‘ಮುಕ್ತ ವಿವಿಗೆ ಮುಕ್ತಿ’ 17 ಕೋರ್ಸ್‍ಗಳಿಗೆ ಯುಜಿಸಿ ಮಾನ್ಯತೆ

ಮೈಸೂರು:  ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯಕ್ಕೆ ಕವಿದಿದ್ದ ಕಾರ್ಮೋಡ ಸರಿದಿದ್ದು, ಒಟ್ಟು 17 ಕೋರ್ಸ್‍ಗಳಿಗೆ ಯುಜಿಸಿ ಮಾನ್ಯತೆ ದೊರೆತಿದೆ.

ಬ್ಯಾಚುಲರ್ ಆಫ್ ಆಟ್ರ್ಸ್ (ಬಿಎ), ಬ್ಯಾಚುಲರ್ ಆಫ್ ಕಾಮರ್ಸ್ (ಬಿ.ಕಾಂ), ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ(ಬಿ.ಲಿಬ್), ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ, ಅರ್ಥಶಾಸ್ತ್ರ, ಇಂಗ್ಲಿಷ್, ಹಿಂದಿ, ಇತಿಹಾಸ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಕನ್ನಡ, ರಾಜ್ಯಶಾಸ್ತ್ರ, ಸಾರ್ವ ಜನಿಕ ಆಡಳಿತ, ಸಮಾಜಶಾಸ್ತ್ರ, ಉರ್ದು, ವಾಣಿಜ್ಯ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಹಾಗೂ ಪರಿಸರ ವಿಜ್ಞಾನ ವಿಷಯ ಗಳಲ್ಲಿ ಸ್ನಾತಕೋತ್ತರ ಪದವಿ(ಎಂ.ಎ) ಶಿಕ್ಷಣಕ್ಕೆ ಅವಕಾಶ ನೀಡಲಾಗಿದ್ದು, 2018-19ರಿಂದ 2022-23ನೇ ಶೈಕ್ಷಣಿಕ ಸಾಲಿನ ವರೆಗೆ ಮಾನ್ಯತೆ ದೊರೆತಿದ್ದು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಸಂತಸದೊಂದಿಗೆ ಆತಂಕ: ಗ್ರಾಮೀಣ ಪ್ರದೇಶದವರು, ಉದ್ಯೋಗಿಗಳು, ಗೃಹಿಣಿಯರು ಸೇರಿದಂತೆ ಓದಿನ ಬಗ್ಗೆ ಆಸಕ್ತಿಯುಳ್ಳವರಿಗೆ ತೆರೆದ ಹಾಗೂ ದೂರ ಶಿಕ್ಷಣ ವ್ಯವಸ್ಥೆಯಡಿ ಪದವಿ, ಸ್ನಾತಕೋತ್ತರ ಪದವಿ ಪಡೆಯಬಹುದು. ಆದರೆ ಮೂರು ವರ್ಷಗಳ ಹಿಂದೆ ಕಾರಣಾಂತರಗಳಿಂದ ಕರಾಮುವಿ ಕೋರ್ಸ್‍ಗಳಿಗೆ ಯುಜಿಸಿ ಮಾನ್ಯತೆ ನೀಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಇದೀಗ ಮಾನ್ಯತೆ ದೊರೆತಿರುವುದು ಸಂತಸದ ವಿಷಯವಾದರೂ ಈ ಹಿಂದೆ ಪರೀಕ್ಷೆ ಬರೆದು ಅಂಕಪಟ್ಟಿಗೆ ಕಾದಿರುವ ಹಾಗೂ ಅಂಕಪಟ್ಟಿ ಸಿಕ್ಕಿದ್ದರೂ ಅದಕ್ಕೆ ಮಾನ್ಯತೆಯಿಲ್ಲ ಎಂಬ ತಿರಸ್ಕಾರಕ್ಕೆ ಒಳಗಾಗಿರುವ ವಿದ್ಯಾರ್ಥಿಗಳಲ್ಲಿರುವ ಆತಂಕ ಮಾತ್ರ ನಿವಾರಣೆಯಾಗಿಲ್ಲ. ಪ್ರಸಕ್ತ ಸಾಲಿನಿಂದ ಪ್ರವೇಶಾತಿಗೆ ಅವಕಾಶ ಕಲ್ಪಿಸಿರುವ ಯುಜಿಸಿ, ಹಿಂದಿನ ಶೈಕ್ಷಣಿಕ ಸಾಲಿನ ಮಾನ್ಯತೆ ಸಂಬಂಧ ಯಾವುದೇ ಮಾಹಿತಿ ನೀಡಿಲ್ಲ.

ರಾಮದಾಸ್ ಪರಿಶ್ರಮ: ಕರಾಮುವಿಯ ಹಲವು ಕೋರ್ಸ್‍ಗಳಿಗೆ ಮಾನ್ಯತೆ ದಕ್ಕುವಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಎಸ್.ಎ.ರಾಮದಾಸ್ ಅವರ ಪರಿಶ್ರಮವಿದೆ. ಮೂರ್ನಾಲ್ಕು ದಿನಗಳಿಂದ ದೆಹಲಿಯಲ್ಲಿರುವ ಅವರು, ಮಂಗಳವಾರ ಮುಕ್ತ ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಅವರೊಂದಿಗೆ ಯುಜಿಸಿ ಛೇರ್ಮನ್ ಪ್ರೊ.ಡಿ.ಪಿ.ಸಿಂಗ್ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ್ದರು. ಅಲ್ಲದೆ ಮಾನ್ಯತೆಗೆ ಪೂರಕವಾದ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಿದ್ದರು. ನಂತರ ಯುಜಿಸಿ ಸಭೆಯಲ್ಲಿ ಮುಕ್ತ ವಿವಿಗೆ ಪ್ರಸ್ತುತ ಸಾಲಿನಿಂದ ಯುಜಿಸಿ ಮಾನ್ಯತೆ ನೀಡಲು ಒಪ್ಪಿಗೆ ದೊರೆತಿತ್ತು. ಬಳಿಕ ಕೇಂದ್ರ ಮಾನವ ಸಂಪನ್ಮೂಲ ಸಚಿವರಾದ ಪ್ರಕಾಶ್ ಜಾವಡೇಕರ್ ಅವರನ್ನೂ ಭೇಟಿ ಮಾಡಿದ ರಾಮದಾಸ್ ಅವರು ಮನವಿ ಮಾಡಿದ್ದರು. ಕಡೆಗೆ ಮಾನ್ಯತೆ ಸಂಬಂಧಿತ ಕಡತಕ್ಕೆ ಜಾವಡೇಕರ್ ಅಂಕಿತ ಹಾಕಿ, ವಿವಿ ಪ್ರವೇಶಾತಿಗೆ ಅನುಮತಿ ನೀಡಿದ್ದರು.

ಕರಾಮುವಿ 17 ಕೋರ್ಸ್‍ಗಳ ಪ್ರವೇಶಕ್ಕೆ ಯುಜಿಸಿ ಮಾನ್ಯತೆ ನೀಡಿದೆ. ಈ ಸಂದರ್ಭದಲ್ಲಿ ಯುಜಿಸಿ ಛೇರ್ಮನ್ ಪ್ರೊ.ಡಿ.ಪಿ.ಸಿಂಗ್, ಕೇಂದ್ರ ಮಾನವ ಸಂಪನ್ಮೂಲ ಸಚಿವರಾದ ಪ್ರಕಾಶ್ ಜಾವಡೇಕರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇದಕ್ಕೆ ಸಹಕರಿಸಿದ ಕೇಂದ್ರ ಸಚಿವರಾದ ಅನಂತಕುಮಾರ್ , ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನೂ ಅಭಿನಂದಿಸುತ್ತೇನೆ. ಈಗಾಗಲೇ ಅನೇಕ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಅಂಕಪಟ್ಟಿ, ಪದವಿ ಪ್ರಮಾಣ ಪತ್ರ ನಿರೀಕ್ಷೆಯಲ್ಲಿದ್ದಾರೆ. ಅಂಕಪಟ್ಟಿ ಪಡೆದವರೂ ಮಾನ್ಯತೆಯಿಲ್ಲ ಎಂಬ ತಿರಸ್ಕಾರಕ್ಕೆ ಗುರಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ಕಡತ ರಾಜ್ಯಪಾಲರ ಬಳಿಯಿದೆ. ಅತೀ ಶೀಘ್ರದಲ್ಲೇ ಅವರನ್ನು ಭೇಟಿ ಮಾಡಿ, ಆ ಸಮಸ್ಯೆಯನ್ನೂ ಇತ್ಯರ್ಥಪಡಿಸಲು ಪ್ರಯತ್ನಿಸುತ್ತೇನೆ. – ಶಾಸಕ ಎಸ್.ಎ.ರಾಮದಾಸ್.