ್ಯಾಂಕಿನ ಮೊಹರು ಹಾಗೂ ಚಲನ್ ಕನ್ನಡದಲ್ಲಿ ಇಲ್ಲದಿರುವ ಬಗ್ಗೆ ಜಾಗೃತಿ ಸಮಿತಿ ಸದಸ್ಯ ಸ.ರ.ಸುದರ್ಶನ್, ಆಡ ಳಿತಕ್ಕೆ ಸಂಬಂಧಿಸಿದಂತೆ ಅನೇಕ ವಿಷಯ ಗಳಲ್ಲಿ ಕನ್ನಡಕ್ಕೆ ಬ್ಯಾಂಕ್ ಆದ್ಯತೆ ನೀಡಿದೆ. ಈ ಬಗ್ಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಮೊಹರುಗಳು ಹಿಂದಿ-ಇಂಗ್ಲಿಷ್‍ನಲ್ಲಿವೆ. ಎಸ್‍ಬಿ ಚಲನ್ ಕೂಡ ಕನ್ನಡದಲ್ಲಿ ಇಲ್ಲ. ನಗದು ಜಮಾ, ಹಿಂಪಡೆಯುವಿಕೆ ಅರ್ಜಿ ಗಳೂ ಕನ್ನಡದಲ್ಲಿ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿ, ಇದನ್ನು ಸರಿಪಡಿಸಿ ಕೊಳ್ಳುವಂತೆ ಸಲಹೆ ನೀಡಿದರು.

ಪ್ರಾದೇಶಿಕ ಭಾಷೆಗೆ ಮೊದಲ ಆದ್ಯತೆ ನೀಡಬೇಕೆಂದು ಕೇಂದ್ರ ಸರ್ಕಾರದ ಸುತ್ತೋಲೆ ಯಲ್ಲೇ ಉಲ್ಲೇಖಿಸಲಾಗಿದೆ. ಆ ಪ್ರಕಾರ ತ್ರಿಭಾಷಾ ಸೂತ್ರ ಅನುಸರಿಸಬೇಕಿದ್ದು, ಮೊದಲ ಆದ್ಯತೆಯನ್ನು ಪ್ರಾದೇಶಿಕ ಭಾಷೆಗೆ ನೀಡ ಬೇಕು. ಈ ಹಿನ್ನೆಲೆಯಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಲು ಕಾನೂನಾತ್ಮಕವಾಗಿಯೇ ಅವಕಾಶವಿದೆ ಎಂದರು. ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕಿ ಕೆ.ಬಿ.ಗೀತಾ, ಹಿರಿಯ ವ್ಯವ ಸ್ಥಾಪಕ ಶ್ರೀಕಂಠಪ್ರಸಾದ್ ಅಧಿಕಾರಿ ಸೇರಿ ದಂತೆ ಸಿಬ್ಬಂದಿ ವರ್ಗ ಪರಿಶೀಲನೆ ವೇಳೆ ಸಹಕರಿಸಿದರು. ಇದಕ್ಕೂ ಮುನ್ನ ಮೈಸೂ ರಿನ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಪರಿಶೀಲನೆ ನಡೆಸಲಾಯಿತು. ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಎಂ.ಬಿ.ವಿಶ್ವ ನಾಥ್, ಸ.ರ.ಸುದರ್ಶನ್, ಮೈಲಹಳ್ಳಿ ರೇವಣ್ಣ, ಪ್ರಭಾಮಣಿ, ಮಡ್ಡಿಕೆರೆ ಗೋಪಾಲ್, ಜಿಲ್ಲಾ ಕಸಾಪ ಅಧ್ಯಕ್ಷ ಹಾಗೂ ಸಮಿತಿ ಸದಸ್ಯ ಡಾ.ವೈ.ಡಿ.ರಾಜಣ್ಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹಾಗೂ ಸಮಿತಿ ಕಾರ್ಯದರ್ಶಿ ಹೆಚ್.ಚೆನ್ನಪ್ಪ, ಕಚೇರಿ ಸಹಾಯಕ ಬಸವರಾಜು ಪರಿ ಶೀಲನಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.