ಪಕ್ಷಗಳ ಕಚ್ಚಾಟ:ಮೊದಲ-ಕೊನೆ ಪುಟಕ್ಕೆ ರಾಜ್ಯಪಾಲರ ಭಾಷಣ ಮೊಟಕು

ವಿಧಾನ ಮಂಡಲ ಬಜೆಟ್ ಅಧಿವೇಶನ ಪ್ರಾರಂಭ

ಬೆಂಗಳೂರು: ಮೈತ್ರಿ ಪಕ್ಷಗಳಲ್ಲಿನ ಆಂತರಿಕ ಕಚ್ಚಾಟ, ಆಪರೇಷನ್ ಕಮಲ, ಕಾಂಗ್ರೆಸ್ ಸದಸ್ಯ ರಿಂದಲೇ ಸರ್ಕಾರಕ್ಕೆ ಇರಿಸುಮುರಿಸು, ಗೋಜಲು, ಗೊಂದ ಲದ ನಡುವೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಳೆದ ಏಳು ತಿಂಗಳಲ್ಲಿ ನೀಡಿದ್ದ ಕೆಲವು ಜನಪರ ಯೋಜನೆಗಳು ಜನರ ಮನಸ್ಸಿಗೆ ನಾಟಿರಲಿಲ್ಲ. ಇಂತಹ ಕಾರ್ಯಕ್ರಮಗಳನ್ನು ರಾಜ್ಯಪಾಲ ವಜುಭಾಯ್ ವಾಲಾ ಇಂದು ವಿಧಾನಸಭೆಯಲ್ಲಿ ಬಿಂಬಿಸುವ ಕೆಲಸ ಮಾಡಿದರು.

ಹೊಸ ವರ್ಷದ ಆರಂಭದಲ್ಲಿ ವಾಡಿಕೆಯಂತೆ ವಿಧಾನ ಮಂಡಲದ ಜಂಟಿ ಸದನಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಸರ್ಕಾರ ಮಾಡಿರುವ ಪ್ರಗತಿಪರ ಯೋಜನೆ ಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಆದರೆ ಪ್ರತಿಪಕ್ಷ ಬಿಜೆಪಿ ಸರ್ಕಾರ ಸುಳ್ಳು ಸುದ್ದಿಗಳನ್ನು ರಾಜ್ಯಪಾಲರ ಮೂಲಕ ಬಿಂಬಿಸುವ ಕೆಲಸ ಮಾಡುತ್ತಿದೆ ಎಂದು ಭಾಷಣಕ್ಕೆ ಅಡ್ಡಿ ಮಾಡಿದ್ದಲ್ಲದೆ, ಸಭಾಧ್ಯಕ್ಷ ಪೀಠದ ಮುಂದೆ ಧರಣಿ ನಡೆಸಿದರು. ಇದರಿಂದ ಬೇಸತ್ತ ರಾಜ್ಯಪಾಲರು ಮೊದಲ ಹಾಗೂ ಕೊನೆಯ ಪುಟಗಳನ್ನು ಓದಿ ಭಾಷಣವನ್ನು ಮೊಟಕುಗೊಳಿಸಿ, ವಿಧಾನಸಭೆಯಿಂದ ನಿರ್ಗಮಿಸಿದರು. ಸರ್ಕಾರ ಸಿದ್ಧಪಡಿಸಿದ 22 ಪುಟಗಳಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳಲ್ಲೇ ಇಂಗ್ಲಿಷ್ ಮಾಧ್ಯಮ ಪ್ರಾರಂಭ, ರಾಜ್ಯದ ಎಲ್ಲ ಗ್ರಾಮಗಳಿಗೆ ನದಿ ಮೂಲಗಳಿಂದ ಶುದ್ಧ ಕುಡಿಯುವ ನೀರು ಒದಗಿಸುವ ಜಲಧಾರೆ, ಬೀದಿ ಬದಿಯ ಹಾಗೂ ಸಣ್ಣ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಕಲ್ಪಿಸುವ ಬಡವರ ಬಂಧು, ಅರಣ್ಯದ ಸೊಬಗು ಮರುಕಳಿಸುವ ಹಸಿರು ಕರ್ನಾಟಕ, ಮತ್ಸ್ಯ ಜೋಪಾಸನಾ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಲು ತಮ್ಮ ಸರ್ಕಾರ ಉದ್ದೇಶಿಸಿದೆ ಎಂದು ರಾಜ್ಯಪಾಲರ ಮೂಲಕ ರಾಜ್ಯದ ಜನತೆಗೆ ತಲುಪಿಸುವ ಕೆಲಸ ಮಾಡಿತು.

ಜನರಿಗೆ ಜಲಧಾರೆ: ಗ್ರಾಮೀಣ ಭಾಗದ ಜನರಿಗೆ ಪ್ರತಿನಿತ್ಯ 85 ಲೀಟರ್ ಶುದ್ಧ ಕುಡಿಯುವ ನೀರು ಕಲ್ಪಿಸಲು 53 ಸಾವಿರ ಕೋಟಿ ರೂ.ಗಳನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ವೆಚ್ಚ ಮಾಡುವುದಾಗಿ ತಿಳಿಸಿದ್ದಾರೆ. ಈಗಾಗಲೇ ಸರ್ಕಾರ ಪ್ರಕಟಿಸಿರು ವಂತೆ ಜಲಧಾರೆ ಯೋಜನೆಯಡಿ ಪ್ರಮುಖ ಜಲಾಶಯಗಳಿಂದ ಗ್ರಾಮೀಣ ಭಾಗದ ಎಲ್ಲಾ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಈಗಾಗಲೇ ವಿಸ್ತøತ ಯೋಜನಾ ವರದಿ ತಯಾರಿಕಾ ಕಾರ್ಯ ಅಂತಿಮ ಹಂತದಲ್ಲಿದ್ದು, 1.80 ಕೋಟಿ ಜನಸಂಖ್ಯೆಗೆ ಅನುಕೂಲವಾಗುವಂತೆ ಜಲಾಶಯ ಮತ್ತು ಭೂಮೇಲ್ಮೈ ಭಾಗದ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.

ನಿರ್ಭಯ ಕೇಂದ್ರ ಸ್ಥಾಪನೆ: ಮಹಿಳೆಯರು ಮತ್ತು ಬಾಲಕಿಯರ ಸುರಕ್ಷತೆಗೆ ಮಹತ್ವ ನೀಡಿರುವ ಸರ್ಕಾರ ಎಲ್ಲ ಪೆÇಲೀಸ್ ಆಯುಕ್ತರ ಕಚೇರಿಗಳಲ್ಲಿ ನಿರ್ಭಯ ಕೇಂದ್ರ ಗಳನ್ನು ಸ್ಥಾಪಿಸುತ್ತಿದೆ. ಮಹಿಳೆ ಮತ್ತು ಮಕ್ಕಳ ವಿರುದ್ಧದ ದೌರ್ಜನ್ಯ ಕುರಿತಂತೆ ದಾಖಲಾದ ಪ್ರಕರಣಗಳ ವಿಚಾರಣೆ ನಡೆಸಲು ಎಲ್ಲ ಜಿಲ್ಲೆಗಳಲ್ಲಿ ಒಂದು ಹೆಚ್ಚುವರಿ ಸೆಷನ್ ನ್ಯಾಯಾಲಯ ಮತ್ತು ಬೆಂಗಳೂರಿನಲ್ಲಿ ಒಂದು ಹೆಚ್ಚುವರಿ ಸಿವಿಲ್ ನ್ಯಾಯಾಲಯ ಸ್ಥಾಪಿಸಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಹಾಗೂ ಎಲ್ಲ ಬಗೆಯ ತುರ್ತು ಮತ್ತು ಅಪಾಯದ ಕರೆಗಳಿಗೆ ಏಕೀಕೃತ ತುರ್ತು ಪ್ರತಿಸ್ಪಂದನಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದರು.

ಕೈಗಾರಿಕಾ ಬಂಡವಾಳ ಆಕರ್ಷಿಸುವ ನಿಟ್ಟಿನಲ್ಲಿ ದೇಶದಲ್ಲೇ ನಾವು ಮೊದಲ ಸ್ಥಾನದಲ್ಲಿದ್ದು 3.49 ಲಕ್ಷ ಕೋಟಿ ರೂ ಬಂಡವಾಳದೊಂದಿಗೆ ಹತ್ತು ಲಕ್ಷಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸಲು ಕ್ರಮ ಕೈಗೊಳ್ಳಲಾಗಿದೆ. ಸ್ವಯಂ ಉದ್ಯೋಗ ಕಲ್ಪಿಸಲು ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಇಪ್ಪತ್ತು ಸಾವಿರ ಸ್ಟಾರ್ಟ್ ಅಪ್‍ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದರು.

ಮತ್ಸ್ಯಜೋಪಾಸನಾ: ಮೀನುಗಾರಿಕಾ ಕ್ಷೇತ್ರದಲ್ಲಿ ಆರು ಲಕ್ಷ ಟನ್ ಮೀನನ್ನು ಉತ್ಪಾದಿಸಲಾಗುತ್ತಿದ್ದು ಇದನ್ನು ಮತ್ತಷ್ಟು ಹೆಚ್ಚಿಸಲು ಮತ್ಸ್ಯ ಜೋಪಾಸನಾ ಯೋಜನೆ ಜಾರಿಗೊಳಿಸಲಾಗುವುದು ಎಂದರು. ಕೃಷಿಗೆ ಹೆಚ್ಚಿನ ಒತ್ತು ನೀಡುವ ಅನಿವಾರ್ಯತೆ ಯಿದ್ದು ಈ ಹಿನ್ನೆಲೆಯಲ್ಲಿ ಇಸ್ರೇಲ್ ಮಾದರಿಯನ್ನು ಅನುಸರಿಸುವುದಾಗಿ ಹೇಳಿದ ಅವರು,ಇದೇ ಕಾರಣಕ್ಕಾಗಿ ಒಂದು ವಿಶೇಷ ಅಭಿಯಾನ ನಿರ್ದೇಶನಾಲಯವನ್ನು ಸ್ಥಾಪಿಸಲಾಗುವುದು. ರೈತರ ಬೆಳೆ ಸಾಲ ಮನ್ನಾ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಲಾಗುತ್ತಿದ್ದು ಈಗಾಗಲೇ ಮೊದಲ ಹಂತದಲ್ಲಿ 1.28 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿದೆ ಎಂದರು. ಚಾಮರಾಜನಗರ, ಹಾಸನ, ಗದಗ, ಕೊಪ್ಪಳ ಜಿಲ್ಲಾ ಕೇಂದ್ರಗಳಲ್ಲಿ ತಲಾ 450 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆಗಳನ್ನು ನಿರ್ಮಿಸಲಾಗು ವುದು. ಬಡವರಿಗಾಗಿ ಈಗಾಗಲೇ 2.5 ಲಕ್ಷ ಮನೆಗಳನ್ನು ನಿರ್ಮಿಸಿದ್ದು, ಮುಂದಿನ ದಿನಗಳಲ್ಲಿ ಸೂರು ರಹಿತರಿಗೆ ಮನೆ ಒದಗಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ವಿವರ ನೀಡಿದರು. ತೆರಿಗೆ ಸಂಗ್ರಹದ ವಿಷಯದಲ್ಲಿ ರಾಜ್ಯ ಸರ್ಕಾರ ಮುಂದಿದ್ದು, ವಿತ್ತೀಯ ಕೊರತೆಯ ಪ್ರಮಾಣವನ್ನು ಕುಗ್ಗಿಸಿದೆ ಎಂದು ನಾಡಿನ ಜನರಿಗೆ ತಿಳಿಸಲು ಹರ್ಷಿಸುವುದಾಗಿ ಇದೇ ಸಂದರ್ಭದಲ್ಲಿ ಅವರು ಹೇಳಿದರು.

ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭ

ಸಮಾಜದ ಬಡ ವರ್ಗದ ಮಕ್ಕಳು ಇಂಗ್ಲಿಷ್ ಜ್ಞಾನದ ಕೊರತೆಯಿಂದಾಗಿ ಹಿಂದುಳಿಯಬಾರದು ಎಂಬ ಉದ್ದೇಶ ದಿಂದ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿ ಸಲು ಸರ್ಕಾರ ಬದ್ಧವಾಗಿದೆ ಎಂದು ರಾಜ್ಯಪಾಲ ವಜೂ ಭಾಯ್ ವಾಲಾ ತಿಳಿಸಿದ್ದಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಉತ್ತಮ ಕೌಶಲ ದೊಂದಿಗೆ ಜಾಗತಿಕ ಮಟ್ಟದಲ್ಲಿ ಸ್ಫರ್ಧಿಸಲು ಅನುವಾಗು ವಂತೆ ಅವರನ್ನು ಸಜ್ಜುಗೊಳಿಸುವುದು ಅನಿವಾರ್ಯವಾಗಿದೆ. ಇದಕ್ಕೆ ಇಂಗ್ಲೀಷ್ ಭಾಷಾ ಜ್ಞಾನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು. ಆಂಗ್ಲ ಮಾಧ್ಯಮಕ್ಕೆ ಒತ್ತುಕೊಡುವ ಭರದಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ನೀಡುವ ವಿಷಯದಲ್ಲಿ ಯಾವುದೇ ರಾಜಿಯಾಗುವುದಿಲ್ಲ. ಸರ್ಕಾರಿ
ಶಾಲೆಗಳಲ್ಲಿ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು 450 ಕೋಟಿ ರೂ. ಯೋಜನೆಯನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ಉನ್ನತ ಶಿಕ್ಷಣ ಪಡೆಯುವ ಮೂರು ಲಕ್ಷ ವಿದ್ಯಾರ್ಥಿನಿಯರಿಗೆ ಶುಲ್ಕ ವಿನಾಯಿತಿ ನೀಡಲು ಸರ್ಕಾರ 95 ಕೋಟಿ ರೂ. ಭರಿಸಿದೆ. ಜತೆಗೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಇಂಜಿನಿಯರಿಂಗ್ ಕಾಲೇಜುಗಳ ಮೂಲ ಸೌಕರ್ಯಕ್ಕಾಗಿ ಸುಮಾರು 750 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಹೇಳಿದರು. ‘ಅರಿವು’ ಯೋಜನೆ ಯಡಿ ವೃತ್ತಿ ಪರ ಕೋರ್ಸ್‍ಗಳನ್ನು ವ್ಯಾಸಂಗ ಮಾಡಲಿಚ್ಚಿಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಕಳೆದ ವರ್ಷ 70 ಕೋಟಿ ರೂ ಮಂಜೂರು ಮಾಡಿದೆ. ಜತೆಗೆ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 14.55 ಲಕ್ಷ ವಿದ್ಯಾರ್ಥಿಗಳಿಗೆ ವಿವಿಧ ವಿದ್ಯಾರ್ಥಿ ವೇತನ ಯೋಜನೆಗಳಡಿ 290 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ತಿಳಿಸಿದ್ದಾರೆ.

ಕೈಗಾರಿಕೆ ಅಭಿವೃದ್ಧಿಗಾಗಿ `ಕಾಂಪಿಟ್ ವಿತ್ ಚೀನಾ’ ಯೋಜನೆ

ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಜಿಲ್ಲಾ ಮಟ್ಟದಲ್ಲಿ ಕೈಗಾರಿಕೆ ಅಭಿವೃದ್ಧಿಗಾಗಿ `ಕಾಂಪಿಟ್ ವಿತ್ ಚೀನಾ’ ಎಂಬ ನೂತನ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಿದೆ ಎಂದು ರಾಜ್ಯಪಾಲ ವಜೂ ಭಾಯ್ ವಾಲಾ ಹೇಳಿದ್ದಾರೆ. ರಾಜ್ಯದಲ್ಲಿನ ಕೈಗಾರಿಕೆ ಅಭಿವೃದ್ಧಿ ಗಾಗಿ 9 ಜಿಲ್ಲೆಗಳಲ್ಲಿ ಕೈಗಾರಿಕೆ ಕ್ಲಸ್ಟರ್ ಸ್ಥಾಪನೆಗೆ ಮೈತ್ರಿ ಸರ್ಕಾರ ಮುಂದಾಗಿದೆ. ಇದಕ್ಕಾಗಿ `ಕಾಂಪಿಟ್ ವಿತ್ ಚೀನಾ’ ಎಂಬ ನೂತನ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಪ್ರತಿ ಕ್ಲಸ್ಟರ್ ತನ್ನ ನಿರ್ದಿಷ್ಟ ಸಾಮರ್ಥ್ಯದ ಮೇಲೆ ಕಾರ್ಯನಿರ್ವ ಹಿಸುವಂತೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದಿದ್ದಾರೆ. ಕರ್ನಾಟಕ ರಾಜ್ಯ 2018ನೇ ಸಾಲಿನ ಬಂಡವಾಳ ಹೂಡಿಕೆ ಆಕರ್ಷಿಸುವುದರಲ್ಲಿ ರಾಷ್ಟ್ರದಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದು, ಕೈಗಾರಿಕೆ ನೀತಿ 2014-19ರ ಅಡಿಯಲ್ಲಿ 3.49 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಹೊಂದಿದೆ. 10.28 ಲಕ್ಷ ಜನರಿಗೆ ಉದ್ಯೋಗ ನೀಡುವ 1,958 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. 2.5 ಲಕ್ಷ ಯುವಕರಿಗೆ ತರಬೇತಿ ಯುವಜನತೆಗೆ ಉದ್ಯೋಗಾವಕಾಶ ಸೃಷ್ಟಿಸಲು ರಾಜ್ಯ ಸರ್ಕಾರ ಸದಾ ಶ್ರಮಿಸುತ್ತಿದ್ದು, 2018-19ರಲ್ಲಿ 2.5 ಲಕ್ಷ ಯುವಕರಿಗೆ ತರಬೇತಿ ನೀಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಅನುಷ್ಠಾನಗೊಳಿಸಿದೆ ಎಂದು ರಾಜ್ಯಪಾಲ ವಜೂಭಾಯಿವಾಲಾ ಹೇಳಿದ್ದಾರೆ. ಯುವಜನತೆಗೆ ಉದ್ಯೋಗ ಪಡೆಯಲು ಸಹಕಾರಿಯಾಗುವಂತೆ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ಬೆಳೆ ಸಾಲ ಮನ್ನಾಕ್ಕಾಗಿ 1611 ಕೋಟಿ ರೂ. ಬಿಡುಗಡೆ

ರಾಜ್ಯದ 3.28 ಲಕ್ಷ ರೈತರ ಬೆಳೆ ಸಾಲ ಮನ್ನಾಕ್ಕಾಗಿ ಈ ವರ್ಷದ ಜನವರಿ ಅಂತ್ಯದವರೆಗೆ 1611 ಕೋಟಿ ರೂ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ರಾಜ್ಯಪಾಲ ವಜೂಭಾಯ್ ವಾಲಾ ಹೇಳಿದ್ದಾರೆ. ಜಂಟಿ ಅಧಿವೇಶನದ ತಮ್ಮ ಭಾಷಣದಲ್ಲಿ ಅವರು, ರಾಜ್ಯದ 156 ತಾಲೂಕುಗಳಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದು, ಜನರಿಗೆ ಕುಡಿಯುವ ನೀರು, ಜಾನುವಾರು ಗಳಿಗೆ ಮೇವು ಒದಗಿಸಲು ಹಾಗೂ ಉದ್ಯೋಗ ಸೃಷ್ಟಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಹಸಿರು ಮೇವು ಬೆಳೆಸಲು ರೈತರಿಗೆ 8.11 ಲಕ್ಷ ಮೇವು ಕಿಟ್ ಗಳನ್ನು ಉಚಿತವಾಗಿ ವಿತರಣೆ ಮಾಡಲಿದೆ ಎಂದು ಹೇಳಿದ್ದಾರೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮೂಲಕ ಜನವರಿ ಅಂತ್ಯದವರೆಗೆ 18.56 ಲಕ್ಷ ಕುಟುಂಬಗಳಿಗೆ ಉದ್ಯೋಗ ಕಲ್ಪಿಸಲಾಗಿದೆ.

ಬಡವರ ಆರೋಗ್ಯ ಸುಧಾರಣೆಗೆ `ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’

ರಾಜ್ಯದ ಜನರ ಆರೋಗ್ಯ ಕಾಪಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾ ರದ ಜಂಟಿ ಸಹಯೋಗದಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಎಂಬ ಕೋ ಬ್ರಾಂಡ್ ಹೆಸರಿನ ಅಡಿಯಲ್ಲಿ ಆರೋಗ್ಯ ಯೋಜನೆ ಅನುಷ್ಠಾನಗೊಳಿಸುವುದಾಗಿ ಸರ್ಕಾರ ಪ್ರಕಟಿಸಿದೆ. ರಾಜ್ಯಪಾಲ ವಜುಭಾಯ್ ವಾಲ ಅವರು ವಿಧಾನಮಂಡಲದ ಜಂಟಿ ಭಾಷಣದಲ್ಲಿ ಈ ವಿಷಯ ತಿಳಿಸಿದ್ದು, ಪ್ರತಿ ವರ್ಷ ಬಡತನ ರೇಖೆ ಕೆಳಗಿನ ಕುಟುಂಬಗಳು ಒಟ್ಟಾರೆ 5 ಲಕ್ಷ ರೂ ವರೆಗೆ ಉಚಿತ ಚಿಕಿತ್ಸೆ ಪಡೆದುಕೊಳ್ಳುವ ಯೋಜನೆ ಇದಾಗಿದೆ. ಬಡತನ ರೇಖೆ ಮೇಲಿನ ಕುಟುಂಬಗಳು ಪ್ರತಿ ವರ್ಷ 1.5 ಲಕ್ಷ ರೂ ಮಿತಿಗೆ ಒಳಪಟ್ಟು ಸಹ ಸಂದಾಯ ಆಧಾರದ ಮೇಲೆ ಅನುಮೋದಿತ ಸರ್ಕಾರಿ ಪ್ಯಾಕೇಜ್ ದರಗಳ ಶೇಕಡ 30 ರಷ್ಟು ನಗದು ರಹಿತ ಸೇವೆ ಪಡೆಯಬಹುದಾಗಿದೆ. ಈ ವರ್ಷದ ಜನವರಿವರೆಗೆ ರಾಜ್ಯದಲ್ಲಿ 1,22,822 ಜನರು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ. ಬಡರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಕೊಡಿಸಲು ಅನುಕೂಲವಾಗುವಂತೆ ಗದಗ, ಕೊಪ್ಪಳ ಚಾಮರಾಜನಗರ, ಹಾಸನದಲ್ಲಿ 450 ಹಾಸಿಗೆಗಳ ಹೊಸ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದು, ಹುಬ್ಬಳ್ಳಿಯ ಕಿಮ್ಸ್, ಬಳ್ಳಾರಿ ವಿಮ್ಸ್‍ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಮತ್ತು ಮೈಸೂರು ಕಲಬುರಗಿಯಲ್ಲಿ ಟ್ರಾಮ ಸೆಂಟರ್ ನಿರ್ಮಾಣ ಕಾರ್ಯ ಮುಗಿಯುತ್ತಿದ್ದು, ಈ ಸೌಲಭ್ಯವನ್ನು ಆದಷ್ಟು ಬೇಗ ಜನರ ಸೇವೆಗೆ ಅರ್ಪಣೆ ಮಾಡುವುದಾಗಿ ಅವರು ಹೇಳಿದ್ದಾರೆ.