ಅಧಿಕಾರಿಗಳೊಂದಿಗೆ ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥಶೆಟ್ಟಿ ಸಭೆ

ಮೈಸೂರು: ವಿವಿಧ ಇಲಾಖೆಗಳ ಕಾರ್ಯಚಟುವಟಿಕೆ ಸಂಬಂಧ ಲೋಕಾಯುಕ್ತ ಅಧಿಕಾರಿಗಳಿಂದ ವರದಿ ಪಡೆದಿದ್ದು, ಅಗತ್ಯವಿದ್ದರೆ ಸುಮೊಟೊ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ ಶೆಟ್ಟಿ ತಿಳಿಸಿದರು.
ಮೈಸೂರಿನ ಲೋಕಾಯುಕ್ತ ಎಸ್‍ಪಿ ಕಚೇರಿಯಲ್ಲಿ ಬುಧವಾರ ಅಧಿಕಾರಿ ಗಳೊಂದಿಗೆ ಸಭೆ ನಡೆಸಿದ ಬಳಿಕ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಅವರು, ನಮ್ಮ ಅಧಿಕಾರಿಗಳು ತಮ್ಮ ದೈನಂದಿನ ಕರ್ತವ್ಯದಲ್ಲಿ ಸಿದ್ಧಪಡಿಸಿ ರುವ ವರದಿ ಅವಲೋಕಿಸಿ, ಅವರಿಂದ ಅಗತ್ಯವಿದ್ದ ಮಾಹಿತಿ ಪಡೆದಿದ್ದೇನೆ. ಈ ಸಂಬಂಧ ಪರಿಶೀಲಿಸಿ ಅಗತ್ಯವಿದ್ದರೆ ಸ್ವಯಂ ಪ್ರೇರಿತ (ಸುಮೊಟೊ ಪ್ರಕರಣ) ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗು ವುದು ಎಂದು ಹೇಳಿದರು.

ನಮ್ಮ ಅಧಿಕಾರಿಗಳು ತಮ್ಮ ದೈನಂದಿನ ಕರ್ತವ್ಯದಲ್ಲಿ ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ವರದಿ ಸಿದ್ಧಪಡಿಸಿದ್ದಾರೆ. ಅವುಗಳ ಆಧಾ ರದ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳ ಬೇಕು ಎಂದು ಅವಲೋಕಿಸಿ ನಿರ್ದೇಶನ ನೀಡಲಾಗುವುದು ಎಂದ ಅವರು, ವರ ದಿಗೆ ಸಂಬಂಧಿಸಿದ ವಿವರಗಳನ್ನು ಬಹಿ ರಂಗಪಡಿಸಲು ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎಸಿಬಿ ರಚನೆಯಿಂದ ಲೋಕಾಯುಕ್ತದ ಮೇಲಿನ ಹೊರೆ ಕಡಿಮೆಯಾಗಿದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹೊರೆ ಕಡಿಮೆಯಾಗಿಲ್ಲ. ಬೇಕಾದಷ್ಟು ಪ್ರಕರಣಗಳು ಬಾಕಿ ಇವೆ. ಹಲವು ಪ್ರಕರಣಗಳು ತನಿಖೆ ಹಂತದಲ್ಲಿವೆ. ಎಲ್ಲಾ ಇಲಾಖೆಗಳ ಮೇಲೆ ನಮ್ಮ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ ಎಂದು ತಿಳಿಸಿದರು.

ಲೋಕಾಯುಕ್ತ ಎಸ್‍ಪಿ ಕೆ.ಎನ್. ಮಾದಯ್ಯ, ಡಿವೈಎಸ್‍ಪಿ ಅರುಣ್‍ನಾಗೇ ಗೌಡ, ಇನ್ಸ್‍ಪೆಕ್ಟರ್‍ಗಳಾದ ಅಬ್ಧುಲ್ ಕರೀಮ್ ರಾವತರ್, ಎಂ.ಜಯರತ್ನ, ಬಿ.ವಿ.ರೂಪಶ್ರೀ ಸಭೆಯಲ್ಲಿ ಪಾಲ್ಗೊಂ ಡಿದ್ದರು. ಮಧ್ಯಾಹ್ನ ಬಸವ ಜಯಂತಿ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಲೋಕಾಯುಕ್ತ ಪಿ.ವಿಶ್ವನಾಥ ಶೆಟ್ಟಿ ಬಳಿಕ ಬೆಂಗಳೂರಿಗೆ ತೆರಳಿದರು.