ಕಿಕ್ ಬಾಕ್ಸಿಂಗ್‍ನಲ್ಲಿ ಮೈಸೂರಿನ 8 ಬಾಕ್ಸರ್‍ಗಳಿಗೆ ಪದಕ

ಮೈಸೂರು,ಜು.28(ವೈಡಿಎಸ್)-ಹರಿಯಾಣದ ಮಹರ್ಷಿ ದಯಾನಂದ ವಿಶ್ವ ವಿದ್ಯಾನಿಲಯದಲ್ಲಿ ನಡೆದ ವಾಕೋ ಇಂಡಿಯಾ ಸೀನಿಯರ್ ನ್ಯಾಷನಲ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್‍ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಮೈಸೂರಿನ 8 ಮಂದಿ ಬಾಕ್ಸರ್‍ಗಳು ಗೆಲುವು ಸಾಧಿಸಿ, 2ಚಿನ್ನ, 1ಬೆಳ್ಳಿ ಮತ್ತು 5ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ.

2019ರ ಜು.18ರಿಂದ 21ರವರೆಗೆ ಹರಿ ಯಾಣದ ರೋತಕ್‍ನ ಮಹರ್ಷಿ ದಯಾನಂದ ವಿವಿಯ ಕ್ರೀಡಾ ಸಂಕೀರ್ಣ ದಲ್ಲಿ ನಡೆದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಿದ್ದ 11 ಮಂದಿಯಲ್ಲಿ 8 ಮಂದಿ ವಿವಿಧ ವಿಭಾಗದಲ್ಲಿ ಗೆಲುವು ಸಾಧಿಸುವ ಮೂಲಕ ಮೈಸೂರಿಗೆ ಕೀರ್ತಿ ತಂದಿದ್ದಾರೆ.

ರಾಜ್ಯವನ್ನು ಪ್ರತಿನಿಧಿಸಿದ್ದ ವಿವೇಕಾನಂದ ನಗರದ ಎಎಸ್‍ಡಿ ಫೈಟ್ ಕ್ಲಬ್‍ನ ಬಾಕ್ಸರ್ ಗಳಾದ ಸುಹಾಸ್(ಕಿಕ್‍ಲೈಟ್), ಪಿ.ಟಿ.ಚೇತನ್ (ಕೆ1) ಚಿನ್ನ, ಡಿ.ಪೃಥ್ವಿ(ಲೈಟ್ ಕಾಂಟ್ಯಾಕ್ಟ್) ಬೆಳ್ಳಿ, ಎಸ್.ಕೆ.ಪವನ್, ಗಿರೀಶ್, ಎಂ. ಯಶ್ವಂತ್ (ಲೋ ಕಿಕ್), ಎಸ್. ತರುಣ್, ಸೌರ್ಯಾನ್ಸ್ ಪ್ರತಾಪ್‍ಸಿಂಗ್(ಲೈಟ್ ಕಾಂಟ್ಯಾಕ್ಟ್) ಕಂಚಿನ ಪದಕ ಗಳಿಸಿದ್ದಾರೆ.

4 ದಿನಗಳ ಕಾಲ ನಡೆದ ಕಿಕ್‍ಬಾಕ್ಸಿಂಗ್ ನಲ್ಲಿ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಬಿಹಾರ, ಒರಿಸ್ಸಾ, ಹಿಮಾಚಲ ಪ್ರದೇಶ, ದೆಹಲಿ, ಪಂಜಾಬ್, ರಾಜಸ್ಥಾನ, ಮಹಾರಾಷ್ಟ್ರ, ಉತ್ತರಖಂಡ್, ಸಿಕ್ಕಿಂ, ಮೇಘಾಲಯಾ ಮತ್ತು ಜಮ್ಮು ಕಾಶ್ಮೀರ ಸೇರಿದಂತೆ 25ಕ್ಕೂ ಹೆಚ್ಚು ರಾಜ್ಯಗಳಿಂದ 400 ಮಂದಿ ಬಾಕ್ಸರ್‍ಗಳು ಪಾಲ್ಗೊಂಡಿದ್ದರು.