10 ದಿನ ಕಳೆದರೂ ಪತ್ತೆಯಾಗದ ಕೆ.ಆರ್.ಪೇಟೆ ತಹಸೀಲ್ದಾರ್ ಅಪಹರಣದ ನೈಜ ಸ್ಥಿತಿ ನೂತನ ತಹಸೀಲ್ದಾರ್ ಶಿವಮೂರ್ತಿ ಅಧಿಕಾರ

ಮೈಸೂರು: ಅಪಹರಣವಾಗಿ ನಂತರ ಸುರಕ್ಷಿತವಗಿ ಹಿಂದಿರುಗಿದ ಕೆ.ಆರ್.ಪೇಟೆ ತಹಸೀಲ್ದಾರ್ ಕೆ.ಮಹೇಶ್‍ಚಂದ್ರ ಅವರ ಪ್ರಹಸನದ ನೈಜ ಸ್ಥಿತಿ 10 ದಿನ ಕಳೆದರೂ ಪತ್ತೆಯಾಗಲಿಲ್ಲ.

ಆಗಸ್ಟ್ 3ರಂದು ಕೆಲಸ ಮುಗಿಸಿ ಕೆ.ಆರ್.ಪೇಟೆಯಿಂದ ಕೆ.ಆರ್.ನಗರಕ್ಕೆ ಹೊರಟಿದ್ದ ಮಹೇಶ್‍ಚಂದ್ರ ಅವರನ್ನು ಮಾರ್ಗ ಮಧ್ಯೆ ಬೇರ್ಯ ಸಮೀಪ ಅಪಹರಿಸಲಾಗಿತ್ತೆಂಬುದು, ಮಾರುತಿ ಓಮ್ನಿ, ಅವರ ಶರ್ಟಿನ ಬಟನ್‍ಗಳು ಹಾಗೂ ಶೂಗಳು ಪತ್ತೆಯಾದ ಮರುದಿನ ತಿಳಿದು ಬಂದಿತ್ತು.

ಕೆ.ಆರ್.ನಗರ, ಸಾಲಿಗ್ರಾಮ ಮತ್ತು ಕೆ.ಆರ್.ಪೇಟೆ ಠಾಣೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಶೋಧನಾ ಕಾರ್ಯ ಆರಂಭಿಸಿದ್ದರು. ಆಗಸ್ಟ್ 4ರಂದು ಸಂಜೆ 5 ಗಂಟೆ ವೇಳೆಗೆ ಮಹೇಶ್‍ಚಂದ್ರ ಅವರು ಕೆ.ಆರ್.ಪೇಟೆ ಠಾಣೆಗೆ ವಾಪಾಸ್ಸಾಗಿದ್ದರು.

ಯಾರೋ ತಮ್ಮನ್ನು ಅಪಹರಿಸಿ ಕಣ್ಣಿಗೆ ಬಟ್ಟೆ ಕಟ್ಟಿ ಬಂದು ಕೊಠಡಿಯಲ್ಲಿ ರಾತ್ರಿ ಇರಿಸಿ ಮರುದಿನ ಕೆ.ಆರ್.ಪೇಟೆ ಸಮೀಪ ಬಿಟ್ಟು ಹೋದರು ಎಂದು ತಹಸೀಲ್ದಾರ್ ವಿವರಿಸಿದ್ದರು. ಆದರೆ ಅವರ ಹೇಳಿಕೆಗಳು ಹಲವು ಅಚ್ಚರಿ ಮತ್ತು ಸಂಶಯಗಳನ್ನು ಹುಟ್ಟು ಹಾಕಿದ್ದವು.

ತಹಸೀಲ್ದಾರ್ ಅಪಹರಣ ಪ್ರಹಸನದ ಸತ್ಯ ಸಂಗತಿ ಅರಿಯಲು ಸಾಲಿಗ್ರಾಮ ಪೊಲೀಸರು ನಡೆಸಿದ ಪ್ರಯತ್ನ ವ್ಯರ್ಥವಾಗಿದೆ. 10 ದಿನ ಕಳೆದರೂ ಅಪಹರಣ ಮಾಡಿದವರಾರು, ಏಕೆ, ಸುರಕ್ಷಿತವಾಗಿ ಬಿಟ್ಟಿದ್ದಾದರೂ ಹೇಗೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಅವರು ವಾಪಸ್ ಬಂದಾಗ ಹೇಳಿದ್ದನ್ನು ಬಿಟ್ಟರೆ ಮಹೇಶ್‍ಚಂದ್ರ ಅವರು ಬೇರೆ ಏನನ್ನೂ ಹೇಳುತ್ತಿಲ್ಲ. ನಾವು ಯಾವ ಕೋನದಿಂದ ತನಿಖೆ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದೆಡೆ ಅಂದಿನಿಂದ ಮಹೇಶ್‍ಚಂದ್ರ ಅವರು ಮನೆಯಲ್ಲೇ ಇರುವುದರಿಂದ ಕೆ.ಆರ್.ಪೇಟೆ ತಾಲೂಕು ತಹಸೀಲ್ದಾರ್ ಆಗಿ ಕೆಎಎಸ್ ಅಧಿಕಾರಿ ಶಿವಮೂರ್ತಿ ಅವರನ್ನು ನಿಯೋಜನೆ ಮಾಡಲಾಗಿದ್ದು, ಅವರು ಅಧಿಕಾರ ವಹಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.