ಸ್ಥಳೀಯ ಸಂಸ್ಥೆ ಚುನಾವಣೆ: ಮೈಸೂರು, ಕೊಡಗು ಸೇರಿ ಕೆಲ ಜಿಲ್ಲೆಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಚಳ್ಳೆಹಣ್ಣು ತಿನ್ನಿಸಲು ಮೈಸೂರು, ಕೊಡಗು ಸೇರಿದಂತೆ ಏಳು ಜಿಲ್ಲೆಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು, ಕಣಕ್ಕಿಳಿಯಲಿವೆ.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೀಮಿತ ಕ್ಷೇತ್ರಗಳಲ್ಲಿ ಮೈತ್ರಿ ಮಾಡಿಕೊಂಡು ಕಣಕ್ಕಿಳಿ ಯುವ ಮೂಲಕ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್-ಜೆಡಿಎಸ್ ಪ್ರಾಯೋಗಿಕ ಪ್ರಯತ್ನ ನಡೆಸಲಿವೆ. ಮೈಸೂರು, ಕೊಡಗು ಅಲ್ಲದೆ, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಸೀಮಿತವಾಗಿ ಈ ಚುನಾವಣಾ ಮೈತ್ರಿ ಆಗಲಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದಲ್ಲಿ ಪಾಲುದಾರರಾಗಿರುವ ಜೆಡಿಎಸ್-ಕಾಂಗ್ರೆಸ್ ಈ ಚುನಾವಣೆಯನ್ನು ಮೇಲ್ನೋಟಕ್ಕೆ ಪ್ರತ್ಯೇಕವಾಗಿ ಎದುರಿಸಲಿವೆ.

ಆದರೆ ಈ ಜಿಲ್ಲೆಗಳಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚು ಇರುವುದರಿಂದ ಆ ಪಕ್ಷಕ್ಕೆ ಕಡಿವಾಣ ಹಾಕಲು, ಮೈತ್ರಿಗೆ ಮುಂದಾಗಲಿವೆ. ಈ ಜಿಲ್ಲೆಗಳಿಗೆ ಸೇರಿದ ಉಭಯ ಪಕ್ಷಗಳ ಜಿಲ್ಲಾಧ್ಯಕ್ಷರು, ಸ್ಥಳೀಯ ಮಟ್ಟದಲ್ಲಿ ಹೊಂದಾ ಣಿಕೆ ಮಾಡಿಕೊಳ್ಳುವುದಾಗಿ ಕೇಂದ್ರ ಘಟಕಕ್ಕೆ ಶಿಫಾರಸು ಮಾಡುತ್ತವೆ. ಜಿಲ್ಲಾ ಘಟಕಗಳ ಶಿಫಾರಸ್ಸನ್ನು ಉಭಯ ರಾಜ್ಯಾಧ್ಯಕ್ಷರು ಸಮ್ಮತಿಸಿದ ನಂತರ ಚುನಾವಣಾ ಪೂರ್ವ ಸೀಟು ಹಂಚಿಕೆ ಮಾಡಿಕೊಂಡು, ಕಣಕ್ಕೆ ಇಳಿಯಲಿವೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್, ಜೆಡಿಎಸ್ ರಾಷ್ಟ್ರಾ ಧ್ಯಕ್ಷ ಎಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ, ಚುನಾವಣೆಗೆ ಸಂಬಂಧಿಸಿ ದಂತೆ ಚರ್ಚೆ ನಡೆಸಿದ ಸಂದರ್ಭದಲ್ಲೇ ಬಿಜೆಪಿಗೆ ಕಡಿವಾಣ ಹಾಕಲು ಈ ಜಿಲ್ಲೆಗಳಲ್ಲಿ ಮೈತ್ರಿ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಹೆಚ್.ವಿಶ್ವನಾಥ್ ಅಭಿಪ್ರಾಯದಂತೆ ಸೀಮಿತ ಮೈತ್ರಿ ನಡೆದಿದೆ ಎನ್ನಲಾಗಿದೆ. ಇದರಿಂದ ಮೈಸೂರು, ಕೊಡಗು, ಶಿವಮೊಗ್ಗದಲ್ಲಿ ಬಿಜೆಪಿಗೆ ಜೆಡಿಎಸ್ ಪೈಪೋಟಿ ನೀಡಿದೆ.

ಉಳಿದ ಜಿಲ್ಲೆಗಳಲ್ಲಿ ಬಿಜೆಪಿ ಜೊತೆ ಕಾಂಗ್ರೆಸ್ ಸೆಣಸಲಿದೆ. ಇಲ್ಲಿ ಜೆಡಿಎಸ್ ಹೋರಾಟ ನಗಣ್ಯ. ಆದರೂ ಈ ಜಿಲ್ಲೆಗಳಿಗೆ ಸೀಮಿತವಾಗಿ ಹೊಂದಾಣಿಕೆ ಮಾಡಿಕೊಂಡು ವಿರೋಧಿ ಪಕ್ಷವನ್ನು ಕಟ್ಟಿಹಾಕುವ ಪ್ರಯತ್ನ ಮಾಡಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳ ಸೀಮಿತ ಮೈತ್ರಿ ಯಶಸ್ವಿಯಾದರೆ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ವೇಗವನ್ನು ತಡೆಗಟ್ಟಬಹುದು ಹಾಗೂ ಉಭಯ ಪಕ್ಷಗಳು ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದಾಗಿದೆ ಎಂಬ ಲೆಕ್ಕಾಚಾರವಾಗಿದೆ. ಇದೇ ಆಗಸ್ಟ್ 29ರಂದು ರಾಜ್ಯದ 105 ನಗರ ಸ್ಥಳೀಯ ಸಂಸ್ಥೆಗಳಿಗೆ ಮೊದಲ ಹಂತದ ಚುನಾವಣೆ ನಡೆಯುತ್ತಿದೆ.