ಜಮೀನು ಕಬಳಿಕೆ ಆಗಿದ್ದರೆ ತನಿಖೆ ಮಾಡಿಸಿಕೊಳ್ಳಲಿ

ಹಾಸನ:  ನಾನು ಮತ್ತು ನನ್ನ ಕುಟುಂಬದವರು ಯಾರಾದರೂ ಅಕ್ರಮ ವಾಗಿ ಜಮೀನು ಕಬಳಿಕೆ ಮಾಡಿದ್ದರೆ ಯಾವ ತನಿಖೆ ಬೇಕಾದರೂ ಮಾಡಿಸಿ ಕೊಳ್ಳಲಿ ಎಂದು ಮಾಜಿ ಸಚಿವ ಎ.ಮಂಜು ಆರೋಪಕ್ಕೆ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ತಿರುಗೇಟು ನೀಡಿದರು.

ನಗರದ ಚನ್ನಪಟ್ಟಣದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವಾಗಲಿ, ತಮ್ಮ ಕುಟುಂಬದ ಸದಸ್ಯರಾಗಲೀ ಅಕ್ರಮವಾಗಿ ಸರ್ಕಾರಿ ಜಮೀನು ಕಬಳಿಸಿದ್ದರೆ ಆ ಭೂಮಿಯನ್ನು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಸವಾಲು ಹಾಕಿದರು.

ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ವಿಶೇಷ ಅಧಿಕಾರಿಗಳ ತಂಡ ನೇಮಿಸಿ ನಮ್ಮ ಕುಟುಂಬದ ಅಕ್ರಮ ಆಸ್ತಿ ಪತ್ತೆ ಮಾಡಿದ್ದರು. ಅವರಿಗಿಂತ ಹಿಂದಿನವರು ಸಹ ನಮ್ಮ ಕುಟುಂಬದ ಅಕ್ರಮ ಆಸ್ತಿ ಪತ್ತೆಗಾಗಿ ಪರದಾಡಿದ್ದಾರೆ ಎಂದ ಅವರು, ಸದ್ಯ ಎ.ಮಂಜು ಅವರು ಕೆಲಸವಿಲ್ಲದೆ ಬಿಡುವಾಗಿದ್ದು, ಇವರು ಸಹ ತನಿಖೆ ಮಾಡಿಸಿ ಯಾವುದಾದರೂ ಅಕ್ರಮ ಭೂಮಿಯನ್ನು ನಾನು, ನನ್ನ ಮಗ ಕಬಳಿಸಿದ್ದರೆ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಟಾಂಗ್ ನೀಡಿದರು.

ಎ.ಮಂಜು ಅವರು ಪಾಪ ಸಚಿವರಾಗಿದ್ದಾಗಲೇ ನಮ್ಮ ಕುಟುಂಬದ ವಿರುದ್ಧ ಆರೋಪ ಮಾಡಲು ಮುಂದಾಗಿದ್ದರು. ಅದನ್ನು ಈಗಲೂ ಮುಂದುವರೆಸಿದ್ದಾರೆ. ಅವರು ಯಾವುದೇ ತನಿಖೆ ಮಾಡಿಸಿಕೊಳ್ಳಲಿ. ಯಾರ ವಿರುದ್ಧವಾದರೂ ಕ್ರಮ ಕೈಗೊಳ್ಳಲಿ ಬೇಡವೆಂದವರು ಯಾರು ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಸಿ.ಎನ್. ಬಾಲಕೃಷ್ಣ, ಕೆ.ಎಸ್.ಲಿಂಗೇಶ್, ಮಾಜಿ ಶಾಸಕ ಹೆಚ್.ಎಸ್.ಪ್ರಕಾಶ್, ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್.ಶಂಕರ್ ಇತರರಿದ್ದರು.