ಹತ್ತಾರು ಸಮಸ್ಯೆಗಳ ಸಂಬಂಧ ಹರಿದು ಬಂದ ದೂರುಗಳು

ಮೈಸೂರು, ಜೂ.27(ಆರ್‍ಕೆಬಿ)- ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್ ಗುರುವಾರ 59ನೇ ವಾರ್ಡ್ ವ್ಯಾಪ್ತಿಯ ವಿವೇಕಾನಂದನಗರದಲ್ಲಿ ಕೈಗೊಂಡ ಜನ ಸ್ಪಂದನಾ ಯಾತ್ರೆ ಸಂದರ್ಭದಲ್ಲಿ ಮನೆ ಮುಂದೆ ನಿಲ್ಲಿ ಸುವ ವಾಹನಗಳ ಪೆಟ್ರೋಲ್, ಬ್ಯಾಟರಿ, ಸೈಕಲ್ ಕಳವು, ಯುಜಿಡಿ ಸಮಸ್ಯೆ, ಸ್ವಚ್ಛತೆಯ ಕೊರತೆ, ಪಾರ್ಕಿಂಗ್ ಅವ್ಯವಸ್ಥೆ, ಬಸ್ ಸೌಲಭ್ಯವಿಲ್ಲ. ವೈನ್‍ಷಾಪ್‍ಗಳಲ್ಲಿ ಚಿಲ್ಲರೆ ಮದ್ಯ ಮಾರಾಟ, ಇಂತಹ ಹತ್ತಾರು ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದವು.

ಶಾಸಕ ರಾಮದಾಸ್ ಅವರು ಎಂ.ಬ್ಲಾಕ್ ಗಣಪತಿ ದೇವಸ್ಥಾನ, ಐಶ್ವರ್ಯನಗರ, ಬನಶಂಕರಿ ದೇವಸ್ಥಾನ, ಎಂ.ಬ್ಲಾಕ್ ಗಣಪತಿ ದೇವಸ್ಥಾನ, ಪೂಜಾ ಬೇಕರಿ, ಸಾ.ರಾ.ಪೆಟ್ರೋಲ್ ಬಂಕ್ ಎದುರು, ನಾಗಮ್ಮ ಕಲ್ಯಾಣ ಮಂಟಪ, ವಿವೇಕಾನಂದ ವೃತ್ತ, ನಿಮಿಷಾಂಬ ಬಡಾ ವಣೆ ನೀರಿನ ಕಚೇರಿ ಸುತ್ತಮುತ್ತ ಪಾದಯಾತ್ರೆ ಕೈಗೊಂಡರು.

ಈ ವೇಳೆ ಹುಡ್ಕೋ ಬಡಾವಣೆಯಲ್ಲಿ ಹಲವು ವರ್ಷ ಗಳಿಂದ ಒಳ ಚರಂಡಿ ಸಮಸ್ಯೆ ಇರುವ ಬಗ್ಗೆ ಸ್ಥಳೀ ಯರ ದೂರಿಗೆ ಸ್ಪಂದಿಸಿದ ಶಾಸಕರು ಈ ಬಗ್ಗೆ ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಹಾಲಿ ಇರುವ ನಾಲ್ಕು ಇಂಚಿನ ಕೊಳವೆ ಮಾರ್ಗ ವನ್ನು ಎಂಟು ಇಂಚಿನ ಕೊಳವೆ ಮಾರ್ಗಕ್ಕೆ ಪರಿ ವರ್ತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಡಾವಣೆಯಲ್ಲಿ ಮನೆಗಳ ಮುಂದೆ ನಿಲ್ಲಿಸಿರುವ ವಾಹನಗಳ ಪೆಟ್ರೋಲ್, ಬ್ಯಾಟರಿ ಮತ್ತು ಸೈಕಲ್‍ಗಳ ಕಳವು ನಡೆಯುತ್ತಿದೆ. ಪುಂಡು ಪೋಕರಿಗಳ ಹಾವ ಳಿಯ ಬಗ್ಗೆ ನಿವಾಸಿಗಳು ಶಾಸಕರ ಗಮನ ಸೆಳೆದರು. ಈ ಬಗ್ಗೆ ತ್ವರಿತ ಕ್ರಮ ಕೈಗೊಂಡು ವರದಿ ನೀಡುವಂತೆ ಸ್ಥಳದಲ್ಲಿ ಕುವೆಂಪುನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್‍ಗೆ ಸೂಚನೆ ನೀಡಿದರು.

ರೈಲ್ವೆ ನಿಲ್ದಾಣಕ್ಕೆ ಬಸ್: ವಿವೇಕಾನಂದ ವೃತ್ತದಿಂದ ರೈಲ್ವೆ ನಿಲ್ದಾಣಕ್ಕೆ ಬಸ್ ವ್ಯವಸ್ಥೆಯಿದ್ದು, ಆದರೆ ರೈಲ್ವೆ ನಿಲ್ದಾಣದಿಂದ ವಿವೇಕಾನಂದ ವೃತ್ತಕ್ಕೆ ಯಾವುದೇ ಬಸ್ ವ್ಯವಸ್ಥೆ ಇಲ್ಲದಿರುವುದರ ಬಗ್ಗೆ ಸಾರ್ವಜನಿಕರು ಶಾಸ ಕರ ಬಳಿ ಅಹವಾಲು ಸಲ್ಲಿಸಿದರು. ಈ ಬಗ್ಗೆ ಸ್ಥಳದಲ್ಲೇ ಇದ್ದ ಬಸ್ ಡಿಪೋ ಮ್ಯಾನೇಜರ್‍ಗೆ ಕೂಡಲೇ ಸದರಿ ಸಮಸ್ಯೆಗೆ ಸ್ಪಂದಿಸಿ, ಬಸ್ ವ್ಯವಸ್ಥೆ ಕಲ್ಪಿಸಿ ಕೊಡುವ ಸಂಬಂಧ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿ ಈ ಬಗ್ಗೆ ವಾರ ದೊಳಗೆ ವರದಿಯನ್ನು ನೀಡುವಂತೆ ಸೂಚಿಸಿದರು.

ವಿವೇಕಾನಂದ ವೃತ್ತದಿಂದ ಕರ್ನಾಟಕ ಬ್ಯಾಂಕ್ ಮುಖ್ಯ ರಸ್ತೆಯ ಎರಡು ಬದಿಯಲ್ಲಿ ವಾಹನಗಳ ಪಾರ್ಕಿಂಗ್ ನಿಂದ ಸಂಚಾರಕ್ಕೆ ತೊಂದರೆಯಾಗಿರುವ ಬಗ್ಗೆ ಸಾರ್ವ ಜನಿಕರಿಂದ ದೂರು ಕೇಳಿ ಬಂತು. ಈ ಬಗ್ಗೆಯೂ ಕ್ರಮ ವಹಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿ ದರು. ವಿವೇಕಾನಂದನಗರದಲ್ಲಿರುವ ಗ್ರಂಥಾಲಯಕ್ಕೆ ಭೇಟಿ ನೀಡಿದ ಶಾಸಕರು, ಅಲ್ಲಿನ ಓದುಗರ ಸಮಸ್ಯೆ ಯನ್ನು ಆಲಿಸಿದರು. ಮಾದರಿ ಗ್ರಂಥಾಲಯವನ್ನಾ ಗಿಸಲು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಅಧಿ ಕಾರಿಗಳೊಂದಿಗೆ ಚರ್ಚಿಸಿ, ಸದ್ಯದ ಪರಿಸ್ಥಿತಿಯಲ್ಲಿ ಗ್ರಂಥಾಲಯಕ್ಕೆ ನೀರಿನ ನಲ್ಲಿಯ ವ್ಯವಸ್ಥೆ ಕಲ್ಪಿಸುವಂತೆ ವಾಣಿವಿಲಾಸ ಅಧಿಕಾರಿಗಳಿಗೆ ತಿಳಿಸಿದರು.

ಚಿಲ್ಲರೆ ಮದ್ಯ ಮಾರಾಟ: ವೈನ್‍ಶಾಪ್‍ಗಳಲ್ಲಿ ಹಾಗೂ ಎಂಆರ್‍ಪಿ ಲಿಕ್ಕರ್ ಶಾಪ್‍ಗಳಲ್ಲಿ ಸೀಲ್ ಮಾಡಿದ ಬಾಟಲಿ ಮದ್ಯವನ್ನೇ ಮಾರಾಟ ಮಾಡಬೇಕೆಂದಿದ್ದರೂ, ಚಿಲ್ಲರೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಸ್ಥಳದಲ್ಲೇ ಕುಡಿದು ಅಕ್ರಮಗಳಿಗೆ ಅವಕಾಶವಾಗುತ್ತಿರುವ ಬಗ್ಗೆ ನಿವಾಸಿಗಳು ದೂರಿದರು. ಈ ಸಂಬಂಧ ವೈನ್ ಷಾಪ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆ ಅಧಿ ಕಾರಿಗೆ ಪತ್ರ ಬರೆಯುವುದಾಗಿ ರಾಮದಾಸ್ ತಿಳಿಸಿದರು.

ಒತ್ತುವರಿ ತೆರವಿಗೆ ಆದೇಶ: ಮಳೆ ನೀರಿನ ಚರಂಡಿ ಕಂದಾಯ ನಕ್ಷೆಯಂತೆ ಎಲ್ಲಿ ಹಾದು ಹೋಗಿದೆಯೋ ಅಲ್ಲಿ ಯಾರೇ ಅಕ್ರಮ ಒತ್ತುವರಿ ಮಾಡಿದ್ದರೂ ತೆರವು ಗೊಳಿಸ ಬೇಕೆಂದು ಐಶ್ವರ್ಯ ಬಡಾವಣೆ ಮತ್ತು ಅರವಿಂದ ನಗರ ಪ್ರದೇಶದ ಅಕ್ರಮ ಒತ್ತುವರಿದಾರರ ಮೇಲೆ ಕ್ರಮಕೈಗೊಂಡು ತೆರವುಗೊಳಿಸಬೇಕೆಂದು ಶಾಸಕರು ಆದೇಶಿಸಿದರು. ಈ ಸಂಬಂಧ ಜು.3ರಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಲು ನಿರ್ಧರಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಸುನಂದಾ ಪಾಲನೇತ್ರ, ಮುಖಂಡರಾದ ಪ್ರಸಾದ್ ಪಚ್ಚು, ನಾರಾಯಣರಾವ್, ಗೋಪಿನಾಥ್, ರವಿ ಶಂಕರ್, ಆದಿ, ರೇಣುಕ, ಚಂದ್ರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.