ಮಳೆ ಇಲ್ಲದೆ ಕೆಆರ್‍ಎಸ್, ಕಬಿನಿ ಬರಿದಾಗಿದ್ದರೂ ತಮಿಳ್ನಾಡಿಗೆ ನೀರು

ಮಂಡ್ಯ, ಆ. 2- ಕಾವೇರಿ ಜಲಾನಯನ ಪ್ರದೇಶದಲ್ಲಿ ವಾಡಿಕೆ ಮಳೆ ಇಲ್ಲದೇ ಜಲಾಶಯ ಗಳು ಬತ್ತಿ ಹೋಗುತ್ತಿದ್ದು, ರೈತರ ಬೆಳೆ ಒಣ ಗುತ್ತಿದ್ದರೂ ಕೂಡ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕೆಆರ್‍ಎಸ್ ಮತ್ತು ಕಬಿನಿ ಜಲಾ ಶಯಗಳಿಂದ ತಮಿಳುನಾಡಿಗೆ ಪ್ರತಿದಿನ ನೀರು ಹರಿಸುತ್ತಿರುವುದು ರೈತರು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೆಆರ್‍ಎಸ್‍ನಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದರೂ ಅದನ್ನು ಗಣನೆಗೆ ತೆಗೆದು ಕೊಳ್ಳದ ಪ್ರಾಧಿಕಾರವು ತಮಿಳುನಾಡಿಗೆ ಯಥೇಚ್ಛವಾಗಿ ನೀರು ಹರಿಸುತ್ತಿರುವ ಪರಿಣಾಮ ರೈತರ ಬೆಳೆ ರಕ್ಷಣೆಗಾಗಿ ಕೆಆರ್‍ಎಸ್‍ನಿಂದ ನಾಲೆಗಳಿಗೆ ಹರಿಸು ತ್ತಿದ್ದ ನೀರನ್ನು ಇಂದು ಸಂಜೆಯಿಂದ ಸ್ಥಗಿತಗೊಳಿ ಸಿದ್ದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕೊಡಗಿನಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾ ಗದ ಕಾರಣ ಕೆಆರ್‍ಎಸ್ ಒಳಹರಿವು ಕಡಿಮೆಯಾ ಗಿದೆ. ಕೊಡಗಿನಲ್ಲೇ ಇರುವ ಹಾರಂಗಿ ಜಲಾಶಯ ಡೆಡ್ ಸ್ಟೋರೇಜ್ ತಲುಪಿದೆ. ಕೇರಳದಲ್ಲಿ ಕೂಡ ಮಳೆ ಪ್ರಮಾಣ ಕಡಿಮೆಯಾಗಿರುವ ಕಾರಣ ಕಬಿನಿ ಜಲಾಶಯಕ್ಕೂ ಒಳಹರಿವಿನ ಪ್ರಮಾಣ ಕಡಿಮೆ ಯಾಗಿದೆ. ಆದರೆ, ರಾಜ್ಯದ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣವನ್ನು ಗಮನಿಸಿ ತಮಿಳುನಾಡಿಗೆ ನೀರು ಹರಿಸಬೇಕಾದ ಪ್ರಾಧಿಕಾರವು ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಕುಸಿದಿದ್ದರೂ ಅದನ್ನು ಲೆಕ್ಕಿಸದೇ ತಮಿಳುನಾಡಿಗೆ ನೀರು ಹರಿಸುವುದನ್ನೇ ಗುರಿಯಾಗಿಟ್ಟುಕೊಂಡಿದೆ. ಕಳೆದ 25 ದಿನಗಳಿಂದ ಪ್ರತಿದಿನವೂ ಕೆಆರ್‍ಎಸ್ ಮತ್ತು ಕಬಿನಿ ಜಲಾಶಯ ಗಳಿಂದ ತಮಿಳುನಾಡಿಗೆ ನೀರನ್ನು ಹರಿಸಲಾಗು ತ್ತಿದೆ. ಈವರೆಗೆ ಪ್ರತಿನಿತ್ಯ 11 ಸಾವಿರ ಕ್ಯೂಸೆಕ್‍ನಂತೆ ಸುಮಾರು 26 ಟಿಎಂಸಿ

ನೀರನ್ನು ತಮಿಳುನಾಡಿಗೆ ಎರಡೂ ಜಲಾಶಯಗಳಿಂದ ಹರಿಸಲಾಗಿದೆ. ಇದರ ಪರಿಣಾಮವಾಗಿ ರೈತರ ಬೆಳೆ ಒಣಗುತ್ತಿರುವುದು ಮಾತ್ರವಲ್ಲದೇ ರಾಜಧಾನಿ ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂದು ಸಂಜೆ ಮಾಹಿತಿಯಂತೆ ಕೆಆರ್‍ಎಸ್ ಜಲಾಶಯದ ನೀರಿನ ಮಟ್ಟ 83.60 ಅಡಿಯಷ್ಟಿದ್ದು, ಒಳಹರಿವು 5661 ಕ್ಯೂಸೆಕ್‍ಗಳಷ್ಟು ಮಾತ್ರವಿದ್ದರೂ ತಮಿಳುನಾಡಿಗೆ 8888 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಸದ್ಯ ಕೆಆರ್‍ಎಸ್‍ನಲ್ಲಿ ಇರುವ ನೀರಿನ ಪ್ರಮಾಣ 12.445 ಟಿಎಂಸಿ ಮಾತ್ರ. ಪ್ರಾಧಿಕಾರವು ತಮಿಳುನಾಡಿಗೆ ನೀರು ಹರಿಸುವುದನ್ನು ಮುಂದುವರೆಸಿದರೆ, ಕೆಆರ್‍ಎಸ್ ಡೆಡ್ ಸ್ಟೋರೇಜ್ ತಲುಪಿ ಆರೂ ಜಿಲ್ಲೆಗಳ ಜನರಿಗೆ ಕುಡಿಯುವ ನೀರಿನ ಪೂರೈಕೆ ಸ್ಥಗಿತವಾಗುವ ಅಪಾಯ ಎದುರಾಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಜಾನುವಾರುಗಳಿಗೂ ಕೂಡ ಕುಡಿಯುವ ನೀರಿನ ಅಭಾವ ಈಗಾಗಲೇ ತಲೆದೋರಿದೆ. ಮಂಡ್ಯ ಜಿಲ್ಲೆಯಲ್ಲಿ ಸುಮಾರು 1500ಕ್ಕೂ ಹೆಚ್ಚು ಕೆರೆಗಳಿದ್ದು, ಅವುಗಳ ಪೈಕಿ ಶೇ. 75ರಷ್ಟು ಕೆರೆಗಳು ನೀರಿಲ್ಲದೇ ಖಾಲಿ ಖಾಲಿ. ಹಲವೆಡೆ ಜನ-ಜಾನುವಾರುಗಳಿಗೆ ಕುಡಿಯಲು ನೀರನ್ನು ಜಿಲ್ಲಾಡಳಿತವು ಟ್ಯಾಂಕರ್‍ಗಳ ಮೂಲಕ ಸರಬರಾಜು ಮಾಡುತ್ತಿರುವ ಪರಿಸ್ಥಿತಿ ಈಗಾಗಲೇ ತಲೆದೋರಿದೆ. ಜಲಾಶಯದಲ್ಲಿ ನೀರಿನ ಮಟ್ಟ ಇನ್ನೂ ಕುಸಿದರೆ ಟ್ಯಾಂಕರ್‍ಗಳಲ್ಲಿ ನೀರು ಪೂರೈಸಲು ಸಹ ಸಾಧ್ಯವಾಗದೇ ಜಿಲ್ಲಾಡಳಿತ ಅಸಹಾಯಕ ಪರಿಸ್ಥಿತಿಗೆ ಒಳಗಾಗುವ ಅಪಾಯವೂ ಬಂದೊದಗಿದೆ. ಆದರೆ, ಇದ್ಯಾವು ದನ್ನೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಗಮನಿಸಿದಂತಿಲ್ಲ.

ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ರೈತರು ಶ್ರೀರಂಗಪಟ್ಟಣದ ಸ್ನಾನಘಟ್ಟದ ಬಳಿ ಜಮಾಯಿಸಿ, ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಈ ವೇಳೆ ಮಾತನಾಡಿದ ಶ್ರೀರಂಗಪಟ್ಟಣ ತಾಲೂಕು ರೈತ ಸಂಘದ ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ, ಕರ್ನಾಟಕದ ಜಲಾಶಯಗಳ ವಾಸ್ತವ ಸ್ಥಿತಿ ಗಮನಿಸದೇ ತಮಿಳುನಾಡಿಗೆ ನೀರು ಹರಿಸುವ ಮೂಲಕ ರಾಜ್ಯದ ರೈತರಿಗೆ ದ್ರೋಹ ಎಸಗಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿ ಸಿದರು. ಪ್ರತಿಭಟನೆಯಲ್ಲಿ ಮೇಳಾಪುರ ಸ್ವಾಮಿಗೌಡ, ಕಾಲ್ ಕೃಷ್ಣ, ಸಿದ್ದಪ್ಪ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.