ಮಂಡ್ಯ ಜಿಲ್ಲೆಯ ವಿಜ್ಞಾನಿಗೆ ಒಲಿದ ‘ಬಾಲ ಪುರಸ್ಕಾರ’

ಮಂಡ್ಯ: ರಾಜ್ಯದ ಹೆಮ್ಮೆಯ ಪುತ್ರ, ಮಂಡ್ಯ ಜಿಲ್ಲೆಯ ಯುವ ವಿಜ್ಞಾನಿ ಸಿ.ಎಸ್.ಮೊಹಮ್ಮದ್ ಸುಹೇಲ್ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಯವರಿಂದ ಪ್ರಧಾನ್ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ಸ್ಥಳೀಯ ಮಟ್ಟದಿಂದ ಸಂಶೋಧನೆಗಳನ್ನು ಆರಂಭಿಸಿ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮೊಹಮ್ಮದ್ ಸುಹೇಲ್‍ಗೆ ಈ ಬಾರಿಯ ನಾವೀನ್ಯದ (ಇನೋವೆಷನ್) ಕ್ಷೇತ್ರದಲ್ಲಿ ಬಾಲ ಪುರಸ್ಕಾರ ಪ್ರಶಸ್ತಿ ಒಲಿದಿದೆ.

ನಾವೀನ್ಯತೆ, ವಿದ್ವಾಂಸ, ಕ್ರೀಡಾ, ಕಲೆ ಮತ್ತು ಸಂಸ್ಕೃತಿ, ಸಾಮಾಜಿಕ ಸೇವೆ ಮತ್ತು ಶೌರ್ಯ ಕ್ಷೇತ್ರಗಳಲ್ಲಿ ಈ ವರ್ಷ ಒಟ್ಟು 26 ಮಕ್ಕಳಿಗೆ ಪ್ರಧಾನ್ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ನೀಡಲಾಗಿದ್ದು, ತನ್ನ 18ನೇ ವಯಸ್ಸಿನಲ್ಲೇ 4 ಅಂತಾರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಸುಹೇಲ್ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಸಿಕ್ಕಿದೆ. ಬಾಲ್ಯದಿಂದಲೂ ವಿಜ್ಞಾನದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಮೊಹಮ್ಮದ್ ಸುಹೇಲ್ ನಾವೀನ್ಯದ ಕ್ಷೇತ್ರದಿಂದ ಈ ಕೀರ್ತಿಗೆ ಪಾತ್ರರಾಗಿದ್ದಾರೆ. ಇದೇ ಜನವರಿ 26ರ ಗಣರಾಜ್ಯೋತ್ಸವದಂದು ದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರಪತಿಗಳಿಂದ ನ್ಯಾಷನಲ್ ಚೈಲ್ಡ್ ಎಕ್ಸ್‍ಪ್ಷನಲ್ ಅವಾರ್ಡ್ ಇನ್ ಇನೋವೇಷನ್ ಪ್ರಶಸ್ತಿ ಸ್ವೀಕರಿಸಲಿದ್ದಾನೆ. ಈತ ಶ್ರೀರಂಗಪಟ್ಟಣದ ಹುಡುಗ. ಸಾಹಿತಿ ದಂಪತಿಯಾದ ಅನಾರ್ಕಲಿ ಸಲೀಂ ಚಿಣ್ಯ ಮತ್ತು ಡಾ.ಪವೀರ್ನಾ ಸಲೀಂ ಅವರ ಪುತ್ರ. ಪ್ರಸ್ತುತ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ. ಮೈನರ್ ಪ್ಲಾನೆಟ್ ಒಂದಕ್ಕೆತನ್ನ ಹೆಸರು ಇಡುವಂತಹ ಸಾಧನೆ ಮಾಡಿರುವ ಈತ ಈಗಲೇ ಸೈಂಟಿಫಿಕ್ ರೀಸರ್ಚ್ ರಾಯಲ್ ಸೊಸೈಟಿಯ ಗೌರವ ಸದಸ್ಯತ್ವವನ್ನೂ ಪಡೆದಿದ್ದಾನೆ.