ಸೆ.22ರಿಂದ ಕೆ.ಆರ್.ಕ್ಷೇತ್ರದಲ್ಲಿ ಮನೆ ಮನೆ ದಸರಾ

ಮೈಸೂರು, ಸೆ.13(ಎಸ್‍ಬಿಡಿ)- ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಸೆ.22ರಿಂದ 27ರೊಳಗೆ ಮನೆ ಮನೆ ದಸರಾ ನಡೆಸುವಂತೆ ಶಾಸಕ ಎಸ್.ಎ. ರಾಮದಾಸ್ ಹೇಳಿದರು. ಶುಕ್ರವಾರ ಕ್ಷೇತ್ರ ವ್ಯಾಪ್ತಿಯ ನಗರಪಾಲಿಕೆ ಸದಸ್ಯರೊಂದಿಗೆ ಸಭೆ ನಡೆಸಿದ ಅವರು, ಕ್ಷೇತ್ರದ ಎಲ್ಲಾ 19 ವಾರ್ಡ್‍ಗಳಲ್ಲೂ ಸೆ.22ರಿಂದ 27 ರೊಳಗೆ ಮನೆ ಮನೆ ದಸರಾ ಏರ್ಪ ಡಿಸಬೇಕು. ಆಯಾ ವಾರ್ಡ್‍ನ ಕಾರ್ಪೊರೇಟರ್, ರೆವಿನ್ಯೂ ಇನ್ಸ್‍ಪೆಕ್ಟರ್ ಹಾಗೂ ಇಂಜಿನಿಯರ್ ಸಮನ್ವಯತೆಯಿಂದ ಕಾರ್ಯಕ್ರಮ ರೂಪಿಸಬೇಕೆಂದು ಸಲಹೆ ನೀಡಿ ದರು. ಮನೆ ಮನೆಗೆ ಕರಪತ್ರ ಹಂಚುವ ಮೂಲಕ ಎಲ್ಲರಿಗೂ ಕಾರ್ಯಕ್ರಮಗಳ ಬಗ್ಗೆ ತಿಳಿಸಬೇಕು. ರಂಗೋಲಿ ಸ್ಪರ್ಧೆ, ಆಟೋಟ, ಯೋಗಾಸನ, ಚಿತ್ರಕಲೆ ಸ್ಪರ್ಧೆ ಸೇರಿದಂತೆ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಬೇಕು. ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ಪ್ರತ್ಯೇಕ ಸ್ಪರ್ಧೆ ನಡೆಸಿ, ಪ್ರತೀ ಸ್ಪರ್ಧೆಯಲ್ಲಿ 3 ಬಹುಮಾನಗಳನ್ನು ನೀಡಬೇಕು. ಸರ್ಕಾರದಿಂದ ಮನೆ ಮನೆ ದಸರಾ ನಡೆಸಲು ಪ್ರತೀ ವಾರ್ಡ್‍ಗೆ 1.50 ಲಕ್ಷ ರೂ. ಅನುದಾನ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆ. ಇದರೊಂದಿಗೆ ಪ್ರಾಯೋಜಕರ ಸಹಕಾರ ಪಡೆದು, ದಸರಾ ಸಂಭ್ರಮದಲ್ಲಿ ಎಲ್ಲರನ್ನೂ ಒಗ್ಗೂಡಿಸುವ ನಿಟ್ಟಿನಲ್ಲಿ ಉತ್ತಮ ರೀತಿಯ ಕಾರ್ಯಕ್ರಮ ನಡೆಸಬೇಕೆಂದು ತಿಳಿಸಿದರು. ಬಿ.ವಿ.ಮಂಜುನಾಥ್, ಶಿವಕುಮಾರ್, ಸುನಂದಾ ಪಾಲನೇತ್ರ, ರಮೇಶ್, ಪಲ್ಲವಿ ಬೇಗಂ. ಶೋಭಾ, ಮ.ವಿ.ರಾಂಪ್ರಸಾದ್ ಸೇರಿದಂತೆ ಪಕ್ಷಾತೀತವಾಗಿ ಬಹುತೇಕ ಕಾರ್ಪೊರೇಟರ್‍ಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.