ಕಾಯ್ದೆ ಬಗ್ಗೆ ರಾಹುಲ್ ಗಾಂಧಿ 10 ಸಾಲುಗಳನ್ನು ಮಾತನಾಡಲಿ

ನವದೆಹಲಿ, ಡಿ.22- ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 10 ಸಾಲುಗಳನ್ನು ಮಾತನಾಡಲಿ ಎಂದು ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಸವಾಲು ಹಾಕಿದ್ದಾರೆ. ಇಂದೋರ್ ನಲ್ಲಿ ನಡೆದ ಕಾರ್ಯಮದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಯುವಕರಿಗೆ ಪ್ರಚೋದನೆ ನೀಡುವ ಮೂಲಕ ಹಿಂಸಾ ಚಾರಕ್ಕೆ ಕಾರಣರಾಗಿದ್ದಾರೆ. ಇಷ್ಟೆಲ್ಲ ಮಾತನಾಡುವ ರಾಹುಲ್ ಗಾಂಧಿಯವರು ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು 10 ಸಾಲುಗಳನ್ನು ಮಾತನಾಡಲಿ, ಇದರಲ್ಲಿ ದೇಶದ ಜನರಿಗೆ ನೋವುಂಟು ಮಾಡುವ 2 ಸಾಲುಗಳನ್ನು ತೋರಿಸಲಿ ಎಂದು ಸವಾಲು ಹಾಕಿದ್ದಾರೆ. ದೇಶವನ್ನು ಮುನ್ನಡೆಸಲು ಬಂದ ಜನ ಕನಿಷ್ಠ ಅಂಶಗಳ ಕುರಿತು ಸಹ ಅರ್ಥ ಮಾಡಿಕೊಳ್ಳದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಇವರು ನೀಡುವ ಪ್ರಚೋದನೆಯಿಂದಾಗಿ ದೇಶವೇ ಹೊತ್ತಿ ಉರಿ ಯುತ್ತಿದೆ. ಆದರೆ ಈ ಕಾಯ್ದೆ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಈ ಕುರಿತು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಸಿಎಎ ವಿರೋಧಿಸಿ ದೇಶಾದ್ಯಂತ ಹೋರಾಟ ನಡೆಸಲಾಗುತ್ತಿದ್ದು, ಹಿಂಸಾತ್ಮಕ ರೂಪ ಪಡೆದಿದೆ. ಪ್ರತಿಭಟನೆಯಲ್ಲಿ ಹತ್ತಾರು ಜನ ಸಾವನ್ನಪ್ಪಿದ್ದಾರೆ. ಈ ನಡುವೆ ವಿರೋಧ ಪಕ್ಷಗಳು ಕಾಯ್ದೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ. ಅಲ್ಲದೆ ಆಡಳಿತ ಪಕ್ಷ ಸಹ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳುತ್ತಿದೆ. ಈ ಕುರಿತು ರ್ಯಾಲಿ ನಡೆಸುವ ಮೂಲಕ ಜಾಗೃತಿ ಮೂಡಿಸಲು ಸಹ ಮುಂದಾಗಿದೆ.