‘ಕನ್ನಡವೇ ಸತ್ಯ’ ಸಂಗೀತ ಸಂಜೆಯಲ್ಲಿ ಖ್ಯಾತ ಗಾಯಕರ ಗಾನ ಮಾಧುರ್ಯ

ಮೈಸೂರು: ಸುಂದರ ಇಳಿ ಸಂಜೆಯಲಿ ಸಿಂಗಾರಗೊಂಡಿದ್ದ ವೇದಿಕೆಯಲ್ಲಿ ಗಾನಗಾರುಡಿಗ ಸಿ.ಅಶ್ವತ್ಥ್ ಅವರ ಭಾವಗೀತೆಗಳ ಗಾಯನ ಕಲಾ ರಸಿಕರ ಮನಗೆದ್ದಿತು. ಮೈಸೂರಿನ ಪುರ ಭವನದ ಆವರಣದಲ್ಲಿ ಭಾವರೂಪಕ ಪ್ರತಿ ಷ್ಠಾನ ಸಂಸ್ಥೆ ಡಾ.ಸಿ.ಅಶ್ವತ್ಥ್ ಅವರ 79ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ‘ಕನ್ನಡವೇ ಸತ್ಯ’ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಸಂಗೀತ ಕಟ್ಟಿ, ರಮೇಶ್ ಚಂದ್ರ, ಪಂಚಮ್ ಹಳಿಬಂಡಿ, ಕೆ.ಎ.ಸುರೇಖ, ಶ್ವೇತಾ ಪ್ರಭು, ದೊಡ್ಡಪ್ಪ ಮಾದಾರ, ರಾಮಕೃಷ್ಣ ಪೂಜಾರ, ಮೈಸೂರು ಗುರುರಾಜ್, ಶಿವಕುಮಾರ್ ಮೌರ್ಯ, ಚಂದ್ರು ಮತ್ತಿತ ರರ ಸುಮಧುರ ಕಂಠದಿಂದ ಹೊರ ಹೊಮ್ಮಿದ ಭಾವಗೀತೆಗಳು ಸಂಗೀತ ಪ್ರಿಯರು ತಲೆದೂಗುವಂತೆ ಮಾಡಿದವು.

ಮೊದಲಿಗೆ ಗಾಯಕರಾದ ರಮೇಶ್ ಚಂದ್ರ, ಪಂಚಮ್ ಹಳಿಬಂಡಿ, ಕೆ.ಎ. ಸುರೇಖ ಅವರು ‘ನಾವು ಭಾರತೀಯರು’ ಹಾಡನ್ನು ಹಾಡುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಪ್ರಸಿದ್ಧ ಹಿನ್ನೆಲೆ ಗಾಯಕಿ ಸಂಗೀತ ಕಟ್ಟಿ ಅವರು, ‘ಮುಗಿಲ ಮಾರಿಗೆ ರಾಗರತಿಯ’, ‘ಘಮ ಘಮ ಘಮಾಡಿಸ್ತಾವ’, ‘ಆವು ಈವಿನ ನಾವು ನೀವಿಗೆ ಆನು ತಾನದ ತನನನಾ’, ಹಾಡುಗಳನ್ನು ಹಾಡಿದರೆ, ಗಾಯಕ ರಮೇಶ್ ಚಂದ್ರ ‘ಸಂಜೆಯ ರಾಗಕೆ’, ಮುನಿಸು ತರವೆ’, ‘ಕಾಣದ ಕಡಲಿಗೆ’, ‘ಶ್ರಾವಣ ಬಂತು’ ಹಾಡನ್ನು ಹಾಡಿ ಕಲಾ ಭಿಮಾನಿಗಳನ್ನು ರಂಜಿಸಿದರು.

ಗಾಯಕ ಪಂಚಮ್ ಹಳಿಬಂಡಿ ಅವರು, ‘ನಿನ್ನ ಪ್ರೇಮದ ಪರಿಯ’, ‘ತರವಲ್ಲ ತಗಿ ನಿನ್ನ’, ‘ಕೊಡಗಾನ ಕೋಳಿ ನುಂಗಿತ್ತಾ’, ‘ಬಳೆಗಾರ ಚೆನ್ನಯ್ಯ’ ಹಾಡುಗಳನ್ನು ಹಾಡಿದರೆ, ಗಾಯಕ ರಾಮಕೃಷ್ಣ ಪೂಜಾ ರಬ ಅವರು, ‘ಒಳಿತು ಮಾಡು ಮನುಷ’, ‘ಕುರುಬರೋ ನಾವು ಕುರುಬರೋ’, ‘ಬೋಧ ಒಂದೇ ಬ್ರಹ್ಮ ನಾದ ಒಂದೇ’ ಹಾಡುಗಳನ್ನು ಹಾಡಿದರು. ಗಾಯಕಿ ಶ್ವೇತಾ ಪ್ರಭು ಅವರು, ‘ಯಂತಾ ಮೋಜಿನ ಕುದುರಿ’, ‘ರಾಯರು ಬಂದರು’, ಹಾಡನ್ನು ಹಾಡಿದರೆ, ಗಾಯಕ ಚಂದ್ರು, ‘ಹೂ ತೋಟದ ಹಾದಿ’ ಹಾಡನ್ನು ಹಾಡಿ ಶಿಳ್ಳೆ ಚಪ್ಪಾಳೆ ಗಿಟ್ಟಸಿದರು.

ಗಾಯಕರಾದ ಮೈಸೂರು ಗುರು ರಾಜ್, ಶಿವಕುಮಾರ್ ಮೌರ್ಯ, ದೊಡ್ಡಪ್ಪ ಮಾದಾರ ಮತ್ತು ಕೆ.ಎ.ಸುರೇಖ ಅವರು, ಸಿ.ಅಶ್ವತ್ಥ್ ಅವರು ರಚಿಸಿ, ಹಾಡಿರುವ ಹಲವಾರು ಹಾಡುಗಳನ್ನು ಹಾಡಿ ಸಂಗೀತ ಪ್ರಿಯರ ಮನಗೆದ್ದರು. ಇದಕ್ಕೂ ಮೊದಲು ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಇಂತಹ ಅವಿಸ್ಮ ರಣೀಯ ಕಾರ್ಯಕ್ರಮ ನಡೆಯು ತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಚಾರದ ಅಗತ್ಯವಿದೆ ಎಂದರು.

ಸಿ.ಅಶ್ವತ್ಥ್ ಅವರು, ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ನೂರಾರು ಹಾಡುಗಳನ್ನು ಹಾಡಿ ಕನ್ನಡಿ ಗರ ಹೃದಯದಲ್ಲ್ಲಿ ಮನೆ ಮಾಡಿದ್ದಾರೆ. ಅವರು, ಯಾವಾಗಲೂ ನಮ್ಮೊಂದಿಗೆ ಇದ್ದಾರೆ. ಇಂದು ಕನ್ನಡದ ಶ್ರೇಷ್ಠ ಕವಿ ಕುವೆಂಪು ಹಾಗೂ ಗಾನಗಾರುಡಿಗ ಎಂದೇ ಖ್ಯಾತ ರಾಗಿರುವ ಸಿ.ಅಶ್ವತ್ಥ್ ಜನ್ಮ ದಿನವಾಗಿದ್ದು, ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದು ಹೇಳಿದರು.

ಇದೇ ವೇಳೆ ಖ್ಯಾತ ಹಿನ್ನೆಲೆ ಗಾಯಕಿ ಸಂಗೀತ ಕಟ್ಟಿ ಹಾಗೂ ಸಂಗೀತ ನಿರ್ದೇ ಶಕ ಮ್ಯಾಂಡೋಲಿನ್ ಪ್ರಸಾದ್ ಅವರಿಗೆ ‘ಗಾನಗಾರುಡಿಗ ಸಿ.ಅಶ್ವತ್ಥ್ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ನಗರ ಪಾಲಿಕೆ ಮಾಜಿ ಸದಸ್ಯ ಆರ್.ಸುನಂದ ಕುಮಾರ್, ಇಎಸ್‍ಐ ಆಸ್ಪತ್ರೆ ನಿರ್ದೇಶಕ ಡಾ.ರಮೇಶ್ ಜೆವೂರು, ವಕೀಲ ಚಿನ್ಮಯ್, ಭಾವರೂಪಕ ಪ್ರತಿ ಷ್ಠಾನ ಸಂಸ್ಥೆ ಅಧ್ಯಕ್ಷ ಆರ್.ಶೇಷ, ಗಾಯಕ ಕೌಡ್ಲಿ ರವೀಂದ್ರನಾಥ್ ಮತ್ತಿತರರು ಉಪಸ್ಥಿತರಿದ್ದರು.