ಸ್ಥಳೀಯ ಸಂಸ್ಥೆ: ಶಾಂತಿಯುತ ಮತದಾನ

ಅರಕಲಗೂಡು ಶೇ. 83.14, ಆಲೂರು ಶೇ. 81.44 ಮತ ಚಲಾವಣೆ
ಹಾಸನ: ಜಿಲ್ಲೆಯ ಅರಕಲಗೂಡು ಹಾಗೂ ಆಲೂರು ಪಟ್ಟಣ ಪಂಚಾಯಿತಿಗಳಿಗೆ ಬುಧವಾರ ಶಾಂತಿಯುತವಾಗಿ ಮತದಾನ ನಡೆದಿದೆ.

ಅರಕಲಗೂಡು ಪಟ್ಟಣದ 3ನೇ ವಾರ್ಡ್‍ನಲ್ಲಿ ಮತದಾರರಿಗೆ ವಿತರಿಸಲು ತಂದಿದ್ದ 50 ಸಾವಿರ ಮೌಲ್ಯದ 46 ಚೀಲ ಅಕ್ಕಿ ವಶ, ಕೆಲವೆಡೆ ಮತಯಂತ್ರ ದೋಷವನ್ನು ಹೊರತು ಪಡಿಸಿದರೆ ಬೇರೆ ಯಾವುದೇ ಅಹಿತಕರ ಘಟನೆ ನಡೆದಿ ರುವ ಬಗ್ಗೆ ವರದಿಯಾಗಿಲ್ಲ. ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತ ದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಅರಕಲಗೂಡು ಪಟ್ಟಣ ಪಂಚಾಯಿತಿ ಯಲ್ಲಿ ಶೇ. 83.14 ಹಾಗೂ ಆಲೂರು ಪಟ್ಟಣ ಪಂಚಾಯಿತಿಯಲ್ಲಿ ಶೇ. 81.44ರಷ್ಟು ಮತ ಚಲಾವಣೆಯಾಗಿದ್ದು, ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.

ಅರಕಲಗೂಡು ಹಾಗೂ ಆಲೂರು ಪಟ್ಟಣ ಪಂಚಾಯಿತಿಯ ಅವಧಿ ಮುಗಿದ ಹಿನ್ನೆಲೆಯಲ್ಲಿ ಈ ಎರಡು ಸ್ಥಳೀಯ ಸಂಸ್ಥೆ ಗಳಿಗೆ ಚುನಾವಣೆ ನಡೆದಿದ್ದು, ಮತದಾ ರರು ಬೆಳಿಗ್ಗೆಯಿಂದಲೇ ತಮ್ಮ ಮತಗಟ್ಟೆ ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಉತ್ಸಾಹ ದಿಂದ ಮತದಾನ ಮಾಡಿದರು.

ಅರಕಲಗೂಡು ಪಟ್ಟಣ ಪಂಚಾಯಿತಿಯ 17ವಾರ್ಡ್‍ಗಳು ಹಾಗೂ ಆಲೂರಿನಲ್ಲಿ 11 ವಾರ್ಡ್‍ಗಳು ಸೇರಿದಂತೆ ಒಟ್ಟು 28 ವಾರ್ಡ್ ಗಳಿಗೆ ಚುನಾವಣೆ ನಡೆಯಿತು. ಸಾರ್ವ ಜನಿಕರಿಗೆ ಹಾಗೂ ಮತದಾರರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಆಯಾ ಮತಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ವಿಕಲಚೇತನರಿಗೆ ಹಾಗೂ ಆಶಕ್ತ ಹಿರಿಯ ನಾಗರಿಕರಿಗೆ ವಿಶೇಷ ಗಾಲಿ ಕುರ್ಚಿ ವ್ಯವಸ್ಥೆ ಮಾಡಲಾಗಿತ್ತು. ಅರಕಲಗೂಡು ತಾಲೂ ಕಿನ 10ನೇ ವಾರ್ಡ್‍ನ ಎ.ಸಿ.ಮಧು ಎಂಬು ವರ ಮದುವೆ ಮಂಟಪದಿಂದ ನೇರವಾಗಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದು ವಿಶೇಷವಾಗಿತ್ತು.

ವಾಹನ ವ್ಯವಸ್ಥೆ: ಮತದಾರರಿಗೆ ಮತ ಗಟ್ಟೆಗಳಿಗೆ ತೆರಳು ವಾಹನದ ವ್ಯವಸ್ಥೆ ಯನ್ನು ಅಭ್ಯರ್ಥಿಗಳ ಕಡೆಯವರು ಮಾಡಿದ್ದರು. ಮತಗಟ್ಟೆಗಳ ಮುಂಭಾಗ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿ ಗರು ಮತಯಾಚಿಸಿದರು.

ಬಿಗಿ ಬಂದೋಬಸ್ತ್: ಮತಕೇಂದ್ರಗಳ ಸುತ್ತ ಬಿಗಿ ಪೆÇಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲಾ ಪೆÇಲೀಸ್ ವರಿ ಷ್ಠಾಧಿಕಾರಿ ಚೇತನ್ ಸಿಂಗ್ ರಾಥೋಡ್, ಆಲೂರು ಮತ್ತು ಅರಕಲಗೂಡಿನ ಕೆಲ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿ ಶೀಲಿಸಿದರು. ಮೇ.31 ರಂದು ಮತ ಎಣಿಕೆ ನಡೆಯಲಿದೆ.

ಅರಕಲಗೂಡು 17 ಸ್ಥಾನಕ್ಕೆ 54 ಮಂದಿ ಸ್ಪರ್ಧೆ
ಅರಕಲಗೂಡು: ಕಳೆದ ಚುನಾವಣೆಯಲ್ಲಿ 15 ವಾರ್ಡ್‍ಗಳಿದ್ದ ಪಪಂ ಇದೀಗ 17ವಾರ್ಡ್‍ಗಳಾಗಿ ಬದಲಾಗಿದೆ. 13,141 ಮಂದಿ ಮತದಾರರು ಇದ್ದು, ಒಟ್ಟು 54ಮಂದಿ ಭವಿಷ್ಯ ಮತಪೆಟ್ಟಿಗೆ ಸೇರಿದೆ. ಕಣದಲ್ಲಿ 17ಮಂದಿ ಜೆಡಿಎಸ್, 16ಮಂದಿ ಬಿಜೆಪಿ, 13 ಮಂದಿ ಕಾಂಗ್ರೆಸ್, ಇಬ್ಬರು ಬಿಎಸ್‍ಪಿ ಹಾಗೂ 6 ಮಂದಿ ಪಕ್ಷೇತರ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ಚುರುಕಿನಿಂದ ಮತದಾನ ನಡೆಯಿತು. 8ಗಂಟೆಯ ವೇಳೆ ತುಂತುರು ಮಳೆಯಾಯಿತು. ಮತದಾರರು ಮಳೆಯನ್ನು ಲೆಕ್ಕಿಸದೇ ಮತದಾನ ಮಾಡಿದರು. ಕೆಲವು ಮತಗಟ್ಟೆಗಳ ಬಳಿ ಅಭ್ಯರ್ಥಿಗಳ ಬೆಂಬಲಿಗರ ನಡುವೆ ಚಿಕ್ಕಪುಟ್ಟ ಮಾತಿನ ಚಕಮಕಿ ಹೊರತುಪಡಿಸಿ ಯಾವುದೇ ಘರ್ಷಣೆ ಇಲ್ಲದೆ ಶಾಂತಿಯುತವಾಗಿ ಸಾಗಿತು. ಅರಕಲಗೂಡು ಪಟ್ಟಣ ಪಂಚಾಯಿತಿಯ 17 ವಾರ್ಡ್‍ಗಳಲ್ಲಿ ಶೇ. 83.14 ರಂದು ಮತದಾನವಾಗಿದೆ. ಒಟ್ಟು 1,3141 ಮತದಾರರಿದ್ದು, 5,535 ಪುರುಷ 5,391 ಮಹಿಳಾ ಮತದಾರರು ಸೇರಿದಂತೆ 10, 926 ಮಂದಿ ಮತ ಚಲಾಯಿಸಿದ್ದಾರೆ.

ಆಲೂರಿನಲ್ಲಿ ಚುರುಕಿನ ಮತದಾನ
ಆಲೂರು: ಆಲೂರು ಪಟ್ಟಣ ಪಂಚಾಯಿತಿಗೆ ಬುಧವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರು ಉತ್ಸಾಹದಿಂದ ಹಕ್ಕು ಚಲಾಯಿಸಿದರು. ಒಟ್ಟು 11 ವಾರ್ಡ್‍ಗಳನ್ನು ಹೊಂದಿರುವ ಆಲೂರು ಪಟ್ಟಣ ಪಂಚಾಯಿತಿಯಿಂದ 40 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಎಲ್ಲರ ಭವಿಷ್ಯ ಮತ ಪೆಟ್ಟಿಗೆ ಸೇರಿದೆ. ಶೇ. 81.44 ರಷ್ಟು ಮತದಾನವಾಗಿದೆ. ಒಟ್ಟು 5,318 ಮತದಾರರ ಪೈಕಿ 2,179 ಪುರುಷ ಹಾಗೂ 2,152 ಮಹಿಳಾ ಮತದಾರರು ಸೇರಿದಂತೆ 4,331 ಮತದಾರರು ಮತ ಚಲಾಯಿಸಿದ್ದಾರೆ.

50 ಸಾವಿರ ಮೌಲ್ಯದ 46 ಚೀಲ ಅಕ್ಕಿ ವಶ
ಅರಕಲಗೂಡು: ಮತದಾರರಿಗೆ ಹಂಚಲು ತಂದಿದ್ದ 50 ಸಾವಿರ ಮೌಲ್ಯದ ಸುಮಾರು 46 ಚೀಲ ಅಕ್ಕಿಯನ್ನು ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ವಾಹನ ಸಮೇತ ವಶಪಡಿಸಿಕೊಂಡಿರುವ ಘಟನೆ ಪಟ್ಟಣದ 3ನೇ ವಾರ್ಡ್‍ನಲ್ಲಿ ನಡೆದಿದೆ. ಪಟ್ಟಣದ ಗುಡ್ಡನಕೊಪ್ಪಲು ಬಳಿ ಮಂಗಳವಾರ ತಡರಾತ್ರಿ ಪಟ್ಟಣ ಪೆÇಲೀಸರು ಗಸ್ತು ತಿರುಗುತ್ತಿದ್ದ ವೇಳೆ 3ನೇ ವಾರ್ಡ್ ಮತದಾರರಿಗೆ ಅಕ್ಕಿಯನ್ನು ಹಂಚಿಕೆ ಮಾಡಲಾಗುತ್ತಿರುವುದು ಕಂಡು ಬಂದಿದೆ. ಈ ವೇಳೆ ಪೆÇಲೀಸರನ್ನು ನೋಡಿ ಅಕ್ಕಿ ಹಂಚುತ್ತಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ. ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ಪರಿಶೀಲಿಸಿ ಅಕ್ಕಿ ಹಾಗೂ ವಾಹನ ವಶಪಡಿಸಿಕೊಂಡಿದ್ದಾರೆ.