ನೀರಿಲ್ಲದೇ ಸೊರಗುತ್ತಿರುವ ಮೀಡಿಯನ್ ಗಿಡಗಳು

ಮೈಸೂರು: ಹಸಿರೀಕರಣ ಉಳಿಸಿಕೊಂಡು ನಗರದ ಸೌಂದರ್ಯ ವೃದ್ಧಿಸುವ ಸಲುವಾಗಿ ಮೈಸೂರಿನ ಕೆಲವು ಕಡೆ ರಸ್ತೆ ವಿಭಜಕದಲ್ಲಿ ಬೆಳೆಸಿದ್ದ ಗಿಡಗಳು ನೀರುಣಿಸದ ಕಾರಣ ಒಣಗುತ್ತಿವೆ. ಮೈಸೂರಿನ ಬಂಬೂ ಬಜಾರ್ ಬಳಿ ಅಂಧರ ಶಾಲೆ ಎದುರು ರಸ್ತೆ ವಿಭಜಕದಲ್ಲಿ ಬೆಳೆಸಿದ್ದ ಗಿಡಗಳು ಒಣಗಿ ಸೊರಗುತ್ತಿದ್ದು, ಪಾಲಿಕೆ ವತಿಯಿಂದ ಆಗಿಂದಾಗ್ಗೆ ನೀರು ಹಾಕದ ಕಾರಣ ಬೇಸಿಗೆ ಬಿಸಿಲಿಗೆ ಗಿಡಗಳು ಒಣಗಿವೆ.

ಸ್ವಚ್ಛ ಭಾರತ ಅಭಿಯಾನದಡಿ ಸ್ವಚ್ಛ ಸರ್ವೇಕ್ಷಣೆಗೂ ಮುಂಚೆ ಮೈಸೂರು ಮಹಾನಗರ ಪಾಲಿಕೆಯು ಬಂಬೂ ಬಜಾರ್ ರಸ್ತೆ, ಹಾರ್ಡಿಂಜ್ ಸರ್ಕಲ್ ನಿಂದ ಗನ್‍ಹೌಸ್ ಕಡೆಗೆ ಹೋಗುವ ಬಿ.ಎನ್.ರಸ್ತೆ, ಹುಣಸೂರು ರಸ್ತೆ ಸೇರಿ ದಂತೆ ಹಲವು ರಸ್ತೆಗಳ ವಿಭಜಕ (ಮೀಡಿ ಯನ್)ಗಳಲ್ಲಿ ಪಾಟ್‍ನಲ್ಲಿ ಗಿಡಗಳನ್ನು ಬೆಳೆಸುತ್ತಿತ್ತು. ಆರಂಭದಲ್ಲಿ ಟ್ಯಾಂಕರ್ ಮೂಲಕ ಪಾಟ್‍ಗಳಿಗೆ ನೀರು ಹಾಕ ಲಾಗುತ್ತಿತ್ತು. ನಂತರ ಬೇಸಿಗೆ ಬಿಸಿಲು ಹೆಚ್ಚಾದ್ದರಿಂದ ಬಂಬೂ ಬಜಾರ್ ಬಳಿ ಸಯ್ಯಾಜಿರಾವ್ ರಸ್ತೆಯಲ್ಲಿ ಗಿಡಗಳು ನೀರು ಸಾಲದೆ ಒಣಗುತ್ತಿರುವುದು ಕಂಡು ಬಂದಿದೆ. ಅರಮನೆ ಪೂರ್ವ ಭಾಗದ ರಸ್ತೆ ಮತ್ತು ಹುಣಸೂರು ರಸ್ತೆಯ ವಿಭಜಕಗಳ ಪಾಟ್‍ಗಳಲ್ಲಿರುವ ಗಿಡಗಳು ಮಾತ್ರ ಹಸಿರಾಗಿವೆ. ಪಾಲಿಕೆಯು ನಿರಂತರವಾಗಿ ಮಳೆ ಬರುವವರೆಗೆ ನೀರು ಹಾಕಿದರೆ ಮಾತ್ರ ಗಿಡಗಳು ಹಸಿರಾಗಿ ಕಾಣುತ್ತವೆ. ಇಲ್ಲವಾದರೆ ಒಣಗಿ ನಗರದ ಅಂದಗೆಡಿಸುತ್ತವೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜ್, ತೋಟಗಾರಿಕೆ ವಿಭಾಗದ ಸಿಬ್ಬಂದಿ ವಾರಕ್ಕೆರಡು ಬಾರಿ ನೀರು ಹಾಕುತ್ತಿದ್ದರು. ಬಂಬೂ ಬಜಾರ್ ಬಳಿ ಗಿಡಗಳು ಒಣಗಿರುವ ಬಗ್ಗೆ ಪರಿಶೀಲಿಸಿ ತಕ್ಷಣವೇ ಕ್ರಮ ವಹಿಸುತ್ತೇವೆ. ನಗರವನ್ನು ಹಸಿರಾಗಿರಿಸಬೇಕೆಂಬ ಉದ್ದೇಶದಿಂದಲೇ ಹಾಕಿರುವ ಗಿಡಗಳನ್ನು ನೀರು ಹಾಕಿ ನಿರ್ವಹಿಸುವುದು ಅಗತ್ಯವಾಗಿದೆ ಎಂದರು.