ಚಿಕ್ಕಮ್ಮನ ಹತ್ಯೆಗೆ ಯತ್ನಿಸಿದವನಿಗೆ 10 ವರ್ಷ ಜೈಲು

ಮೈಸೂರು, ಡಿ.12-ದೈಹಿಕ ಸಂಪರ್ಕಕ್ಕೆ ಒಪ್ಪದ ಚಿಕ್ಕಮ್ಮನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದವನಿಗೆ 10 ವರ್ಷ ಕಠಿಣ ಶಿಕ್ಷೆ ಮತ್ತು 4.10 ಲಕ್ಷ ರೂ. ದಂಡ ವಿಧಿಸಿ ಮೈಸೂರಿನ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೊಸಮನಿ ಪುಂಡಲಿಕ ಅವರು ತೀರ್ಪು ನೀಡಿದ್ದಾರೆ.

ಪಿರಿಯಾಪಟ್ಟಣ ತಾಲೂಕು ಹರಟೆ ಮಲ್ಲರಾಜಪಟ್ಟಣದ ನಿವಾಸಿ ಶಿವು ಅಲಿ ಯಾಸ್ ಶಿವರಾಜ ಶಿಕ್ಷೆಗೆ ಗುರಿಯಾದವನಾಗಿದ್ದು, ಈತ ದೈಹಿಕ ಸಂಪರ್ಕಕ್ಕೆ ಒಪ್ಪಲಿಲ್ಲ ಎಂಬ ಕಾರಣದಿಂದ 2016ರ ಜೂನ್ 13ರಂದು ತನ್ನ ಚಿಕ್ಕಮ್ಮ ಶ್ರೀಮತಿ ಮಾದೇವಿ ಅವರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ಮಾದೇವಿ ಅವರು ಬಲಕೈ ತೋಳಿನವರೆಗೆ ಶಾಶ್ವತವಾಗಿ ಕಳೆದುಕೊಂಡಿದ್ದಾರೆ.

ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯ ಅಂದಿನ ಸಬ್ ಇನ್ಸ್‍ಪೆಕ್ಟರ್ ರವಿಕಿರಣ್ ಅವರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಶಿವು ಅಲಿಯಾಸ್ ಶಿವರಾಜುವಿಗೆ 10 ವರ್ಷ ಕಠಿಣ ಶಿಕ್ಷೆ ಮತ್ತು 4.10 ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡದ ಹಣವನ್ನು ಪರಿಹಾರದ ರೂಪದಲ್ಲಿ ಗಾಯಾಳು ಮಾದೇವಿ ಅವರಿಗೆ ಪಾವತಿಸುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕರಾದ ಎಲ್.ನಾಗರಾಜ ವಾದ ಮಂಡಿಸಿದ್ದರು.