ನಿರಾಶ್ರಿತರ ಶಿಬಿರದಲ್ಲಿ ಮೊಳಗುತ್ತಿದೆ ಸಂಗೀತ, ನೃತ್ಯ

ಮಡಿಕೇರಿ: ಪ್ರಕೃತಿ ವಿಕೋಪದಿಂದಾಗಿ ತತ್ತರಿಸಿ ವಿವಿಧ ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿರುವವರ ಮನದಲ್ಲಿರುವ ದುಗುಡ ದೂರ ಮಾಡಿ, ವಾಸ್ತವ ಬದುಕಿನತ್ತ ಕರೆತರಲು ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು ಮುಂದಾಗಿದ್ದಾರೆ.

ಶಿಬಿರಗಳಲ್ಲಿ ಸಂಗೀತ, ನೃತ್ಯ, ಭಜನೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆ ನಡೆಸುವ ಮೂಲಕ ನೋವಿನಲ್ಲಿ ನಗು ಮೂಡುವಂತೆ ಮಾಡುತ್ತಿದ್ದಾರೆ.

ಕೊಡಗು ಜಿಲ್ಲೆ ಹಿಂದೆಂದೂ ಕಂಡು ಕೇಳರಿ ಯದಂತಹ ಪ್ರಕೃತಿ ವಿಕೋಪಕ್ಕೆ ಮೈಯೊಡ್ಡಿ, ಅಪಾರ ಪ್ರಮಾಣದ ಹಾನಿಗೆ ತುತ್ತಾಗಿದೆ. ಇದ ರಿಂದ ಕೊಡಗಿನ ಭೂಪಟದ ಚಿತ್ರಣವೇ ಬದಲಾಗಿದೆ. ಗ್ರಾಮ-ಗ್ರಾಮಗಳ ನಡುವೆ ಇದ್ದ ರಸ್ತೆಗಳು ಕಣ್ಮರೆಯಾಗಿವೆ. ಹತ್ತಾರುವ ವರ್ಷಗಳಿಂದ ನೆಲೆ ನೀಡಿದ್ದ ಮನೆಗಳು ನೆಲಕಚ್ಚಿವೆ. ಜಲಪ್ರಳಯದ ನರ್ತನಕ್ಕೆ ಹಲವು ಗ್ರಾಮಗಳು ಕೊಚ್ಚಿ ಹೋಗಿವೆ. ಇದರ ಪರಿಣಾಮವಾಗಿ ಸಾವಿರಾರು ಮಂದಿ ನಿರಾಶ್ರಿತರರಾಗಿ ಬೀದಿ ಪಾಲಾಗಿದ್ದಾರೆ. ಸಂಕಷ್ಟ ದಲ್ಲಿದ್ದವರೆಗೆ ಜಿಲ್ಲಾಡಳಿತ ಜಿಲ್ಲೆಯ ವಿವಿಧೆಡೆ ಶಿಬಿರಗಳನ್ನು ತೆರೆದು ತಾತ್ಕಾಲಿಕ ಆಶ್ರಯ ಕಲ್ಪಿಸಿದೆ. ಆ.17ರಿಂದಲೂ ವಿವಿಧ ಶಿಬಿರಗಳಲ್ಲಿ ಆಶ್ರಯ ಪಡೆದಿರುವ ಅನೇಕರು ಮನೆ-ಮಠ, ಆಸ್ತಿ, ಎಸ್ಟೇಟ್, ಜಾನುವಾರುಗಳು ಹಾಗೂ ತಮ್ಮವರನ್ನು ಕಳೆದು ಕೊಂಡು ಭವಿಷ್ಯದ ಬಗ್ಗೆ ಚಿಂತಿಸತೊಡಗಿದ್ದಾರೆ.

ಕ್ಯಾಂಪ್‍ಗಳಲ್ಲಿ ಕಂಡದ್ದು: ಬಹುತೇಕ ಕ್ಯಾಂಪ್ ಗಳಲ್ಲಿ ಆಶ್ರಯಪಡೆದಿರುವವರಿಗೆ ಪ್ರಸ್ತುತ ಸಂದರ್ಭದಲ್ಲಿ ಊಟೋಪಚಾರಕ್ಕೆ ಯಾವುದೆ ಕೊರತೆಯಿಲ್ಲ. ಮೈಸೂರು, ಬೆಂಗಳೂರು ಸೇರಿದಂತೆ ವಿವಿಧೆಡೆಗಳಿಂದ ದಾನಿಗಳು ನೀಡಿರುವ ವಸ್ತುಗಳು ಸಾಕಷ್ಟು ಪ್ರಮಾಣದಲ್ಲಿವೆ. ತಾತ್ಕಾಲಿಕವಾಗಿ ಯಾವುದೆ ಸಮಸ್ಯೆ ಇಲ್ಲದೇ ಇದ್ದರೂ, ಅಲ್ಲಿ ಆಶ್ರಯ ಪಡೆದಿರುವವರಿಗೆ ಮುಂದಿನ ದಿನಗಳಲ್ಲಿ ನಾವು ಬದುಕುವುದು ಹೇಗೆ? ಎಂಬ ಚಿಂತೆ ದಟ್ಟವಾಗಿ ಕಾಡತೊಡಗಿದೆ.

ಸುಂಟಿಕೊಪ್ಪದಲ್ಲಿರುವ ಶ್ರೀರಾಮ ಮಂದಿರ, ಸೇಂಟ್ ಮೇರಿಸ್ ಶಾಲೆ, ಮಾದಾ ಪುರದ ಸರ್ಕಾರಿ ಶಾಲೆ, ಕುಶಾಲನಗರದ ಜಿ.ಎಂ.ಪಿ. ಶಾಲೆ, ಮಡಿಕೇರಿಯ ಮಾರುಕಟ್ಟೆ ರಸ್ತೆಯಲ್ಲಿರುವ ಸೇವಾಭಾರತಿ ಗೆಜ್ಜೆ ಸಂಗಪ್ಪ ಕ್ಯಾಂಪ್, ಮಡಿಕೇರಿಯ ಪೊಲೀಸ್ ಅತಿಥಿ ಗೃಹದ ಬಳಿಯಿರುವ ಮೈತ್ರಿ ಸಭಾಂಗಣ, ಚೆರಿಯ ಪರಂಬು ಕ್ಯಾಂಪ್ ಸೇರಿದಂತೆ ಹಲವು ಕ್ಯಾಂಪ್‍ಗಳಲ್ಲಿ ಆಶ್ರಯ ಪಡೆದಿರುವವರ ದುಗುಡು ಇನ್ನು ಹಾಗೆಯೇ ಇದೆ. ಸದ್ಯದ ಪರಿಸ್ಥಿತಿ ಯಲ್ಲಿ ಸುರಕ್ಷಿತವಾದ ಸ್ಥಳದಲ್ಲಿರುವ ನಾವು ಮುಂದೆ ಏನು ಮಾಡಬೇಕು? ಮಕ್ಕಳ ಭವಿಷ್ಯದ ಪಾಡೇನು? ಶಿಕ್ಷಣ, ಉದ್ಯೋಗ, ಮನೆ ಕಟ್ಟುವುದು ಹೇಗೆ? ಆಸ್ತಿ ಸೇರಿದಂತೆ ಮಹತ್ವದ ದಾಖಲೆಗಳು ಮಣ್ಣು ಹಾಗೂ ನೀರು ಪಾಲಾಗಿದೆ ಎಂಬ ಕೊರಗಿನಲ್ಲಿ ದಿನ ದೂಡುತ್ತಿದ್ದಾರೆ.

ನೋವು ಮರೆಮಾಚಲು ಬಂದವರು: ಮನೆಯನ್ನು ಕಳೆದುಕೊಂಡು ಇದೀಗ ಶಿಬಿರಗಳಲ್ಲಿ ಆಶ್ರಯ ಪಡೆದಿರುವವರ ಮನಸ್ಸಿನ ಮೇಲಾಗಿರುವ ಅಘಾತವನ್ನು ನಿವಾರಿಸಲು ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು, ಸ್ವಯಂಸೇವಕರು ಮುಂದಾಗಿದ್ದಾರೆ.

ಅದರಲ್ಲಿ `ಸಮರ್ಥ ಕನ್ನಡಿಗರು’ ಸಂಸ್ಥೆಯ ಕೊಡಗು ಘಟಕದ ಸುಮಾರು 25 ಮಂದಿ ವಿವಿಧ ಕ್ಯಾಂಪ್‍ಗಳಲ್ಲಿ ವಿವಿಧ ಚಟುವಟಿಕೆ ನಡೆಸುವ ಮೂಲಕ ಅಲ್ಲಿನ ಜನರ ಮನಸ್ಸಿನಲ್ಲಿರುವ ದುಗುಡ, ನೋವು, ಸಂಕಟ ಹಾಗೂ ಭಯವನ್ನು ಹೋಗಲಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮಡಿಕೇರಿಯ ಗೆಜ್ಜೆಸಂಗಪ್ಪ ಹಾಗೂ ಚೆರಿಯ ಪರಂಬು ಕ್ಯಾಂಪ್‍ನಲ್ಲಿ ಈ ಸಂಘಟನೆಯ ಕಾರ್ಯಕರ್ತರು ಪ್ರತಿದಿನ ಬೆಳಗ್ಗಿನಿಂದ ಸಂಜೆಯ ವರೆಗೆ ಕ್ಯಾಂಪ್‍ನಲ್ಲಿದ್ದವರು ವಿವಿಧ ಚಟುವಟಿಕೆಯಲ್ಲಿ ತೊಡಗುವಂತೆ ಮಾಡುತ್ತಿದ್ದಾರೆ. ಬೆಳಗ್ಗೆ ಪ್ರಾರ್ಥನೆ, ಶಿಶುಗೀತೆ, ಗಾಯನ, ಕೊಡಗು ಸಾಂಪ್ರ ದಾಯಿಕ ಸಂಗೀತಕ್ಕೆ ನೃತ್ಯ, ಮಕ್ಕಳಿಗೆ ಏಕಾಪಾ ತ್ರಾಭಿನಯ, ಚಿತ್ರಕಲೆ, ಗಾಯನ ಸ್ಪರ್ಧೆಯನ್ನು ನಡೆಸಲಾಗುತ್ತಿದೆ. ಇದರಿಂದ ಅಲ್ಲಿರುವವರ ಚಿಂತೆ ದೂರವಾಗುತ್ತಿದೆ. ಅಲ್ಪ ಪ್ರಮಾಣದಲ್ಲಾದರೂ ಅಲ್ಲಿರುವ ವರ ಮನಸಲ್ಲಿ ಸಂತೋಷ ಮನೆ ಮಾಡುತ್ತಿದೆ.

ಶಿಬಿರದಲ್ಲೇ ಹುಟ್ಟುಹಬ್ಬ ಆಚರಣೆ: ಕೊಡಗು ಜಿಲ್ಲೆಯ ಕಾಲೂರು ಎಂಬ ಗ್ರಾಮವೇ ಸಂಪೂರ್ಣ ವಾಗಿ ಕೊಚ್ಚಿ ಹೋಗಿದೆ. ಮಾರುಕಟ್ಟೆ ರಸ್ತೆಯಲ್ಲಿರುವ ಸೇವಾ ಭಾರತಿ ಗೆಜ್ಜೆ ಸಂಕಪ್ಪ ಶಿಬಿರ ಕಾಲೂರು ಗ್ರಾಮದ ಸುಮಾರು 30 ಕುಟುಂಬ ಆಶ್ರಯ ಪಡೆದಿದೆ. ಇವರಲ್ಲಿ ಕಾಲೂರು ಗ್ರಾಮದ ನಿವಾಸಿ ಹರ್ಷಶ್ರೀ ಎಂಬ ಬಾಲಕಿಯ ಜನ್ಮ ದಿನವನ್ನು ಬುಧವಾರ ಆಚರಿಸಲಾಯಿತು. ಬಾಲಕಿಯ ಜನ್ಮ ದಿನದ ವಿಷಯ ತಿಳಿದ ಸ್ವಯಂ ಸೇವಕರು ಕೇಕ್ ತಂದು ಆಕೆಯಿಂದಲೇ ಕತ್ತರಿಸಿ, ಸಿಹಿ ತಿನ್ನಿಸಿದರು. ಅಲ್ಲದೆ ಕ್ಯಾಂಪ್‍ನಲ್ಲಿರುವ ಎಲ್ಲರೂ ಹರ್ಷಶ್ರೀಯ ನಾಲ್ಕನೇ ವರ್ಷದ ಹುಟ್ಟುಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿ ಶುಭ ಕೋರಿ ಹರಸಿದರು.