ಮಧು ಪತ್ತಾರ್ ಸಾವಿನ ತನಿಖೆಗೆ ಆಗ್ರಹ, ಶ್ರೀಲಂಕಾ ಸರಣಿ ಸ್ಫೋಟ ಖಂಡಿಸಿ ಪ್ರತಿಭಟನೆ

ಮೈಸೂರು: ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಅನುಮಾನಾಸ್ಪದ ಸಾವು ಪ್ರಕರಣದ ತ್ವರಿತ ತನಿಖೆಗೆ ಆಗ್ರಹಿಸಿ ಹಾಗೂ ಶ್ರೀಲಂಕಾದ ಉಗ್ರರ ಬಾಂಬ್ ದಾಳಿ ಖಂಡಿಸಿ ವಿಶ್ವಮಾನವ ಮೈಸೂರು ವಿವಿ ನೌಕರರ ವೇದಿಕೆ ವತಿಯಿಂದ ಮೈಸೂರಿನ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಭಾನುವಾರ ಮೌನ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮೈಸೂರು ವಿವಿ ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ದೇಶದಲ್ಲಿ ಶಾಂತಿ-ಸುವ್ಯವಸ್ಥೆ, ಸೌಹಾರ್ದತೆ ಹಾಗೂ ಹೆಣ್ಣನ್ನು ಪೂಜ್ಯ ಭಾವನೆಯಿಂದ ನೋಡಬೇಕೆಂಬುದು ಕೇವಲ ಭಾಷಣಗಳಿಗೆ ಸೀಮಿತವಾಗಿದೆ ಎಂದು ಕಿಡಿಕಾರಿದರು.

ನಿತ್ಯ ಒಂದಿಲ್ಲೊಂದು ಮಹಿಳಾ ದೌರ್ಜನ್ಯ ಪ್ರಕರಣಗಳು ಹೊರ ಬರುತ್ತಿದ್ದು, ತೆರೆಮರೆಯಲ್ಲಿ ಅದೆಷ್ಟು ಮಹಿಳೆಯರು ನರಕ ಯಾತನೆ ಅನುಭವಿಸುತ್ತಿದ್ದಾರೋ ಗೊತ್ತಿಲ್ಲ. ಆದರೆ ಆಳುವ ಸರ್ಕಾರಗಳು ಕಠಿಣ ಕ್ರಮ ಜರುಗಿಸದೇ ಕಣ್ಮುಚ್ಚಿ ಕುಳಿತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಧು ಪತ್ತಾರ್ ಅನುಮಾನಾಸ್ಪದ ಸಾವು ಸಂಭವಿಸಿ ಹಲವು ದಿನಗಳೇ ಕಳೆದರೂ ಪ್ರಕರಣ ಭೇದಿಸಿ ತಪ್ಪಿತಸ್ಥರಿಗೆ ಕಾನೂನಾತ್ಮಕ ಶಿಕ್ಷೆ ನೀಡಲು ಸಾಧ್ಯವಾಗಿಲ್ಲ. ಶೀಘ್ರವೇ ವಿದ್ಯಾರ್ಥಿನಿಯ ಪೋಷಕರಿಗೆ ನ್ಯಾಯ ದೊರಕಿಸಿಕೊಡಬೇಕು. ಜೊತೆಗೆ ತಪ್ಪಿತಸ್ಥರಿಗೆ ಉಗ್ರವಾದ ಶಿಕ್ಷೆ ವಿಧಿಸುವ ಮೂಲಕ ತಪ್ಪು ಮಾಡಿದರೆ ಶಿಕ್ಷೆ ತಪ್ಪಿದ್ದಲ್ಲ ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸಬೇಕು ಎಂದು ತಿಳಿಸಿದರು.

ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ಭಯೋತ್ಪಾದಕರು ನಡೆಸಿದ ಸರಣಿ ಬಾಂಬ್ ದಾಳಿ ಅತ್ಯಂತ ಅಮಾನವೀಯ ಕೃತ್ಯ. ಮುಗ್ಧ ಜನತೆಯನ್ನು ಈ ರೀತಿ ಬಲಿ ತೆಗೆದುಕೊಳ್ಳುವುದು ಅಕ್ಷಮ್ಯ ಅಪರಾಧ. ಕಾನೂನು-ಸುವ್ಯವಸ್ಥೆ ಬಿಗಿಗೊಳಿಸುವ ಮೂಲಕ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು.

ಮೈಸೂರು ವಿವಿ ಸಂಜೆ ಕಾಲೇಜು ಪ್ರಾಂಶುಪಾಲ ಡಾ.ಆಂಜನೇಯ, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕೋಶದ ಉಪಕುಲಸಚಿವ ಡಾ.ಎಸ್. ಮಹದೇವಮೂರ್ತಿ, ಮಹಾರಾಣಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಡಾ.ಸಿದ್ದರಾಜು, ಮಹಾರಾಜ ಕಾಲೇಜು ಉಪನ್ಯಾಸಕಿ ಡಾ.ದಿನಮಣಿ, ವೇದಿಕೆ ಅಧ್ಯಕ್ಷ ಆರ್.ವಾಸುದೇವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.