ಲೋಕಸಭಾ ಚುನಾವಣೆ: ರೌಡಿಶೀಟರ್‍ಗಳ ಪರೇಡ್

ಅಹಿತಕರ ಘಟನೆಯಲ್ಲಿ ಭಾಗಿಯಾದರೆ ಕಾನೂನು ಕ್ರಮ: ಎಚ್ಚರಿಕೆ
ಕುಶಾಲನಗರ: ಲೋಕಸಭಾ ಚುನಾವಣೆ ಸಂದರ್ಭ ಕಾನೂನು ಸುವ್ಯ ವಸ್ಥೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ಯಾವುದೇ ಅಹಿತಕರ ಘಟನೆಯಲ್ಲಿ ಭಾಗಿಯಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಸೋಮವಾರಪೇಟೆ ವಿಭಾಗ ಉಪ ಪೊಲೀಸ್ ಅಧೀಕ್ಷಕ ದಿನಕರ ಶೆಟ್ಟಿ ರೌಡಿಗಳಿಗೆ ಎಚ್ಚರಿಕೆ ನೀಡಿದರು.

ಇಲ್ಲಿನ ಸೋಮವಾರಪೇಟೆ ಉಪ ವಿಭಾಗ ಪೊಲೀಸ್ ಉಪ ಅಧೀಕ್ಷಕರ ಕಚೇರಿ ಆವರಣದಲ್ಲಿ ಬುಧವಾರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕುಶಾಲನಗರ ಮತ್ತು ಸುಂಟಿಕೊಪ್ಪ ವ್ಯಾಪ್ತಿಯ ರೌಡಿಶೀಟರ್‍ಗಳ ಪರೇಡ್ ನಡೆಸಲಾಯಿತು. ಡಿವೈಎಸ್ಪಿ ದಿನಕರ್ ಶೆಟ್ಟಿ ನೇತೃತ್ವದಲ್ಲಿ ನಡೆದ ಪೆರೇಡ್‍ನಲ್ಲಿ ಪ್ರತಿಯೊಬ್ಬ ರೌಡಿಯನ್ನು ವಿಚಾರಣೆಗೆ ಒಳಪಡಿಸಿ ಅವರ ಹಿನ್ನೆಲೆಯನ್ನು ತಿಳಿದುಕೊಂಡರು. ಚುನಾವಣಾ ಅಪರಾಧಗಳಲ್ಲಿ ಹಾಗೂ ಗಲಭೆಗಳಲ್ಲಿ ಪಾಲ್ಗೊಳ್ಳುವ ರೌಡಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ಶಿಫಾರಸ್ಸು ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದರು. ಚುನಾವಣೆಯಲ್ಲಿ ಯಾವುದೇ ತೊಂದರೆ ಮಾಡದೆ ಶಾಂತಿಯುವಾಗಿ ಚುನಾವಣೆಯಲ್ಲಿ ಭಾಗವಹಿಸಬೇಕು. ಅಲ್ಲದೆ ತಮ್ಮ ಸುತ್ತಮುತ್ತಲ ಪರಿಸರದಲ್ಲಿ ಮಾದರಿ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಹಾಗೂ ಗಲಾಟೆ ಪ್ರಕರಣಗಳು ನಡೆದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು. ರೌಡಿ ಶೀಟರ್ ಪರೇಡ್‍ನಲ್ಲಿ ಸುಂಟಿಕೊಪ್ಪ ಹಾಗೂ ಕುಶಾಲನಗರ ವ್ಯಾಪ್ತಿಯ 29 ರೌಡಿಗಳು ಪಾಲ್ಗೊಂಡಿದ್ದರು.

ಸೋಮವಾರಪೇಟೆ ಉಪವಿಭಾಗದಲ್ಲಿ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡ ಗಿಸಕೊಳ್ಳುವ ಮೂಲಕ ಕಾನೂನು ಸುವ್ಯವಸ್ಥೆಗೆ ಭಂಗ ತರುತ್ತಿದ್ದ 4 ಮಂದಿ ರೌಡಿಗಳನ್ನು ಗರಿಪಾರು ಮಾಡಲು ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ ಎಂದು ಡಿವೈಎಸ್ಪಿ ದಿನಕರ್ ಶೆಟ್ಟಿ ತಿಳಿಸಿದರು. ಈ ಸಂದರ್ಭ ವೃತ್ತ ನಿರೀಕ್ಷಕ ಬಿ.ಎಸ್.ದಿನೇಶ್ ಕುಮಾರ್, ನಗರ ಪೊಲೀಸ್ ಠಾಣಾಧಿಕಾರಿ ಪಿ.ಜಗದೀಶ್, ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಸಿ.ನಂದೀಶ್ ಕುಮಾರ್, ಸಂಚಾರಿ ಪೊಲೀಸ್ ಠಾಣಾಧಿಕಾರಿ ಪಿ.ಪಿ.ಸೋಮೇಗೌಡ, ಸುಂಟಿಕೊಪ್ಪ ಪೊಲೀಸ್ ಠಾಣಾ ಎಎಸ್‍ಐ ಬಿ.ಎನ್.ಶಿವಪ್ಪ, ಅರ್ಚನಾ ಹಾಗೂ ಸಿಬ್ಬಂದಿ ಇದ್ದರು.

ಅಕ್ರಮ ಮದ್ಯ ವಶ
ಮಡಿಕೇರಿ: ಕೊಡಗು ಜಿಲ್ಲಾ ಅಬಕಾರಿ ಇಲಾಖೆಯಿಂದ ಮಾ.19 ರಂದು ವಿವಿಧ ಕಡೆ ದಾಳಿ ನಡೆಸಿ 19.675 ಲೀ. ಮದ್ಯ ಮತ್ತು 15 ಲೀ. ಸೇಂದಿ ಹಾಗೂ 14 ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿದ್ದು, 3-ಘೋರ ಪ್ರಕರಣ, 16 ಇತರೆ ಪ್ರಕರಣಗಳು ದಾಖಲಾಗಿ ರುತ್ತದೆ. ಹಾಗೆಯೇ ಒಂದು ಆಟೋರಿಕ್ಷಾ ವಾಹನವನ್ನು ವಶಪಡಿಸಿಕೊಂಡು ಒಟ್ಟು ಅಂದಾಜು ವೆಚ್ಚ ರೂ. 85,363ಗಳಾಗಿದೆ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತರು ತಿಳಿಸಿದ್ದಾರೆ.

ಸಹಾಯವಾಣಿ ಕೇಂದ್ರ ಆರಂಭ
ಮಡಿಕೇರಿ: ಲೋಕಸಭಾ ಚುನಾವಣಾ ಸಂಬಂಧ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ 24×7 ಕಂಟ್ರೋಲ್ ರೂಮ್ (ಸಹಾಯವಾಣಿ)ನ್ನು ತೆರೆದಿದ್ದು, ಚುನಾವಣೆ ಸಂಬಂಧ ದೂರು ನೀಡಲು ಅಥವಾ ಇನ್ನಿತರೆ ಯಾವುದೇ ಚುನಾವಣಾ ಮಾಹಿತಿಗಳನ್ನು ಪಡೆಯಲು ಸಹಾಯಕ ಚುನಾವಣಾಧಿಕಾರಿಯವರ ಕಚೇರಿ, ಕಂಟ್ರೋಲ್ ರೂಮ್ ದೂ.ಸಂ.08272-222700ಗೆ ಕರೆ ಮಾಡುವಂತೆ ಉಪ ವಿಭಾಗಾಧಿಕಾರಿ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಟಿ.ಜವರೇಗೌಡ ತಿಳಿಸಿದ್ದಾರೆ.