ಮೈಸೂರಿನ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿಗೆ ಪಾಲಿಕೆ ಸದಸ್ಯ ಎಂ.ಡಿ.ನಾಗರಾಜು ಗುದ್ದಲಿ ಪೂಜೆ

ಮೈಸೂರು: ಮೈಸೂರಿನ ಬಹು ನಿರೀಕ್ಷಿತ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿಗೆ ಕೊನೆಗೂ ಸೋಮವಾರ ಚಾಲನೆ ದೊರೆಯಿತು. ರಸ್ತೆಯ ಪಂಚ ಮುಖಿ ಆಂಜನೇಯಸ್ವಾಮಿ ದೇವಸ್ಥಾನದ ಕಾಂಪೌಂಡ್ ಬಳಿ ಮಹಾನಗರಪಾಲಿಕೆ ಸದಸ್ಯ ಎಂ.ಡಿ. ನಾಗರಾಜು ಅವರು ಗುದ್ದಲಿ ಪೂಜೆ ನೆರವೇರಿಸಿದರು.

ರಸ್ತೆ ವಿಭಜಕ ಸೇರಿದಂತೆ ಒಟ್ಟು 60 ಅಡಿ ಅಗಲದ 0.8 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ 4 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮೈಸೂರು ಮಹಾನಗರಪಾಲಿಕೆ ಕಾಮಗಾರಿ ಕೈಗೆತ್ತಿಕೊಂಡಿದೆ. ನೆಹರೂ ವೃತ್ತ (ಮುಖ್ಯ ಅಂಚೆ ಕಚೇರಿ ವೃತ್ತ)ದಿಂದ ಆಯುರ್ವೇದ ಆಸ್ಪತ್ರೆ ವೃತ್ತದವರೆಗಿನ ರಸ್ತೆ ಕಾಮಗಾರಿಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಲು ನಿರ್ಧರಿಸಿರುವುದಾಗಿ ಪಾಲಿಕೆ ವಲಯ ಕಚೇರಿ-6ರ ಅಭಿವೃದ್ಧಿ ಅಧಿಕಾರಿ ಎಚ್.ನಾಗರಾಜು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಈ ರಸ್ತೆಯಲ್ಲಿ ಸಂಚಾರ ದಟ್ಟಣೆಯಿಂ ದಾಗಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಕೆಲ ವರ್ಷಗಳ ಹಿಂದಷ್ಟೇ ನಗರ ಸಂಚಾರ ಪೊಲೀಸರು ಏಕಮುಖ ರಸ್ತೆಯಾಗಿ ಪರಿವರ್ತಿಸಿದ್ದರು. ರಸ್ತೆ ಅಗಲೀಕರಣಕ್ಕಾಗಿ ರಸ್ತೆಯ ಇಕ್ಕೆಲಗಳ ಕಟ್ಟಡಗಳನ್ನು ತೆರವುಗೊಳಿಸಬೇಕಾ ಗಿತ್ತು. ಇದಕ್ಕಾಗಿ ಕಟ್ಟಡ ಮತ್ತು ನಿವೇಶನ ಮಾಲೀಕರೊಂದಿಗೆ ಸಭೆ ನಡೆಸಿ ಅವರಿಗೆ ನೀಡಬೇಕಾದ ಪರಿಹಾರ ಮತ್ತು ಒಪ್ಪಿಗೆ ಯೊಂದಿಗೆ ಕಾಮಗಾರಿಗೆ ಚಾಲನೆ ದೊರೆತಿದೆ.

ರಸ್ತೆಯಲ್ಲಿರುವ ಕಟ್ಟಡ, ನಿವೇಶನ ಮಾಲೀಕರಿಗೆ ಪರಿಹಾರಕ್ಕಾಗಿ 44 ಕೋಟಿ ರೂ.ಮಂಜೂರಾಗಿದ್ದು, ಶೇ.90ರಷ್ಟು ಮಾಲೀಕರು ಒಪ್ಪಿಗೆ ನೀಡಿದ್ದಾರೆ. ಸದ್ಯದಲ್ಲೇ ಕಟ್ಟಡಗಳ ತೆರವು ಕಾರ್ಯ ಕೈಗೊಳ್ಳ ಲಾಗುತ್ತದೆ ಎಂದು ನಗರಪಾಲಿಕೆ ಮೂಲಗಳು ತಿಳಿಸಿವೆ.

ಕಾಮಗಾರಿಗೆ ಗುದ್ದಲಿಪೂಜೆ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯ ಎಂ.ಡಿ. ನಾಗ ರಾಜು ಅವರೊಂದಿಗೆ ದೇವಸ್ಥಾನ ಸಮಿತಿ ಮುಖ್ಯಸ್ಥ ಎಸ್. ಶಿವಶಂಕರ್, ಚಂದ್ರಶೇಖರ್ ಜಾಧವ್, ವೈ.ಎಸ್. ನಾಗೇಶ್, ಕಿರಿಯ ಇಂಜಿನಿಯರ್ ಕೆ.ಆರ್. ಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.