ಭಗವಾನ್ ಬಿರ್ಸಾಮುಂಡಾ ಭವನ ಲೋಕಾರ್ಪಣೆ

ಹೆಚ್.ಡಿ.ಕೋಟೆ, ಮಾ.17(ಮಂಜು)-ವನವಾಸಿಗಳು ಅತ್ಯಂತ ಸ್ವಾವಲಂಬಿ ಹಾಗೂ ಸರಳ ಜೀವಿಗಳು ಎಂದು ಅಖಿಲ ಭಾರತೀಯ ವನವಾಸಿ ಕಲ್ಯಾಣಾಶ್ರಮ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀಪಾದ ಅಭಿಪ್ರಾಯಪಟ್ಟರು.

ಪಟ್ಟಣದ ಸ್ಟೇಡಿಯಂ ಬಡಾ ವಣೆಯಲ್ಲಿ ವನವಾಸಿ ಕಲ್ಯಾಣ ಕರ್ನಾಟಕದಿಂದ ನೂತನವಾಗಿ ನಿರ್ಮಾಣವಾಗಿರುವ ಭಗವಾನ್ ಬಿರ್ಸಾಮುಂಡಾ ಭವನ ಲೋಕಾ ರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಬಂದು 75 ವರ್ಷವಾದರೂ ಆದಿವಾಸಿಗಳಿಗೆ ಇನ್ನೂ ಸರಿಯಾದ ನೆಲೆ ಇಲ್ಲ. ಜೀವನ ನಿರ್ವಹಣೆಗೆ ಜಮೀನು ಇಲ್ಲದೆ ನಿಕೃಷ್ಟವಾಗಿ ಬದುಕುತ್ತಿದ್ದಾರೆ. ಇವರ ಬದುಕು ಹಸನು ಮಾಡುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ವಿಷಾದಿಸಿದರು.

ಅರಣ್ಯದಲ್ಲಿ ಖಾಸಗಿಯವರಿಗೆ ರೆಸಾರ್ಟ್ ನಡೆಸಲು ಅವಕಾಶ ನೀಡುವ ಸರ್ಕಾರ ವನ ವಾಸಿಗಳಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ ಏಕೆ ಎಂದು ಪ್ರಶ್ನಿಸಿದರಲ್ಲದೆ, ಮುನ್ನೂರು ನಾನೂರು ವರ್ಷಗಳ ಹಿಂದೆ ವನವಾಸಿಗಳ ಬದುಕು ಉತ್ತಮವಾಗಿತ್ತು. ಪರಕೀಯರು ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದ ನಂತರದ ದಿನಗಳಲ್ಲಿ ವನವಾಸಿಗಳ ಬದುಕು ಅಸ್ತವ್ಯಸ್ತವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಸಂಸ್ಥೆ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಮಾತನಾಡಿದರು. ಕಾರ್ಯಕ್ರಮದಲ್ಲಿ ವನವಾಸಿ ರಾಜ್ಯಾಧ್ಯಕ್ಷ ಮನು ಕಾವೇರಪ್ಪ ಚಕ್ಕೇರೆ, ಉಪಾಧ್ಯಕ್ಷ ಹರಿಹರನ್ ಪಿಳ್ಳೈ, ಡಾ.ಹೆಚ್.ಕೆ. ನಾಗು, ಶ್ರೀರಾಮ್‍ಕುಮಾರ್, ಜಿ.ಆರ್.ಪ್ರಕಾಶ್, ವೆಂಕಟರಾಮ್, ಭಾಸ್ಕರ್ ಇದ್ದರು.