ಕವಿ ಭಾವೋಪಯೋಗಿ! ವಿಜ್ಞಾನಿ ಲೋಕೋಪಯೋಗಿ!!

ಮೈಸೂರು: ಕವಿ ಸಮಾಜದ ನೋವು-ನಲಿವುಗಳ  ಭಾವೋಪಯೋಗಿಯಾದರೆ, ವಿಜ್ಞಾನಿ, ಜ್ಞಾನಾರ್ಜನೆ ಮೂಲಕ ಲೋಕೋಪಯೋಗಿ ಯಾಗುತ್ತಾನೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ವೈ.ಡಿ. ರಾಜಣ್ಣ ಅಭಿಪ್ರಾಯಪಟ್ಟರು.

ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಕಸಾಪ ಸಭಾಂಗಣದಲ್ಲಿ ಕರ್ನಾಟಕ ವಿಜ್ಞಾನ ಪರಿಷತ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಆಯೋಜಿಸಿದ್ದ `ವಿಜ್ಞಾನ ಸಾಹಿತ್ಯ ಸಂಜೆ’ ಶೀರ್ಷಿಕೆಯಡಿ `ಕವಿ-ವಿಜ್ಞಾನಿ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ನಾವು ಅಭಿವೃದ್ಧಿಯ ವೇಗದಲ್ಲಿ ನಿಸರ್ಗವನ್ನು ಮನ ಬಂದಂತೆ ಬಳಕೆ ಮಾಡುತ್ತಿದ್ದೇವೆ. ಇದಕ್ಕೆ ಕೊಡಗು, ಕೇರಳದಲ್ಲಾದ ಪ್ರಕೃತಿ ವಿಕೋಪವೇ ಸೂಕ್ತ ಉದಾ ಹರಣೆ. ಆದ್ದರಿಂದ ಅಭಿವೃದ್ಧಿ ಯೋಜನೆಗಳ ಬಗ್ಗೆ ವಿಜ್ಞಾನಿ, ಸಾಹಿತಿ ಹಾಗೂ ಸಾರ್ವಜನಿಕರ ನಡುವೆ ಒಂದು ತರ್ಕವಾಗಬೇಕು ಎಂದರು.

ನಿರ್ಬಂಧಿತ ಅರಣ್ಯ ಪ್ರದೇಶದಲ್ಲಿ ಆರ್ಥಿಕಾಭಿ ವೃದ್ಧಿಗೆ ನಿಸರ್ಗವನ್ನು ಮನಬಂದಂತೆ ಬಳಕೆ ಮಾಡಿ ಕೊಳ್ಳುತ್ತಿದ್ದೇವೆ. ಇದನ್ನು ತಡೆಗಟ್ಟಬೇಕಾದರೆ, ಅಭಿವೃದ್ಧಿ ಆಧಾರಿತ ತಂತ್ರಜ್ಞಾನಕ್ಕೆ, ಭಾವನಾತ್ಮಕ ಸ್ಪರ್ಶವಿರ ಬೇಕು ಎಂದರಲ್ಲದೆ, ಚಿಂತಕ ಪ್ರೊ.ಬರಗೂರು ರಾಮ ಚಂದ್ರಪ್ಪನವರ ಪ್ರಕಾರ, ನಾವು ಬಹಿರಂಗ ಸ್ವಚ್ಛತಾ ಅಭಿಯಾನಕ್ಕೆ ಸಾಕಷ್ಟು ಪ್ರಚಾರ ಮಾಡುತ್ತಿದ್ದೇವೆ. ಆದರೆ, ಅಂತರಂಗದ ಶುದ್ಧಿಗೆ ಯಾರೂ ಪ್ರಚಾರ ಮಾಡುತ್ತಿಲ್ಲ. ಇದರ ವ್ಯಾಖ್ಯಾನಕ್ಕೂ ಮುಂದಾಗುತ್ತಿಲ್ಲ. ಇದರಿಂದ ಸಮಾಜದಲ್ಲಿ ದಿನೇದಿನೆ ಮಾನವೀಯ ಮೌಲ್ಯಗಳು ಪಾತಾಳದತ್ತ ಮುಖ ಮಾಡುತ್ತಿವೆ ಎಂದಿರುವುದು ಅರ್ಥಗರ್ಭಿತ ಎಂದರು.

ಮಾನವಿಕ ಮತ್ತು ವಿಜ್ಞಾನ ವಿಭಾಗ ಜೊತೆಜೊತೆಯಲ್ಲಿ ಕೆಲಸ ಮಾಡಬೇಕು. ಇದರಿಂದ ನಮ್ಮನ್ನಾಳುವ ಸರ್ಕಾರ ಗಳು ಹಮ್ಮಿಕೊಳ್ಳುವ ಜನಪರ ಅಭಿವೃದ್ಧಿಯ ಸಾಧಕ- ಬಾಧಕಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದಂತಾಗುತ್ತದೆ. ಆದ್ದರಿಂದ ಕವಿ-ವಿಜ್ಞಾನಿ ನಡುವೆ ಇರುವ ಸಾಮಾಜಿಕ ಆಲೋಚನೆ ಕ್ರಮಗಳನ್ನು ಬೆಸೆಯುವ ಕ್ರಮವಾಗಬೇಕು. ಇದಕ್ಕಾಗಿಯೇ ಕವಿ ಭಾವೋಪಯೋಗಿಯಾದರೆ, ವಿಜ್ಞಾನಿ ಲೋಕೋಪಯೋಗಿಯಾಗುತ್ತಾನೆ ಎಂದು ಅಭಿಪ್ರಾಯಪಟ್ಟರು.

ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಂ.ಆರ್.ನಾಗರಾಜ್ ಮಾತನಾಡಿ, ಕವಿ, ವಿಜ್ಞಾನಿ ನಡುವೆ ಬರುವ ಕೂಡು ಗೆರೆಯನ್ನು ಇನ್ಮುಂದೆ ಹಾಕಬಾರದು. ಏಕೆಂದರೆ, ಜನಪರ ಕವಿ ಸಮಾಜದೊಳಗೆ ಪಡೆದುಕೊಂಡ ಅನು ಭವವನ್ನು ಕಾವ್ಯದ ಮೂಲಕ ಅಭಿವ್ಯಕ್ತಿಗೊಳಿಸಿದರೆ, ವಿಜ್ಞಾನಿ, ಜ್ಞಾನಾರ್ಜನೆಯ ಮೂಲಕ ಪಡೆದ ಜ್ಞಾನ ವನ್ನು ಸಮಾಜದ ಒಳಿತಿಗಾಗಿ ಬಳಸುತ್ತಾನೆ. ಇಬ್ಬರ-ಧ್ವನಿಗೆ ಸಾಹಿತ್ಯ ಪರಿಷತ್ ಏಕದನಿಯಾಗಿ ಇಂದಿನ ಕಾರ್ಯಕ್ರಮವನ್ನು ರೂಪಿಸಿರುವುದು ಉಪಯುಕ್ತ ಎಂದು ಅಭಿಪ್ರಾಯಪಟ್ಟರು. ಸಭೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಎನ್.ಎಂ.ಶಿವಪ್ರಕಾಶ್, ಕಸಾಪ ಜಿಲ್ಲಾ ಕಾರ್ಯದರ್ಶಿ ಡಾ.ಜಯಪ್ಪ ಹೊನ್ನಾಳಿ, ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಸೇರಿದಂತೆ ಇತರರಿದ್ದರು.