ಹೈವೋಲ್ಟೇಜ್ ಮೋದಿ ಯುವಕರಿಗೆ  ಉದ್ಯೋಗ ಕೊಡಲಿ: ಡಿಕೆಶಿ

ಬೆಂಗಳೂರು, ಫೆ.8- ತಮ್ಮನ್ನು ಹೈವೋಲ್ಟೇಜ್ ಎಂದು ಕರೆಯಿಸಿಕೊಳ್ಳುವ ಪ್ರಧಾನಿ ಮೋದಿ, ದೇಶದ ಯುವಕರಿಗೆ ಬಲ್ಬ್ ಕೊಡಲಿ, ಉದ್ಯೋಗ ಕೊಡಲಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ರಾಹುಲ್ ಗಾಂಧಿ ಬಗ್ಗೆ ಮೋದಿ ವ್ಯಂಗ್ಯಕ್ಕೆ ಪ್ರತಿಕ್ರಿಯಿಸಿದ ಅವರು, ಯುವಕರಿಗೆ ಉದ್ಯೋಗ ನೀಡಲಿ.ದೇಶದ ಆರ್ಥಿಕತೆಯನ್ನ ಬೇರೆ ಪ್ರಪಂಚ ಬಂದು ಹೊಗಳಬೇಕು. ಅದರಂತೆ ಮೋದಿ ಮೊದಲು ಕೆಲಸ ಮಾಡಲಿ ಎಂದು ಕುಟುಕಿದರು.

ಐಎಎಸ್ ಅಧಿಕಾರಿಗಳು ಸಹ ಕೇಂದ್ರದ ದಬ್ಬಾಳಿಕೆಗೆ ಹೆದರುತ್ತಿದ್ದಾರೆ. ಬಜೆಟ್‍ನಲ್ಲಿ ಏನೂ ನೀಡಿಲ್ಲ. ವಿದೇಶಗಳ ಬೆಂಬಲವೂ ಇಲ್ಲ. ಯುವಪೀಳಿಗೆಯನ್ನು ಕೇಂದ್ರ ತಪ್ಪುಹಾದಿಗೆ ಎಳೆಯುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಸಾಲಮನ್ನಾ ಮಾಡುತ್ತೇವೆ ಎಂದಿದ್ದರು. ಆದರೆ ಈಗ ಅವರದ್ದೇ ಸರ್ಕಾರವಿದ್ದರೂ ರೈತರ ಸಾಲಮನ್ನಾ ಬಗ್ಗೆ ಏಕೆ ಮಾಡುತ್ತಿಲ್ಲ. ಮಹದಾಯಿ ನೋಟಿಫಿಕೇಶನ್‍ಗೆ ಇನ್ನೇನು ಬೇಕು.ಕೊಟ್ಟ ತೀರ್ಮಾನ ನೋಟಿಫಿಕೇಶ್ ಮಾಡಲು ಏಕೆ ಆಗುತ್ತಿಲ್ಲ. ಹುಬ್ಬಳ್ಳಿಯ ಬಿಜೆಪಿ ನಾಯಕ ಸಚಿವ ಜಗದೀಶ್ ಶೆಟ್ಟರ್‍ಗೆ, ಸಂಸತ್ ಸದಸ್ಯರಿಗೆ ಏನಾಗಿದೆ? ಏಕೆ ಯಾರೂ ಅಲ್ಲಿನ ಯೋಜನೆ ಬಗ್ಗೆ ಮಾತನಾಡುತ್ತಿಲ್ಲ. ಬಿಜೆಪಿಯವರಿಗೆ ಬೇಕಿರುವುದು ಅಧಿಕಾರವಷ್ಟೇ ಜನರ ಸಮಸ್ಯೆಗಳಿಗೆ ಪರಿಹಾರವಲ್ಲ ಎಂದು ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.