ಉರುಳಿಗೆ ಸಿಲುಕಿ ಗಂಡು ಚಿರತೆ ಸಾವು

ಸಕಲೇಶಪುರ: ಬೇಟೆಗಾರರು ಜಮೀನೊಂದರ ಬೇಲಿಯಲ್ಲಿ ಇಟ್ಟಿದ್ದ ಉರುಳಿಗೆ ಸಿಲುಕಿ 4 ವರ್ಷದ ಗಂಡು ಚಿರತೆ ಸಾವನ್ನಪ್ಪಿರುವ ಘಟನೆ ಸಕಲೇಶಪುರ ತಾಲೂಕಿನ ಅತ್ತಿಬೀಡು ಗ್ರಾಮದ ಬಳಿ ನಡೆದಿದೆ.

ತಾಲೂಕಿನ ದೇವಲಕೆರೆ ಸಮೀಪವಿರುವ ಅತ್ತಿಬೀಡು ಗ್ರಾಮದ ಜಮೀನೊಂದರಲ್ಲಿ ಬೇಟೆಗಾರರು ಕಾಡುಹಂದಿ ಬೇಟೆಗೆ ಉರುಳು ಹಾಕಿದ್ದರು. ಆದರೆ, ಬುಧವಾರ ರಾತ್ರಿ ಆಹಾರ ಅರಸಿ ಬಂದ 4 ವರ್ಷದ ಗಂಡು ಚಿರತೆ ಉರುಳಿಗೆ ಸಿಕ್ಕಿ ಹಾಕಿ ಕೊಂಡಿದೆ. ಇದರಿಂದ ಬಿಡಿಸಿಕೊಳ್ಳಲು ಹರಸಾಹಸ ಪಟ್ಟಿರುವ ಚಿರತೆ ಅತ್ತಿಂದತ್ತ ಎಳೆದಾಡಿದೆ. ಆದರೆ, ಉರುಳು ಚಿರತೆಯ ಸೊಂಟದ ಭಾಗವನ್ನು ಗಟ್ಟಿಯಾಗಿ ಬಿಗಿದು ಕೊಂಡಿದ್ದರಿಂದ ಬಿಡಿಸಿಕೊಳ್ಳಲಾಗದೇ ಪರದಾಡುತ್ತಿದ್ದ ಚಿರತೆಯ ಚೀರಾಟ ವನ್ನು ಗಮನಿಸಿದ ಸ್ಥಳೀಯ ಗ್ರಾಮಸ್ಥರು ಸ್ಥಳಕ್ಕೆ ಬಂದು ಉರುಳಿನಿಂದ ಚಿರತೆಯನ್ನು ಬಿಡಿಸುವ ಪ್ರಯತ್ನ ಮಾಡಿದ್ದಾರೆ.

ಈ ವೇಳೆ ಜನರನ್ನು ಕಂಡ ಚಿರತೆ ಮತ್ತಷ್ಟು ಗಾಬರಿಯಾಗಿ ಅತ್ತಿಂದತ್ತ ಎಗರಾಡಿದೆ. ಇದರಿಂದ ಚಿರತೆ ಮತ್ತಷ್ಟು ನಿತ್ರಾಣಗೊಂಡಿದೆ ಎನ್ನಲಾಗಿದೆ.ಚಿರತೆಯ ಸ್ಥಿತಿಯನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಯ ಅಧಿ ಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಚಿರತೆ ಯನ್ನು ರಕ್ಷಿಸಲು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾ ಚರಣೆ ಆರಂಭಿಸುವ ಮುನ್ನವೇ ಚಿರತೆ ಮೃತಪಟ್ಟಿದೆ. ನಂತರ ಚಿರತೆಯ ಕಳೇ ಬರವನ್ನು ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಅಲ್ಲದೇ ಉರುಳು ಹಾಕಿದ್ದ ಬೇಟೆಗಾರರನ್ನು ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ.