ಸಿಎಂ ಬೆಂಬಲಿಸುವಂತೆ ಬಿಎಸ್‍ಪಿ ಶಾಸಕ ಎನ್.ಮಹೇಶ್‍ಗೆ ಮಾಯಾವತಿ ಸೂಚನೆ

ಬೆಂಗಳೂರು: ಮೈತ್ರಿ ಸರ್ಕಾರದ ಪರವಾಗಿ ಮತ ಚಲಾಯಿ ಸುವಂತೆ ಬಿಎಸ್‍ಪಿ ಶಾಸಕ ಎನ್.ಮಹೇಶ್ ಅವರಿಗೆ ಪಕ್ಷದ ವರಿಷ್ಠೆ ಮಾಯಾವತಿ ಸೂಚಿಸಿದ್ದಾರೆ. ಮೈತ್ರಿ ಸರ್ಕಾರವನ್ನು ಬೆಂಬಲಿಸಿದ್ದ ಬಹುಜನ ಸಮಾಜವಾದಿ ಪಕ್ಷದ ಶಾಸಕ ಎನ್.ಮಹೇಶ್ ವಿಶ್ವಾಸಮತ ಯಾಚನೆ ವೇಳೆ ಸದನಕ್ಕೆ ಗೈರು ಹಾಜರಾಗುವುದಾಗಿ ಭಾನುವಾರ ತಿಳಿಸಿದ್ದರು. ಈ ಮೂಲಕ ಮೈತ್ರಿ ಸರ್ಕಾರಕ್ಕೆ ಮತ್ತೊಂದು ಆಘಾತ ನೀಡಿದ್ದರು. ಇದೀಗ ಶಾಸಕ ಎನ್.ಮಹೇಶ್ ಅವರ ಹೇಳಿಕೆಯಿಂದ ಆತಂಕಕ್ಕೆ ಒಳಗಾಗಿದ್ದ ಜೆಡಿಎಸ್ ನಾಯಕರು ತಕ್ಷಣ ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡರ ಮೂಲಕ ಬಿಎಸ್‍ಪಿ ವರಿಷ್ಠೆ ಮಾಯಾವತಿ ಅವರನ್ನು ಸಂಪರ್ಕಿಸಿ ಮಹೇಶ್ ಅವರಿಗೆ ಸ್ಪಷ್ಟ ಸೂಚನೆ ನೀಡುವಂತೆ ಮನವಿ ಮಾಡಿದ್ದರು. ಅದರಂತೆ ಇಂದು ಸಂಜೆ ಮಾಯಾವತಿ ಅವರು ಮಹೇಶ್ ಅವರಿಗೆ ಈ ಸೂಚನೆ ನೀಡಿ ದ್ದಾರೆ. ಈ ಹಿಂದೆ ಮೈತ್ರಿ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ರಾಗಿದ್ದ ಎನ್.ಮಹೇಶ್ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಚಿವ ಸ್ಥಾನ ತೊರೆದ ನಂತರ ಮೈತ್ರಿ ಸರ್ಕಾರದಿಂದ ಅಂತರ ಕಾಯ್ದುಕೊಂಡಿ ದ್ದರು. ಆದರೆ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿರಲಿಲ್ಲ.