ಸುಮಲತಾ ಬೆಂಬಲಿಸಲು ಮಂಡ್ಯದ ಯುವ ಕಾಂಗ್ರೆಸ್ ಮುಖಂಡರ ನಿರ್ಧಾರ

ಮಂಡ್ಯ,: ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಕಾರ್ಯ ನಿರ್ವಹಿಸುತ್ತಿರುವ ಕೆಪಿಸಿಸಿ ಸದಸ್ಯ ಇಂಡುವಾಳು ಸಚ್ಚಿದಾನಂದ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದು, ಇನ್ನೂ ಕೆಲವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಕಾಂಗ್ರೆಸ್ ಮುಂದಾಗಿರುವುದಕ್ಕೆ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಾಮೂಹಿಕ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ.

ಮಂಡ್ಯದಲ್ಲಿ ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿದ ಮಂಡ್ಯ ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಮಳವಳ್ಳಿ ಅಧ್ಯಕ್ಷ ಕೃಷ್ಣೇ ಗೌಡ, ನಾಗಮಂಗಲ ಅಧ್ಯಕ್ಷ ಶರತ್ ರಾಮು, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರವಿಂದ್, ವಕ್ತಾರ ಹೆಚ್.ಪಿ.ಶಿವಕುಮಾರ್, ಸೋಷಿಯಲ್ ಮೀಡಿಯಾ ಘಟಕದ ಪ್ರದೀಪ್ ಕುಮಾರ್, ಎನ್‍ಐಸಿಯು ಜಿಲ್ಲಾಧ್ಯಕ್ಷ ಮಂಜುನಾಥ್, ನಗರ ಸಭಾಧ್ಯಕ್ಷ ಅನಿಲ್‍ಕುಮಾರ್ ಅವರುಗಳು ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ.

ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನೇ ಬೆಂಬಲಿಸುತ್ತೇವೆ ಎಂದು ಘೋಷಿಸಿದರು. ಸುಮಲತಾ ಪರ ಕಾರ್ಯ ನಿರ್ವಹಿಸು ತ್ತಿರುವವರ ವಿರುದ್ಧ ಪಕ್ಷದ ಜಿಲ್ಲಾಧ್ಯಕ್ಷರು ಕ್ರಮ ಕೈಗೊಳ್ಳಲು ಮುಂದಾಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಜಿಲ್ಲಾಧ್ಯಕ್ಷರು ಸ್ವ-ಹಿತಾಸಕ್ತಿಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಮಲತಾ ಪರವಾಗಿ ಕೆಲಸ ಮಾಡುತ್ತಿದ್ದಾರೆಂದು ಕೆಲವರ ವಿರುದ್ಧ ಮಾತ್ರ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿರುವ ಅವರಿಗೆ ಗಟ್ಟಿತನವಿದ್ದರೆ 80ರಿಂದ 90 ಮಂದಿಯನ್ನು ಉಚ್ಛಾಟನೆ ಮಾಡಬೇಕಾಗುತ್ತದೆ. ಅದಕ್ಕೆ ಅವರು ಸಿದ್ಧರಿದ್ದಾರೆಯೇ? ಎಂದು ಪ್ರಶ್ನಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಮರಾವತಿ ಚಂದ್ರಶೇಖರ್, ಆತ್ಮಾನಂದ ಮುಂತಾದವರು ಒಳ ಒಪ್ಪಂದ ಮಾಡಿ ಕೊಂಡ ಪರಿಣಾಮವಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲನನುಭವಿಸಬೇಕಾಯಿತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾಜಿ ಸಂಸದೆ ರಮ್ಯ ವಿರುದ್ಧ ಅಮರಾವತಿ ಚಂದ್ರಶೇಖರ್ ಮತ್ತು ಅವರ ಆಪ್ತರು ಕೆಲಸ ಮಾಡಿ ಅವರನ್ನು ಸೋಲಿಸಿದ್ದರು. ನಿಜಕ್ಕೂ ಅವರು ಮಾಡಿದ್ದು ಪಕ್ಷ ವಿರೋಧಿ ಚಟುವಟಿಕೆಯೇ ಹೊರತು, ನಾವುಗಳು ಜಿಲ್ಲೆಯಲ್ಲಿ ಕಾಂಗ್ರೆಸ್ ಅಸ್ತಿತ್ವ ಉಳಿಸುವುದಕ್ಕಾಗಿ ಸುಮಲತಾ ಅವರಿಗೆ ಬೆಂಬಲ ನೀಡುತ್ತಿದ್ದೇವೆ ಎಂದರು.